top of page

Formal Sociology: ಫಾರ್ಮಲ್ ಸಮಾಜಶಾಸ್ತ್ರ

Soumya Kumar

Updated: Apr 23, 2024

ಜಾರ್ಜ್ ಸಿಮ್ಲೆಲ್ ಅವರು ಜರ್ಮನಿಯ ಪ್ರಸಿದ್ಧ ತತ್ತ್ವಶಾಸ್ತ್ರಜ್ಞರಾದ ಇಮಾನ್ಯುಯೆಲ್ ಕ್ಯಾಂಟ್ ಅವರಿಂದ ಪ್ರಭಾವಿತರಾಗಿದ್ದರು. ಈ ಪ್ರಭಾವದ ಹಿನ್ನಲೆಯಲ್ಲಿ ಸಿಮ್ಮೆಲ್ ಅವರ ಫಾರ್ಮಲ್ ಸಮಾಜಶಾಸ್ತ್ರವನ್ನು ಅರ್ಥಮಾಡಿಕೊಳ್ಳಬೇಕು.

ಕ್ಯಾಂಟ್ ಅವರು ಫಾರ್ಮ್(form) ಮತ್ತು ವಸ್ತು/ದ್ರವ್ಯ (matter) ಗಳ ನಡುವಿನ ಭೇದವನ್ನು ಗುರುತಿಸುತ್ತಾರೆ. ಭೌತಿಕ ವಸ್ತು ಅಥವಾ ಇಂದ್ರಿಯಗ್ರಾಹ್ಯವಾದ ವಸ್ತವನ್ನು ಮ್ಯಾಟರ್ ಎಂದರೆ, ಫಾರ್ಮ ವಸ್ತುವಿನ ಸಾರಭೂತವೂ ನಿರ್ಣಾಯಕವೂ ಆದ ತತ್ತ್ವ; ಅದರ ಸ್ವರೂಪ. ಯಾವುದೇ ವಸ್ತುವನ್ನು (ಭೌತದ್ರವ್ಯವನ್ನು) ಒಂದು ನಿರ್ದಿಷ್ಟ ವರ್ಗಕ್ಕೆ ಯಾ ಜಾತಿಗೆ ಸೇರಿದುದನ್ನಾಗಿ ಮಾಡುವ ಲಕ್ಷಣ. ಫಾರ್ಮ್ ವಸ್ತುವಿನ ವ್ಯಾಖ್ಯೆ, ಸಾರವನ್ನು ಸೂಚಿಸುವುದು.

ಉದಾಹರಣೆಗೆ, ಮಾನವನಾಗುವುದೆಂದರೆನು? ಎಂಬ ಪ್ರಶ್ನೆ ಫಾರ್ಮಗೆ ಸೇರಿದ್ದು. ಮಾನವ ಎಂಬ ಭೌತಿಕ ವಸ್ತು/ಪ್ರಾಣಿಯನ್ನು ಮಾತ್ರ ಅದು ತೋರಿಸುವುದಿಲ್ಲ. ಯಾವ ಲಕ್ಷಣಗಳು ನಿರ್ದಿಷ್ಟ ವರ್ಗದ ಪ್ರಾಣಿಗಳನ್ನು ಮಾನವರೆನಿಸಿಕೊಳ್ಳುವಂತೆ ಮಾಡುವುದೆಂಬುದನ್ನು ಗುರುತಿಸುವುದು, ಮಾನವರ ಸ್ವರೂಪವನ್ನು ಗುರುತಿಸುವುದು. ಮಾನವರ ಲಕ್ಷಣಗಳು ವಿಭಿನ್ನವಾಗಿರುತ್ತದೆ. ಆದರೆ ಮಾನವನಾಗುವುದರ ಸ್ವರೂಪದಲ್ಲಿ ಅನೇಕ ಸಾಮಾನ್ಯ ಲಕ್ಷಣಗಳಿರುವುದು. ಈ ಸಾಮಾನ್ಯ ಲಕ್ಷಣಗಳ ಆಧಾರದಲ್ಲಿ ಮಾನವರಾಗುವುದೆಂದರೇನೆಂಬುದರ ಲಕ್ಷಣಗಳನ್ನು ಗುರುತಿಸುವುದೇ ಫಾರ್ಮನ ಉದ್ದೇಶ. ಹಾಗಾಗಿ ಒಂದು ಭೌತಿಕ ವಸ್ತುವಿಗೆ - ಸ್ವರೂಪ (form) ಮತ್ತು ವಿಷಯ (content) ಎರಡೂ ಇರುತ್ತವೆ. ಇಲ್ಲಿ ವಿಷಯವೆಂದರೆ, ವಸ್ತುವಿನ ಹುರುಳು/ಅಂತರ್ಗತವಾಗಿರುವ ಲಕ್ಷಣಗಳೆಂದು ಅರ್ಥ ಮಾಡಿಕೊಳ್ಳಬೇಕು.

