Apr 23, 2024
Apr 23, 2024
Apr 23, 2024
Apr 23, 2024
Apr 23, 2024
Block-1: Concept - ಪರಿಕಲ್ಪನೆ
ಸಿದ್ಧಾಂತ ಸಮರ್ಥವಾಗಿ ಬಳಕೆಯಾಗಬೇಕೆಂದರೆ, ಅದನ್ನು ರಚಿಸಲು ಬಳಸುವ ಕಲ್ಲುಗಳು ಬಲಿಷ್ಟವಾಗಿರಬೇಕು. ಆ ಕಲ್ಲುಗಳೇ- ಘಟಕಗಳು — ಪರಿಕಲ್ಪನೆ, ಕಲ್ಪನೆ, ಊಹಾಕಲ್ಪನೆ ಮತ್ತು ಮಾದರಿಗಳು. ಈ ಕಲ್ಲುಗಳನ್ನು ಗಟ್ಟಿಗೊಳಿಸುವ ಸಿಮೆಂಟೆಂದರೆ, ತರ್ಕ. ಸಿದ್ಧಾಂತವೆಂಬ ಕಟ್ಟಡದ ಅಡಿಪಾಯವು ಅನುಭವಜನ್ಯ ಜ್ಞಾನವಾಗಿರುವುದು. ಹಾಗು, ಈ ಕಟ್ಟಡವನ್ನು ಕಟ್ಟಲು ಅವಶ್ಯವಿರುವ ನೀಲಿನಕಾಶೆಯನ್ನು ಸಂಶೋಧನಾ ವಿಧಾನವು ನೀಡುತ್ತದೆ.
ಒಂದು ಕಟ್ಟಡದ ಸಾಮರ್ಥ್ಯ ಅದನ್ನು ಕಟ್ಟಲು ಬಳಸುವ ಸಾಧನಗಳ ಗುಣವನ್ನು ಅವಲಂಬಿಸಿರುತ್ತದೆ ಎಂಬುದರ ಬಗ್ಗೆ ಶಂಕೆಯಿಲ್ಲ. ಅದರಂತೆ, ಸಿದ್ಧಾಂತವೆಂಬ ಕಟ್ಟಡದ ಸಾಮರ್ಥ್ಯವು ಅದನ್ನು ಕಟ್ಟಲು ಬಳಸುವ ಕಲ್ಲುಗಳ ಗುಣಮಟ್ಟವನ್ನು ಆಧರಿಸಿರುತ್ತದೆ. ಉದಾಹರಣೆಗೆ, ಪರಿಕಲ್ಪನೆಗಳ ವ್ಯಾಖ್ಯೆಗಳು ಎಷ್ಟು ಸತ್ತ್ವಯುತವಾಗಿದೆ, ಅವುಗಳನ್ನು ಎಷ್ಟು ಸುಲಭವಾಗಿ ಬಳಸಬಹುದು, ಇತರ “ಕಲ್ಲುಗಳ” ಜೊತೆ ಅವು ಎಷ್ಟು ಸುಲಭವಾಗಿ ಹೊಂದಿಕೊಳ್ಳುತ್ತವೆ ಮುಂತಾದ ಅಂಶಗಳನ್ನು ಅವಲಂಬಿಸಿರುತ್ತದೆ.
ಸಿದ್ದಾಂತವೆಂಬ ಕಟ್ಟಡದ ಕಲ್ಲುಗಳೆಂದರೆ: (Building blocks of theory)
೧. ಪರಿಕಲ್ಪನೆ
೨. ಕಲ್ಪನೆ
೩. ಆಧಾರ ಕಲ್ಪನೆ
೪. ಮಾಡಲ್
ಹಾಗಾಗಿ, ಸಿದ್ಧಾಂತವೆಂಬ ಕಟ್ಟಡದ ವಿವಿಧ ಕಲ್ಲುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯೋಣ.
೧. ಪರಿಕಲ್ಪನೆ (Concept)
ವಿಜ್ಞಾನಗಳಲ್ಲಿ ತಾಂತ್ರಿಕ ಅರ್ಥದಲ್ಲಿ ಬಳಸುವಂತಹ ಪದವೇ ಪರಿಕಲ್ಪನೆ. ಅದು ನಿರ್ದಿಷ್ಟ ಅರ್ಥವನ್ನು ಹೊಂದಿರುತ್ತದೆ. ಸಾಮಾಜಿಕ ವಾಸ್ತವತೆ ಹಾಗು ಸಂಪೂರ್ಣ ಸಿದ್ಧಾಂತಗಳ ಮಧ್ಯದಲ್ಲಿ ಪರಿಕಲ್ಪನೆಗಳನ್ನು ಗುರುತಿಸಬಹುದು.
