top of page

Building Block - 3: Hypothesis

Soumya Kumar

ಆಧಾರ ಕಲ್ಪನೆ (Hypothesis)


ಸಿದ್ದಾಂತವೆಂಬ ಕಟ್ಟಡದ ಕಲ್ಲುಗಳೆಂದರೆ:

೧. ಪರಿಕಲ್ಪನೆ

೨. ಕಲ್ಪನೆ

೩. ಆಧಾರ ಕಲ್ಪನೆ

೪. ಮಾಡಲ್

ವಿಚಾರ ಮಾಡುವುದಕ್ಕೆ ಆಧಾರವಾಗಿ ಇಟ್ಟುಕೊಂಡಿರುವ ಕಲ್ಪನೆಯೇ ಆಧಾರ ಕಲ್ಪನೆ ಅಥವಾ ಪ್ರಾಕ್ ಕಲ್ಪನೆ. ಆಂಗ್ಲ ಭಾಷೆಯಲ್ಲಿ ಆಧಾರ ಕಲ್ಪನೆಯನ್ನು ಹೈಪಾತಿಸಿಸ್‍ (hypothesis) ಎನ್ನುತ್ತೇವೆ.

ಕಲ್ಪನೆ ಹಾಗು ಆಧಾರ ಕಲ್ಪನೆಗಳೆರೆಡೂ ಬೇರೆ-ಬೇರೆ ಪರಿಕಲ್ಪನೆಗಳು. ಕಲ್ಪನೆಯನ್ನು ಪರಿಶೀಲನೆಗೆ ಒಳಪಡಿಸುವುದಿಲ್ಲ. ಅದನ್ನು ನೇರವಾಗಿ ಒಪ್ಪಿಕೊಳ್ಳಲಾಗುವುದು. ಅವು ಕೇವಲ ನಮ್ಮ ಸಂಶೋಧನೆಯನ್ನು ಪ್ರಭಾವಿಸುತ್ತದೆ. ಈ ಪ್ರಭಾವವನ್ನು ಗುರುತಿಸಿದರೆ, ಸಂಶೋಧನೆಯ ಫಲಿತಾಂಶ ಹೆಚ್ಚು ಸಮರ್ಪಕತೆಯನ್ನು ಪಡೆಯಬಹುದು.

ಆಧಾರ ಕಲ್ಪನೆಗಳು ಪರಿಶೀಲನೆಗೆ ಒಳಪಡುವಂತಹ ಕಲ್ಪನೆಗಳಾಗಿರುತ್ತವೆ. ನಿಜ ಸಂಗತಿ ಹೀಗಿರಬಹುದೆಂದು ಮಾಡಿಕೊಳ್ಳುವ ಕಲ್ಪನೆಯೇ ಆಧಾರಕಲ್ಪನೆಯು. ಯಾವ ಕಲ್ಪನೆಯು ವಿಚಾರ ಮಾಡುವುದಕ್ಕೆ — ಸಂಶೋಧನೆಯನ್ನು ಮಾಡುವುದಕ್ಕೆ ಆಧಾರವಾಗುವುದೋ, ಅದೇ ಆಧಾರ ಕಲ್ಪನೆ. ಯಾವ ಕಲ್ಪನೆಯನ್ನು (assumption) ಚರ್ಚೆಗೆ ಒಳಪಡಿಸಿ ಅದರ ಸತ್ಯಾಸತ್ಯತೆಗಳನ್ನು ತಿಳಿಯಲು ಸಾಧ್ಯವಾಗುವುದೋ, ಅದೇ ಆಧಾರ ಕಲ್ಪನೆ.