ಜಾರ್ಜ್ ಸಿಮ್ಮೆಲ್ ಅವರ ಸಮಾಜಶಾಸ್ತ್ರೀಯ ದೃಷ್ಟಿಕೋಣವು, ಕ್ಯಾಂಟ್ ಅವರ ಮಾರ್ಗದಲ್ಲಿ ನಡೆದು, ಸಾಮಾಜಿಕ ಅಂತಃಕ್ರಿಯೆಗಳ ಸ್ವರೂಪ ಮತ್ತು ಲಕ್ಷಣಗಳನ್ನು ವಿಶ್ಲೇಷಿಸುತ್ತದೆ.

ನಮಗೆ ತಿಳಿದಿರುವಂತೆ, ಮಾನವರ ನಡುವೆ ಅಸಂಖ್ಯಾತ ಅಂತಃಕ್ರಿಯೆಗಳು ನಡೆಯುತ್ತವೆ. ಈ ಅಂತಃಕ್ರಿಯೆಗಳು ಇಂದ್ರಿಯಗ್ರಾಹ್ಯವಾದದ್ದು. ಆದ್ದರಿಂದ ಅವುಗಳನ್ನು ವಸ್ತುಗಳೆಂದು ಗುರುತಿಸಬಹುದು. ಈ ಅಂತಃಕ್ರಿಯೆಗಳು ಇತರರನ್ನು ಉದ್ದೇಶದಲ್ಲಿಟ್ಟುಕೊಂಡು, ಇತರರ ಪ್ರತಿಕ್ರಿಯಗಳನ್ನು ಗಮನದಲ್ಲಿಟ್ಟುಕೊಂಡು ನಡೆಯುವುದರಿಂದ, ಅವುಗಳನ್ನು ಸಾಮಾಜಿಕ ಎಂದು ಕರೆಯುತ್ತೇವೆ.

ಸಿಮ್ಮೆಲ್ ಅವರು ಈ ಅಸಂಖ್ಯಾತ ಸಾಮಾಜಿಕ ಅಂತಃಕ್ರಿಯೆಗಳ ಸ್ವರೂಪವನ್ನು ಚರ್ಚಿಸಿದ್ದು, ಅದನ್ನು ಸೋಶಿಯೇಶನ್ ಎಂದು ಕರೆದಿದ್ದಾರೆ. ಪ್ರತಿಯೊಂದು ಸೋಶಿಯೇಶನ್ ಪ್ರತ್ಯೆಕ ಸ್ವರೂಪ ಹಾಗು ರಾಚನಿಕ ಅಸ್ತಿತ್ವವನ್ನು ಹೊಂದಿರುತ್ತದೆ. ಸೋಶಿಯೇಶನ್ನಿನ ಗುಣಲಕ್ಷಣಗಳು ವಿಭಿನ್ನವಾದರೂ ಕೂಡ, ಅವುಗಳಲ್ಲಿ ಕಾಣಬರುವ ವೈಶಿಷ್ಟ್ಯತೆಗಳನ್ನು ಆಧರಿಸಿ ಅವುಗಳ ಸ್ವರೂಪ ಗುರುತಿಸಬಹುದು ಎನ್ನುತ್ತಾರೆ.