ಪರಿಕಲ್ಪನೆಗಳ ಮೂಲಕ -
(ಅ) ಸಾಮಾಜಿಕ ವಿದ್ಯಮಾನಗಳನ್ನು ವಿಶ್ಲೇಷಿಸಬಹುದು(ಆ) ಸಾಮಾಜಿಕ ಜಗತ್ತನ್ನು ವರ್ಗೀಕರಣ ಮಾಡಬಹುದು(ಇ) ಸಾಮಾಜಿಕ ವಿದ್ಯಮಾನಗಳಿಗೆ ಅರ್ಥ ತಂಬಬಹುದು(ಈ) ಮೇಲ್ ಸ್ತರದ ಪ್ರಸ್ಥಾವನೆಗಳನ್ನು ನಿರೂಪಿಸಬಹುದು
ಸಂಕೀರ್ಣ ಸಾಮಾಜಿಕ ವಾಸ್ತವತೆಯನ್ನು ಸೂಚ್ಯವಾಗಿ ಗುರುತಿಸಲು ಪರಿಕಲ್ಪನೆಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ, ಕುಟುಂಬವು ಎಲ್ಲ ಸಾಮಾಜಿಕ ಗುಂಪುಗಳಲ್ಲೂ ಕಾಣಬರುತ್ತದೆ ಮತ್ತು ಪ್ರತಿಯೊಂದು ಗುಂಪಿನಲ್ಲೂ ಕೆಲವು ವೈಶಿಷ್ಟ್ಯತೆಗಳಿಂದ ಕೂಡಿರುತ್ತದೆ. ಆದರೆ, ಕುಟುಂಬ ಎಂಬ ಪದವನ್ನು ಸಮಾಜಶಾಸ್ತ್ರದಲ್ಲಿ ತಾಂತ್ರಿಕ ಪದವಾಗಿ ಬಳಸುವುದರಿಂದ, ಅದರ ಅರ್ಥ ಸ್ಪಷ್ಟ, ನಿರ್ದಿಷ್ಟ ಹಾಗು ನಿಖರವಾಗಿರುವುದು. ಹಾಗಾಗಿ, ಕುಟುಂಬ ಎಂಬ ಪರಿಕಲ್ಪನೆ ವೈವಿಧ್ಯತೆಯಿಂದ ಕೂಡಿರುವ ಸಾಮಾಜಿಕ ಸನ್ನಿವೇಶಕ್ಕೆ ಒಂದು ಚೌಕಟ್ಟನ್ನು ನೀಡುತ್ತದೆ. ಸಹಜವಾಗಿಯೇ, ಪ್ರತಿಯೊಂದು ವಿಜ್ಞಾನವೂ ತನಗೆ ವಿಶಿಷ್ಟವಾದ ಪರಿಕಲ್ಪನೆಗಳ ಸಮೂಹವನ್ನೇ ರಚಿಸಿಕೊಳ್ಳುವುದು. ಪರಿಕಲ್ಪನೆಗಳ ಬಳಕೆ, ಸಹಾಯವಿಲ್ಲದೇ ಯಾವ ವಿಜ್ಞಾನವೂ ತನ್ನ ಅಧ್ಯಯನ ವಿಷಯವನ್ನು ಸಮರ್ಥವಾಗಿ ಮಂಡಿಸಲು ಸಾಧ್ಯವಿಲ್ಲ. ಪರಿಕಲ್ಪನೆಗಳು, ಅವುಗಳ ವ್ಯಾಖ್ಯೆಗಳಿಲ್ಲದೆ ವೈಜ್ಞಾನಿಕ ಸಂಶೊಧನೆ, ವಿಚಾರ ವಿನಿಮಯ ಅಸಾಧ್ಯವಾಗುವುದು.
