top of page

Features of Theory: ಸಿದ್ಧಾಂತದ ಲಕ್ಷಣಗಳು

Soumya Kumar

ವೈಜ್ಞಾನಿಕ ಸಿದ್ಧಾಂತವು ಸಾಮಾನ್ಯವಾಗಿ ಈ ಕೆಳಗಿನ ಲಕ್ಞಣಗಳನ್ನು ಹೊಂದಿರುತ್ತವೆ:


(ಅ) ಸಿದ್ಧಾಂತದಲ್ಲಿ ಬಳಸುವ ಎಲ್ಲ ಪ್ರಮುಖ ಪದಗಳನ್ನು ಗುರುತಿಸಿ, ಅವುಗಳ ವ್ಯಾಖ್ಯೆಯನ್ನು ಮಾಡಲಾಗುವುದು. ಯಾವ ಪದ ಯಾವ ಅರ್ಥದಲ್ಲಿ ಬಳಸಲ್ಪಡುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇರುತ್ತದೆ.

ಉದಾಹರಣೆಗೆ,

ಎಮಿಲಿ ಡರ್ಖೀಂ ಅವರು ತಮ್ಮ The Division of Labour in Societyಯಲ್ಲಿ, ಮೊದಲು ಶ್ರಮ ವಿಭಜನೆಯ ಸಮಾಜಶಾಸ್ತ್ರೀಯ ವ್ಯಾಖ್ಯೆ ನೀಡಿ (ಅರ್ಥಶಾಸ್ತ್ರದ ವ್ಯಾಖ್ಯೆ ಅಸಂಪೂರ್ಣ ಎಂದು ತೋರಿಸಿಕೊಟ್ಟು), ಅದಕ್ಕೆ ಪೂರಕವಾದ ಇತರ ಪರಿಕಲ್ಪನೆಗಳನ್ನು ವ್ಯಾಖ್ಯೆ ಮಾಡುವರು (ಸಾಮಾಜಿಕ ಅಸಮತೋಲನ, ವಿಘಟನೆ ಇತ್ಯಾದಿ).

ಹಾಗೆಯೇ, ಆತ್ಮಹತ್ಯೆಯ ಬಗೆಗಿನ ಅಧ್ಯಯನದಲ್ಲಿ ಅವರು ಪೂರಕ ಪರಿಕಲ್ಪನೆಗಳಾದ — ಆತ್ಮಹತ್ಯೆ, ಪರಾರ್ಥಕ ಆತ್ಮಹತ್ಯೆ, ಸ್ವಾತ್ಮಕ ಆತ್ಮಹತ್ಯೆ, ಅನಾಮಿ ಇತ್ಯಾದಿಗಳ ವ್ಯಾಖ್ಯೆ ಮತ್ತು ಪರಸ್ಪರ ಸಂಬಂಧಗಳನ್ನು ತೋರಿಸಿಕೊಟ್ಟಿರುವರು.

ಮ್ಯಾಕ್ಸ ವೆಬರ್ ಅವರು ಪ್ರಾಬಲ್ಯತೆ, ಆಧಿಕಾರ, ನಾಯಕತ್ವ, ಚರಿಸ್ಮಾ (ಕರಿಷ್ಮಾ), ಐಡಿಯಲ್ ಟೈಪ್ಸ ಮುಂತಾದವುಗಳನ್ನು ಎಚ್ಚರಿಕೆಯಿಂದ ವ್ಯಾಖ್ಯಾನಿಸಿರುವರು.

ಟಾಲ್ಕಾಟ್ ಪಾರ್ಸನ್ಸ್ ಅವರು ಸಾಮಾಜಿಕ ವ್ಯವಸ್ಥೆಯ ಬಗೆಗಿನ ಸಿದ್ಧಾಂತದಲ್ಲಿ — ಸಾಮಾಜಿಕ ವ್ಯವಸ್ಥೆ, ಹೊಂದಾಣಿಕೆ, ಐಕ್ಯತೆ, ಸಮತೋಲನ, ಗುರಿಸಾಧಿಸುವಿಕೆ ಹೀಗೆ ಕೆಲವು ಪದಗಳನ್ನು ತಾವು ಯಾವ ಅರ್ಥದಲ್ಲಿ ಬಳಸುತ್ತಿದ್ದೇನೆ ಎಂಬುದನ್ನು ಸ್ಪಷ್ಟವಾದ ವ್ಯಾಖ್ಯೆಗಳ ಮೂಲಕ ತಿಳಿಸಿರುವರು.