ಅವರ ಫಾರ್ಮಲ್ ಸಮಾಜಶಾಸ್ತ್ರವನ್ನು, ಹಾಗಾಗಿ, ಸ್ವರೂಪ ಸಮಾಜಶಾಸ್ತ್ರವೆಂದು ಕರೆಯಬಹುದು. ಇದನ್ನು ನಾವು  ಕೆಳಗಿನಂತೆ ಚರ್   ಚರ್ಚಿಸಬಹುದು:  


ಮಾನವರ ನಡುವಿನ ಸೋಶಿಯೇಶನ್ ವೈವಿಧ್ಯಮಯವಾಗಿದ್ದು, ಫಾರ್ಮಲ್ ಸಮಾಜಶಾಸ್ತ್ರವು ಇವುಗಳಿಂದ ಸ್ವರೂಪವನ್ನು ಪ್ರತ್ಯೇಕಿಸಿ, ಅಮೂರ್ತತೆಯ ಮಟ್ಟದಲ್ಲಿ ಸಾಮಾನ್ಯೀಕರಣಗಳನ್ನು ಪಡೆಯುವ ಪ್ರಯತ್ನ ಮಾಡುವುದು. ಅಂತಃಕ್ರಿಯೆಗಳು ವೈಯಕ್ತಿಕ ತುಡಿತಗಳು, ಧ್ಯೇಯೋದ್ದೇಶಗಳಿಂದ ಮಾಡಲ್ಪಟ್ಟಿರುತ್ತದೆ. ಇವು ಅಂತಃಕ್ರಿಯೆಗಳ ವಿಷಯ (content).

ಆದರೆ, ಅಂತಃಕ್ರಿಯೆಯ ಸ್ವರೂಪವನ್ನು ಸಾಮಾಜಿಕ ವಾಸ್ತವತೆಯ ಮೂಲಭೂತ ರಾಚನಿಕ ಅಂಶಗಳೆಂದು ಕರೆಯಬಹುದು. ಅವು ವಾಸ್ತವಗಳಲ್ಲ; ಬದಲಿಗೆ ವಾಸ್ತವತೆಯ ಅಮೂರ್ತ, ವಿಶ್ಲೇಷಣಾತ್ಮಕ ಸ್ವರೂಪ ಮಾತ್ರ.

ಉದಾಹರಣೆಗೆ, ಇಬ್ಬರು ವ್ಯಕ್ತಿಗಳು ಪರಸ್ಪರ ಆಕರ್ಷಿತರಾಗಿ, ಒಟ್ಟಾಗಿ ಜೀವನ ನಡೆಸ ಬಯಸಿದರೆ, ಆ ಆಕರ್ಷಣೆಯ ತುಡಿತ, ಧ್ಯೆಯ, ಉದ್ದೇಶಗಳು ವೈವಿಧ್ಯಮಯವಾಗಿರುತ್ತದೆ. ಹಣಕ್ಕಾಗಿ, ಸೌಂದರ್ಯಕ್ಕಾಗಿ, ಬುದ್ಧಿವಂತಿಕೆಗಾಗಿ, ಸ್ಥಾನಕ್ಕಾಗಿ ಅಥವಾ ಇನ್ನಾವುದೇ ತುಡಿತ, ಧ್ಯೆಯ, ಉದ್ದೇಶಗಳಿಗಾಗಿ ಪರಸ್ಪರ ಆಕರ್ಷಿತರಾಗಬಹುದು ಹಾಗು ಒಟ್ಟು ಜೀವನ ನಡೆಸಲು ಬಯಸಬಹುದು. ಆದರೆ, ವಿವಾಹವೆಂಬ ಮೂಲಭೂತ ವರ್ತನಾ ಮಾದರಿ ಅವರು ದೀರ್ಘಕಾಲ ಒಟ್ಟಾಗಿ ಜೀವನ ನಡೆಸುವುದರ ತಳಹದಿಯಲ್ಲಿರುತ್ತದೆ. ಈ ಸಾಮಾನ್ಯ ವರ್ತನಾಮಾದರಿಯನ್ನು ಸ್ವರೂಪ ಅಥವಾ ಫಾರ್ಮ ಎಂದು ಸಿಮ್ಮೆಲ್ ಕರೆದಿದ್ದಾರೆ.