ಪರಿಕಲ್ಪನೆಗಳ ಉದ್ದೇಶ ವಾಸ್ತವತೆಯನ್ನು ಗ್ರಹಿಸುವುದಾಗಿದೆ. ಪರಿಕಲ್ಪನೆಗಳ ಮೂಲಕ -
(೧) ವಾಸ್ತವತೆಯನ್ನು ಅರ್ಥೈಸಿಕೊಳ್ಳ ಬಹುದು(೨) ನಮ್ಮ ಅವಲೋಕನ ರಚನಾಬದ್ಧವಾಗುವುದು(೩) ನಾವು ಅರ್ಥ ಮಾಡಿಕೊಂಡಿದ್ದನ್ನು ಇತರರೊಡನೆ ಹಂಚಿಕೊಳ್ಳ ಬಹುದು
ಸಮಾಜಶಾಸ್ತ್ರವು ನಮ್ಮ ಸುತ್ತಮುತ್ತಲಿನ ಸಾಮಾಜಿಕ ಗುಂಪುಗಳನ್ನು ಅಧ್ಯಯನ ಮಾಡುವುದರಿಂದ, ಅದರ ಪರಿಕಲ್ಪನೆಗಳು ಸಾಮಾಜಿಕ ವಾಸ್ತವತೆಗೆ ಬಹು ಹತ್ತಿರವಾಗಿರುತ್ತದೆ. ದೈನಂದಿನ ಜೀವನದಲ್ಲಿ ಬಳಸುವಂತಹ ಪದಗಳಿಗೇ ಸಮಾಜಶಾಸ್ತ್ರೀಯ ವ್ಯಾಖ್ಯೆ ನೀಡುವುದರಿಂದ ನಾವು ಹೆಚ್ಚು ಎಚ್ಚರಿಕೆಯಿಂದ ಈ ತಾಂತ್ರಿಕ ಪದಗಳನ್ನು ಬಳಸಬೇಕಾಗುತ್ತದೆ. ಅಲ್ಲದೇ, ಸಮಾಜಶಾಸ್ತ್ರದಲ್ಲಿ ಬಳಸುವ ಅನೇಕ ಪರಿಕಲ್ಪನೆಗಳ ಅರ್ಥ ಇತರ ಸಮಾಜವಿಜ್ಞಾನಗಳಲ್ಲಿನ ಬಳಕೆಗಿಂತ ವಿಭಿನ್ನವಾಗಿರುತ್ತದೆ. ಈ ಅಂಶವನ್ನೂ ಕೂಡ ನಾವು ಸದಾ ಗಮನದಲ್ಲಿಟ್ಟುಕೊಳ್ಳಬೇಕು. ಉದಾಹರಣೆಗೆ, ಅರ್ಥಶಾಸ್ತ್ರದಲ್ಲಿ ಬಳಸುವ ಮಾರುಕಟ್ಟೆ ಎಂಬ ಪರಿಕಲ್ಪನೆಯು ಆರ್ಥಿಕ ವಿನಿಮಯದ ಬಗ್ಗೆ ಒತ್ತು ನೀಡಿದರೆ, ಸಮಾಜಶಾಸ್ತ್ರಜ್ಞರು ಮಾರುಕಟ್ಟೆಯಲ್ಲಿ ಕಾಣಬರುವ ಸಾಮಾಜಿಕ ಮೌಲ್ಯಗಳು ಮತ್ತು ರೂಡಿಗಳಿಗೆ ಒತ್ತು ನೀಡುವರು. ಅರ್ಥಶಾಸ್ತ್ರಜ್ಞರು ಲಾಭವನ್ನು ಹೆಚ್ಚಿಸುವಿಕೆ/ನಷ್ಟವನ್ನು ಕಡಿಮೆ ಮಾಡುವುದರ ಬಗ್ಗೆ ಗಮನ ಹರಿಸಿದರೆ, ಸಮಾಜಶಾಸ್ತ್ರಜ್ಞರು ಯಾವ ಸಾಮಾಜಿಕ ಸಂದರ್ಭದಲ್ಲಿ ಆರ್ಥಿಕ ವಿನಿಮಯವು ಲಾಭದಾಯಕ ಅಥವಾ ಸಾಮಾಜಿಕ ಪ್ರತಿಫಲಗಳು ಲಾಭದಾಯಕ ಎಂಬುದರ ಬಗ್ಗೆ ಗಮನ ಹಿರಿಸುವರು. ಪ್ರಖ್ಯಾತ ಫ್ರೆಂಚ್ ಸಮಾಜಶಾಸ್ತ್ರಜ್ಞ ಮಾರ್ಸೆಲ್ ಮಾಸ್ ಅವರು ವಿವರಿಸಿದಂತೆ, ಬಳುವಳಿ ಅಥವಾ ಕೊಡುಗೆ ನೀಡುವುದೂ/ಪಡೆಯುವುದೂ ಕೂಡ ವಿನಿಮಯ ಪದ್ಧತಿಗೆ ಉತ್ತಮ ಉದಾಹರಣೆಯಾಗಿರುವುದು. ಆದರಿಲ್ಲಿ, ಕೊಡುಗೆಯ ಆರ್ಥಿಕ ಬೆಲೆಗಿಂತ ಹೆಚ್ಚಾಗಿ ಸಾಮಾಜಿಕ ಮೌಲ್ಯ ಮುಖ್ಯವಾಗುತ್ತದೆ.