ಆಧಾರ ಕಲ್ಪನೆಯು ಲಭ್ಯವಿರುವ ವಾಸ್ತವಾಂಶಗಳನ್ನು ಆಧರಿಸಿ ರೂಪಿಸಲಾಗುತ್ತದೆ. ಅವು ಕೇವಲ ಊಹಾಪೋಹಗಳಲ್ಲ. ಸಮಾಜಶಾಸ್ತ್ರದಲ್ಲಿ ಗುಣಾತ್ಮಕ ಆಧಾರ ಕಲ್ಪನೆಗಳನ್ನ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಲಭ್ಯವಿರುವ ವಾಸ್ತವಾಂಶಗಳ ಆಧಾರದಲ್ಲಿ ಕಲ್ಪನೆಯನ್ನು ರಚಿಸುವುದರಿಂದ, ಅದನ್ನು ತಾತ್ಕಾಲಿಕ ಭವಿಷ್ಯ ವಾಣಿ ಅಥವಾ ಮುಂಗಾಣುವಿಕೆ ಎಂದೂ ಹೇಳಬಹುದು. ಆದರೆ, ಈ ಭವಿಷ್ಯ ವಾಣಿಯು ಖಚಿತವಲ್ಲದ ಹೇಳಿಕೆಯಾಗಿರುತ್ತದೆ; ಅದು ತಾತ್ಕಾಲಿಕ ಸ್ವರೂಪದ್ದಾಗಿದೆ ಎಂಬುದನ್ನು ನಾವು ಮರೆಯಬಾರದು. ಆ ಆಧಾರ ಕಲ್ಪನೆಯು ಎರಡು ಅಥವಾ ಹೆಚ್ಚು ಪರಿವರ್ತಕಗಳ ನಡುವಿನ ಸಂಬಂಧ ಪರಿಶಿಲಿಸುತ್ತದೆ. ಹಾಗಾಗಿ, ಸೈದ್ಧಾಂತಿಕ ಪ್ರಸ್ಥಾವನೆಗಳ ಮೂಲಕ ಆಧಾರ ಕಲ್ಪನೆಯನ್ನು ರಚಿಸಲಾಗುವುದು.

ಆಧಾರ ಕಲ್ಪನೆಯ ಮೂಲಗಳೆಂದರೆ:

ಅ. ಪ್ರಸ್ತುತ ಲಭ್ಯವಿರುವ ಸಿದ್ಧಾಂತಗಳುಆ. ಹಿಂದಿನ ಸಂಶೋಧನೆಗಳುಇ. ಸಂಶೋಧನಾ ವಿಷಯದ ಬಗ್ಗೆ ಲಭ್ಯವಿರುವ ಸಾಹಿತ್ಯದ ಅಧ್ಯಯನಈ. ಅವಲೋಕನಉ. ವೈಯಕ್ತಿಕ ಅನುಭವ

ಸಮಾಜಶಾಸ್ತ್ರದಲ್ಲಿ, ಮಾನವ ವರ್ತನೆಯ ಒಂದು ವಿಧವು ಮತ್ತೊಂದನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಮುಂಗಾಣಲು ಆಧಾರ ಕಲ್ಪನೆಯನ್ನು ಬಳಸಲಾಗುತ್ತದೆ. ಉದಾಹರಣೆಗೆ, ನಿರುದ್ಯೋಗ ಹೆಚ್ಚಿದರೆ, ಅಪರಾಧದ ಪ್ರಮಾಣವೂ ಹೆಚ್ಚುವುದು.

ಡರ್ಖೀಂ ಅವರು ಆತ್ಮಹತ್ಯೆಯ ಬಗೆಗಿನ ತಮ್ಮ ಅಧ್ಯಯನದಲ್ಲಿ

೧. ಮಾನಸಿಕ ಅಸ್ವಸ್ಥತೆಯಿಂದಾಗಿ ಜನರು ಮಾಡಿಕೊಳ್ಳುವರು ಎಂಬ ಆಧಾರ ಕಲ್ಪನೆಯನ್ನು ತಪ್ಪೆಂದು ತೋರಿಸಿಕೊಟ್ಟು,

೨. ಸಾಮಾಜಿಕ ಐಕ್ಯತೆಯ ಕೊರತೆಯಿಂದಾಗಿ ಆತ್ಮಹತ್ಯೆಗಳು ಉಂಟಾಗುತ್ತವೆ ಎಂಬ ಆಧಾರ ಕಲ್ಪನೆಯನ್ನು ಸತ್ಯವೆಂದು ತೋರಿಸಲು ಪ್ರಯತ್ನ ಪಟ್ಟರುವರು.