ಸ್ವರೂಪ/ಫಾರ್ಮ್ ಸಾಮಾಜಿಕ ಜೀವನದಲ್ಲಿ ಕಾಣಬರುವ, ಸಾಪೇಕ್ಷವಾಗಿ ಸ್ಥಿರ ಸ್ವರೂಪದ, ಸುಭದ್ರವಾದ, ಮಾದರಿ ರೂಪದ, ಸುಲಭವಾಗಿ ಮುಂದೇನಾಗಬಹುದೆಂದು ಊಹಿಸಲು ಸಾಧ್ಯವಾದ ಹಾಗು ಅಸ್ತಿತ್ವದಲ್ಲಿರುವುಂತಹುದು. ಆದರೆ, ಅದರ ವಿಷಯವು ಕಾಲಾನುಕಾಲಕ್ಕೆ, ದೇಶದಿಂದ ದೇಶಕ್ಕೆ ಸ್ಪಷ್ಟವಾಗಿ ಬದಲಾಗಬಹುದು. ಉದಾಹರಣೆಗೆ, ಭಾರತದಂತಹ ಸಂಪ್ರದಾಯ ಅನುಸಾರಿ ದೇಶದಲ್ಲಿ ವಿವಾಹವು ಕುಟುಂಬದ ಸದಸ್ಯರ ಸಹಮತಿಯ ಮೂಲಕವೇ ನಡೆಬೇಕೆನ್ನುವ ಮೌಲ್ಯವಿದ್ದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ಪ್ರೇಮವಿವಾಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂಬ ಮೌಲ್ಯವಿರುವುದು.

ಜಾರ್ಜ್ ಸಿಮ್ಮೆಲ್ ಅವರ ಪ್ರಕಾರ ಸಮಾಜಶಾಸ್ತ್ರದ ಅಧ್ಯಯನ ವಿಷಯವು ಸಾಮಾಜಿಕ ಅಂತಃಕ್ರಿಯೆಗಳ ಸ್ವರೂಪನ್ನು ಸಂಶೋಧಿಸುವುದಾಗಿದೆ.


ಸ್ವರೂಪ/ಫಾರ್ಮ್ ನ ಲಕ್ಷಣಗಳನ್ನು ಸಿಮ್ಮೆಲ್ ಕೆಳಗಿನಂತೆ ಗುರುತಿಸುತ್ತಾರೆ:

(ಅ) ವಸ್ತುವಿನ (ಸಾಮಾಜಿಕ ವಿದ್ಯಮಾನ/ಸಂಸ್ಥೆ) ಕಾರ್ಯಗಳ ಮೂಲಕ ಅದರ ಸ್ವರೂಪವನ್ನು ಗುರುತಿಸಬಹುದು

(ಆ) ಅನೇಕ ವಿಷಯಗಳ ಒಗ್ಗೂಡಿವಿಕೆಯಿಂದ ಸ್ವರೂಪ ಉಂಟಾಗುವುದು

(ಇ) ಅನೇಕ ವಿಷಯಗಳನ್ನು ಒಟ್ಟುಗೂಡಿಸಿ ಸ್ವರೂಪ ಉಂಟಾಗುವುದು. ಹಾಗಾಗಿ, ಬೇರೆ-ಬೇರೆ ಸ್ವರೂಪಗಳ ವಿಷಯಗಳು ವಿಭಿನ್ನವಾಗಿರುತ್ತದೆ

(ಈ) ತಾನು ಒಗ್ಗೂಡಿಸಿರುವ ವಿಷಯಗಳಿಗೆ, ಸ್ವರೂಪವು ರಚನೆಯನ್ನು ನೀಡುವುದು (ಅಂದರೆ, ವ್ಯವಸ್ಥಿತಗೊಳಿಸುವುದು).