ಸಮಾಜ ನಿರಂತರವಾಗಿ ಬದಲಾಗುತ್ತಿರುವುದರಿಂದ ಕೆಲವು ಸಂದರ್ಭಗಳಲ್ಲಿ ಹೊಸ ಪರಿಕಲ್ಪನೆಗಳನ್ನು ಹುಟ್ಟು ಹಾಕಬೇಕಾಗುತ್ತದೆ. ಮತ್ತು ಈ ಹಿಂದೆ ಬಳಸುತ್ತಿದ್ದ ಪರಿಕಲ್ಪನೆಗಳನ್ನು ಪುನರ್ವ್ಯಾಖ್ಯಾನ ಮಾಡಬೇಕಾಗುವುದು. ಉದಾಹರಣೆಗೆ, ವಿವಾಹ ಎಂಬ ಪರಿಕಲ್ಪನೆ ಸಾಮಾನ್ಯವಾಗಿ, ಗಂಡು-ಹೆಣ್ಣಿನ ನಡುವಿನ ಲೈಂಗಿಕ ಸಂಬಂಧಕ್ಕೆ ನೀಡುವ ಸಾಮಾಜಿಕ ಮಾನ್ಯತೆಯನ್ನು ಸೂಚಿಸುತ್ತದೆ. ಆದರಿಂದು ಅದು ಸಲಿಂಗ ಸಂಬಂಧಿಗಳನ್ನೂ ಒಳಗೊಳ್ಳುವ ವ್ಯಾಖ್ಯೆ ಅವಶ್ಯಕವಾಗಿದೆ
ಸಮಾಜಶಾಸ್ತ್ರದ ಕೆಲವು ಪರಿಕಲ್ಪನೆಗಳು ಸುದೀರ್ಘ ಕಾಲದಿಂದ ಬಳಕೆಯಲ್ಲದ್ದು, ಸಮಯದ ಪರೀಕ್ಷೆಯಲ್ಲಿ ಗೆದ್ದಿದೆಯೆಂದೇ ಹೇಳಬಹುದು. ಈ ಶಾಸ್ತ್ರದ ಪ್ರಾರಂಭಿಕ ದಿನಗಳಿಂದ ವರ್ಗ, ಅಂತಸ್ತು, ಅಧಿಕಾರಶಾಹಿತನ, ಬಂಡವಾಳಶಾಹಿತನ, ಲಿಂಗ ವ್ಯವಸ್ಥೆ, ಬಡತನ, ಕುಟುಂಬ ಮತ್ತು ಪ್ರಾಬಲ್ಯತೆಗಳಂತಹ ಪರಿಕಲ್ಪನೆಗಳು ಇಂದಿಗೂ ಪ್ರಸ್ತುತವಾಗಿರುವುದು. ಜಾಗತೀಕರಣ, ಆಧುನಿಕೋತ್ತರ, ಆತ್ಮಾರ್ಥಕತೆ (reflexivity), ಪರಿಸರದಂತಹ ಪರಿಕಲ್ಪನೆಗಳು ಇತ್ತೀಚಿನ ದಿನಗಳಲ್ಲಿ ಬಳಕೆ ಬಂದಿರುವವು.
ನಾವು ಸದಾ ನೆನಪಿನಲ್ಲಿಟ್ಟುಕೊಳ್ಳ ಬೇಕಾದ ಅಂಶಗಳೆಂದರೆ, ಕೆಲವು ಪರಿಕಲ್ಪನೆಗಳು ಅತ್ಯಗತ್ಯ ಸ್ವರೂಪದ್ದಾಗಿವೆ. ಉದಾ: ಕುಟುಂಬ, ರಾಜ್ಯ, ಮತ-ಧರ್ಮ, ಪ್ರಾಬಲ್ಯತೆ, ಅಧಿಕಾರ, ವಿವಾಹ, ಸಂಸ್ಕೃತಿ, ವರ್ಗ-ಜಾತಿ ಮುಂತಾದವು.
ವೈಜ್ಞಾನಿಕ ಸಿದ್ಧಾಂತವು ಸಾಮಾನ್ಯವಾಗಿ ಈ ಕೆಳಗಿನ ಲಕ್ಞಣಗಳನ್ನು ಹೊಂದಿರುತ್ತವೆ: (ಅ) ಸಿದ್ಧಾಂತದಲ್ಲಿ ಬಳಸುವ ಎಲ್ಲ ಪ್ರಮುಖ ಪದಗಳನ್ನು ಗುರುತಿಸಿ, ಅವುಗಳ...
Comments