(ಆ) ಸಿದ್ಧಾಂತದ ಎಲ್ಲ ಪ್ರಮುಖ ಹೇಳಿಕೆಗಳನ್ನು ಗುರುತಿಸಲ್ಪಟ್ಟಿರುತ್ತದೆ. ಈ ಹೇಳಿಕೆಗಳು ಕೆಳಗಿನ ರೂಪಗಳಲ್ಲಿರಬಹುದು:

(೧) ಸ್ವತಸ್ಸಿದ್ಧ ಹೇಳಿಕೆಗಳು (axioms)

(೨) ಕಲ್ಪನೆಗಳು (assumptions)

(೩) ಸಮರ್ಥಿಸಬೇಕಾದ ಅಥವಾ ನಿರಾಕರಿಸಬೇಕಾದ ಹೇಳಿಕೆಗಳು (Propositions)

(ಇ) ಸಿದ್ಧಾಂತದ ಪ್ರಮುಖ ಹೇಳಿಕೆಗಳ ತಾರ್ಕಿಕ ಫಲವಾಗಿ ಅದರ ಅಂತಿಮ ನಿರ್ಣಯಗಳನ್ನು ಪಡೆಯಲಾಗುತ್ತದೆ. ಉದಾಹರಣೆಗೆ, ಮ್ಯಾಕ್ಸ ವೆಬರ್ ಅವರು ಅಧಿಕಾರಶಾಹಿ ವ್ಯವಸ್ಥೆಯ ಬಗೆಗಿನ ಪ್ರಮುಖ ಹೇಳಿಕೆಗಳ ಆಧಾರದಲ್ಲಿ ಅದು ಎಲ್ಲ ಬಗೆಯ ಸಮಾಜಗಳಲ್ಲೂ ಬಕಾಸುರನಂತೆ ವ್ಯಾಪಿಸುತ್ತದೆ ಎಂದು ಸೂಚಿಸಿದ್ದರು ಹಾಗು ಅದು ಸತ್ಯವೆಂದು ತಿಳಿದು ಬಂದಿತು

(ಈ) ಸಿದ್ಧಾಂತದಲ್ಲಿರುವ ಹೇಳಿಕೆಗಳು ಮತ್ತು ಸಿದ್ಧಾಂತದ ಬಗೆಗಿನ ಹೇಳಿಕೆಗಳು ಬೇರೆ-ಬೇರೆಯೆಂದು ಸ್ಪಷ್ಟವಾಗಿ ಗುರುತಿಸಲಾಗಿರುತ್ತದೆ.

ಅನೇಕ ವೈಜ್ಞಾನಿಕ ಸಿದ್ಧಾಂತಗಳ ಪ್ರಮುಖ ಹೇಳಿಕೆಗಳು ಗಣಿತೀಯ ಸ್ವರೂಪದಲ್ಲಿ ವ್ಯಕ್ತಪಡಿಸಲಾಗುತ್ತದೆ. ಆದರೆ, ಸಮಾಜಶಾಸ್ತ್ರದಂತಹ ಸಾಮಾಜಿಕ ವಿಜ್ಞಾನಗಲ್ಲಿ ಗಣಿತೀಯ ಹೇಳಿಕೆಗಳ ಬಳಕೆ ಬಹು ಕಡಿಮೆ. ಬದಲಿಗೆ, ನಿರೂಪಣಾತ್ಮಕ ಹೇಳಿಕೆಗಳನ್ನು ಬಳಸಿ, ತಾರ್ಕಿಕ ನಿರ್ಣಯಗಳನ್ನು ಪಡೆಯಲಾಗುತ್ತದೆ.



0 views0 comments

Recent Posts

See All

Comments


©2022 by LearningSociology. Proudly created with Wix.com

bottom of page