ಅಂದರೆ, ವೈವಿಧ್ಯಮಯ ವಸ್ತುವಿಷಯಗಳಲ್ಲಿ ಏಕರೀತಿಯ ರಾಚನಿಕ ಅಂಶಗಳು ಕಂಡುಬರಬಹುದು ಹಾಗು ಒಂದೇ ವಸ್ತುವಿಷಯವು ವಿವಿಧ ಬಗೆಯ ಸಾಮಾಜಿಕ ಸಂಘಟನೆಗಳಲ್ಲಿ ಅಭಿವ್ಯಕ್ತಗೊಳ್ಳಬಹುದು.

ಸಿಮ್ಮೆಲ್ ಅವರು ಸ್ವರೂಪ-ವಸ್ತುವಿಷಯಗಳ ನಡುವೆ ಗುರುತಿಸುವ ಭಿನ್ನತೆಯ ತರ್ಕವನ್ನು ಅನೇಕರು ಟೀಕಿಸಿದ್ದಾರೆ. ವಾಸ್ತವದಲ್ಲಿ ಸ್ವರೂಪ ಹಾಗು ವಸ್ತುವಿಷಯಗಳನ್ನು ಬೇರ್ಪಡಿಸಲು ಸಾಧ್ಯವಿಲ್ಲ. ವಿಶ್ಲೇಷಣತ್ಮಕವಾಗಿಯೂ ಕೂಡ ಇವುಗಳ ಬೇರ್ಪಡಿಸುವಿಕೆಯು ಸುಲಭಸಾಧ್ಯವಲ್ಲ. ಆದರೆ, ಸೋಶಿಯೇಶನ್ಗಳ ವಿಧಗಳನ್ನು ಗುರುತಿಸುವುದರ ಮೂಲಕ ಈ ಟೀಕೆಯನ್ನು ನಿರಾಕರಿಸುತ್ತಾರೆ.

ನೋಡಿ: ಸೋಶಿಯೆಶನ್ - ವಿವಿಧ ರೂಪಗಳು

ಸಮಾಜಶಾಸ್ತ್ರವು ಸಾಮಾಜಿಕ ಸ್ವರೂಪಗಳ ಕಾರ್ಯ-ಕಾರಣ ವಿಶ್ಲೇಷಣೆಯನ್ನು ಮಾಡುವುದಿಲ್ಲ. ಬದಲಿಗೆ, ಅವುಗಳ ವಸ್ತುನಿಷ್ಢ ಅರ್ಥಗಳ ವಿಶ್ಲೇಷಣೆ ಮಾಡುವುದು. ಅವರ ಪ್ರಕಾರ, ಸಾಮಾಜಿಕ ಸ್ವರೂಪಗಳ ವಸ್ತುನಿಷ್ಢ ಅರ್ಥವು ಅವುಗಳ ಲಕ್ಷಣಗಳಲ್ಲಿ ಮತ್ತು ವಾಸ್ತವಿಕ ವೈವಿಧ್ಯತೆಗಳ ಸರಣಿಯಲ್ಲಿ ಹಾಗು ಅವುಗಳ ಪರಿಣಾಮಗಳಲ್ಲಿ ಕಂಡುಬುರುವುದು. ಸಿಮ್ಮೆಲ್ ತಮ್ಮ Sociology ಎಂಬ ಗ್ರಂಥದಲ್ಲಿ ಈ ವಿಶ್ಲೇಷಣೆಯನ್ನು ಕೂಲಂಕಷವಾಗಿ ಚರ್ಚಿಸಿದ್ದಾರೆ.


Recent Posts

See All

Forms of Sociation - ಸೋಶಿಯೇಶನ್: ವಿವಿಧ ಸ್ವರೂಪಗಳು

ವ್ಯಕ್ತಿಗಳು ಅಂತಃಕ್ರಿಯೆಯಲ್ಲಿ ತೊಡಗಿದಾಗ, ಒಂದಲ್ಲ ಒಂದು ಬಗೆಯ ಪಾರಸ್ಪರಿಕತೆಯನ್ನು - ಅಂದರೆ, ಸಾಮಾಜಿಕ ಸಂಬಂದವನ್ನು ಹೊಂದುವರು. ಈ ಸಾಮಾಜಿಕ ಸಂಬಂಧವನ್ನು...

Kommentare


©2022 by LearningSociology. Proudly created with Wix.com

bottom of page