ಆರ್ ಕೆ ಮರ್ಟನ್ ಅವರು ಅನಾಮಿ (ಸಾಪೇಕ್ಷ ನಿಯಮರಾಹಿತ್ಯತೆ) ಬಗೆಗಿನ ಅಧ್ಯಯನದಲ್ಲಿ, ಕೆಳ ಸಾಮಾಜಿಕ-ಆರ್ಥಿಕ ವರ್ಗದವರು ತಮ್ಮ ನ್ಯಾಯಯುತ ಆಶೋತ್ತರಗಳನ್ನು (ಗುರಿಗಳನ್ನು) ಪೂರೈಸಿಕೊಳ್ಳಲು ಸಾಮಾಜಿಕ ರಚನೆ ಅವಕಾಶ ನೀಡದಿದ್ದಾಗ, ಅವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವರು ಅಥವಾ ನವೀನ ಆವಿಷ್ಕಾರಗಳನ್ನು ಮಾಡುವರೆಂಬ ಆಧಾರ ಕಲ್ಪನೆಯನ್ನು ನಿರೂಪಿಸಿ, ಪರಿಶೀಲಿಸಿ, ತಮ್ಮ ಸಾಮಾಜಿಕ ಅಪವರ್ತನೆಯ ಸಿದ್ಧಾಂತವನ್ನು ಮಂಡಿಸಿದ್ಧಾರೆ.

ಹಾಗಾಗಿ, ಆಧಾರ ಕಲ್ಪನೆಯ ಪ್ರಾಮುಖ್ಯತೆಯೇನೆಂದರೆ -

(೧) ಅದು ಸಂಶೋಧನಾ ಅಧ್ಯಯನದ ಕೇಂದ್ರ ಬಿಂದುವನ್ನು ಗುರುತಿಸಲು ಅವಶ್ಯಕ

(೨) ಸಂಶೋಧನಾ ವಿನ್ಯಾಸವನ್ನು ರೂಪಿಸಲು ಅವಶ್ಯ

(೩) ಅದನ್ನು ಪರಿಶೀಲನೆಗೆ ಒಳಪಡಿಸಬಹುದು

(೪) ವಿವರಣೆ ನೀಡಲು ಮತ್ತು ಮುಂಗಾಣುವಿಕೆಗೆ ಸಹಾಯಕ

(೫) ಸಿದ್ಧಾಂತಗಳನ್ನು ಪರಿಶೀಲನೆಗೆ ಒಳಪಡಿಸಬಹುದು.

0 views0 comments

Recent Posts

See All

Building Blocks of Theory - 1

ಆ ಕಲ್ಲುಗಳೇ- ಘಟಕಗಳು — ಪರಿಕಲ್ಪನೆ, ಕಲ್ಪನೆ, ಊಹಾಕಲ್ಪನೆ ಮತ್ತು ಮಾದರಿಗಳು. ಈ ಕಲ್ಲುಗಳನ್ನು ಗಟ್ಟಿಗೊಳಿಸುವ ಸಿಮೆಂಟೆಂದರೆ, ತರ್ಕ. ಸಿದ್ಧಾಂತವೆಂಬ ಕಟ್ಟಡದ ಅಡಿಪಾಯವು

Building Block - 2: Assumption

ಕೆಲವು ಕಲ್ಪನೆಗಳು ಸಾರ್ವತ್ರಿಕವಾಗಿ ಒಪ್ಪಲ್ಪಟ್ಟಿದ್ದು, ಸರಿ ಎಂದು ಸ್ಥಾಪಿತವಾಗಿರುವುದರಿಂದ, ಅವುಗಳನ್ನು ಆಧಾರವಾಗಿಟ್ಟುಕೊಂದು ಸಂಶೋಧನೆ ಮುಂದುವರಿಸಬಹುದು. ಆದರೂ ಯಾವ

Comments


©2022 by LearningSociology. Proudly created with Wix.com

bottom of page