top of page

Forms of Sociation - ಸೋಶಿಯೇಶನ್: ವಿವಿಧ ಸ್ವರೂಪಗಳು

Soumya Kumar

Updated: Apr 23, 2024

ವ್ಯಕ್ತಿಗಳು ಅಂತಃಕ್ರಿಯೆಯಲ್ಲಿ ತೊಡಗಿದಾಗ, ಒಂದಲ್ಲ ಒಂದು ಬಗೆಯ ಪಾರಸ್ಪರಿಕತೆಯನ್ನು - ಅಂದರೆ, ಸಾಮಾಜಿಕ ಸಂಬಂದವನ್ನು ಹೊಂದುವರು. ಈ ಸಾಮಾಜಿಕ ಸಂಬಂಧವನ್ನು ಸೋಶಿಯೇಶನ್ ಎಂದು ಸಿಮ್ಮೆಲ್ ಕರೆದಿದ್ದಾರೆ. ಸೋಶಿಯೇಶನ್ ಅತ್ಯಂತ ನಗಣ್ಯ ಹಾಗು ಅಲ್ಪಕಾಲೀನದ್ದಾಗಿರಬಹುದು (ಬಸ್ ನಲ್ಲಿನ ಸಹಪ್ರಯಾಣಿಕರೊಡನೆಯ ಅಂತಃಕ್ರಿಯೆ, ಉದಾಹರಣೆಗೆ) ಅಥವಾ ದೀರ್ಘಕಾಲದ, ಆಳವಾದ ಸಂಬಂಧ ಆಗಿರಬಹುದು (ಉದಾಹರಣೆಗೆ, ತಾಯಿ-ಮಕ್ಕಳ ಸಂಬಂಧ, ಪತ್ನಿ-ಪತಿಯ ನಡುವಿನ ಸಂಬಂಧ, ಸ್ನೇಹಿತರ ನಡುವಿನ ಸಂಬಂಧ).


ಸಿಮ್ಮೆಲ್ ಅವರು ಸೋಶಿಯೇಶನ್ನಿನ ಮೂರು ವಿಧಗಳನ್ನು ಗುರುತಿಸುತ್ತಾರೆ:

ಅ. ಡೈಯಾಡ್ (Dyad):

ಇಬ್ಬರು ವ್ಯಕ್ತಿಗಳ ಗುಂಪು. ಇದೊಂದು ಅತ್ಯಂತ ಸರಳ ಸಮಾಜಶಾಸ್ತ್ರೀಯ ಘಟಕ. ಈ ಸರಳ ಘಟಕದಲ್ಲಿ ಸೋಶಿಯೇಶನ್ನಿನ ಅನೇಕ ಸಾಮಾನ್ಯ ಸ್ವರೂಪಗಳನ್ನು ಹೇಗೆ ಗುರುತಿಸಬಹುದೆಂಬುದನ್ನು ಸಿಮ್ಮೆಲ್ ತೋರಿಸಿಕೊಟ್ಟಿದ್ದಾರೆ. ಅವರು ಗುರುತಿಸುವಂತೆ, ಇಬ್ಬರು ಸದಸ್ಯರ ಗುಂಪಿನಲ್ಲಿ ಕಾಣಬರುವ ಸಾಮಾಜಿಕ ಸಂಬಂಧಗಳು ಇತರೆಲ್ಲಾ ಗುಂಪುಗಳಿಗಿಂತ ಅತ್ಯಂತ ಭಿನ್ನವಾಗಿರುತ್ತದೆ. ದೊಡ್ಡ ಗುಂಪುಗಳಿಗಿಂತ ಬೇರೆಯ ಸ್ವರೂಪ ಹೊಂದಿರುತ್ತದೆ.

ಡೈಯಾಡ್ ಸಂಪೂರ್ಣಜವಾಗಿ ತನ್ನ ಸದಸ್ಯರನ್ನು ಅವಲಂಬಿಸಿರುತ್ತದೆ. ಇತರ ಗುಂಪುಗಳಲ್ಲಿ ಸದಸ್ಯರು ಬಂದು-ಹೋಗಬಹುದು. ಆದರೆ, ಡೈಯಾಡ್ ೧೦೦% ತನ್ನ ಸದಸ್ಯರ ಇರುವಿಕೆಯ ನಿರ್ಬಂಧಕ್ಕೆ ಒಳಪಟ್ಟಿರುವುದು. ಹಾಗಾಗಿ ಅದನ್ನು ಸದಸ್ಯತನದಿಂದ ಸ್ವಾಯತ್ತತೆಯನ್ನು ಪಡೆದುಕೊಂಡಿರುವ ಗುಂಪೆಂದು ಹೇಳಲಾಗುವುದಿಲ್ಲ.

ಡೈಯಾಡಿನ ಅಸ್ತಿತ್ವವು ಅದರ ಇಬ್ಬರೂ ಸದಸ್ಯರನ್ನು ಅವಲಂಬಿಸಿರುವುದು. ಒಬ್ಬರು ಸಾಮಾಜಿಕ ಸಂಬಂಧದಿಂದ ಹೊರಹೋದರೂ ಸಾಕು, ಡೈಯಾಡ್ ಅಸ್ತಿತ್ವದಿಲ್ಲದಂತಾಗುವುದು. ಹಾಗಾಗಿ, ಡೈಯಾಡ್ ವ್ಯಕ್ತಿಗಳನ್ನು ಮೀರಿನಿಂತ ಗುಂಪಲ್ಲ. ಇದಕ್ಕೆ ವಿರುದ್ಧವಾಗಿ, ಮೂರು ಜನರ ಸೋಶಿಯೇಶನ್ನಿನಲ್ಲಿ, ಓರ್ವ ವ್ಯಕ್ತಿ ಹೊರಬಂದರೂ ಕೂಡ, ಗುಂಪಿನ ಅಸ್ತಿತ್ವ ಉಳಿದುಕೊಳ್ಳುವುದು.


ಆ. ಟ್ರೈಯಾಡ್ (Triad)

ಇದು ಮೂರು ಸಂಬಂಧಗಳ ಗುಂಪಾಗಿರುವುದು. ಡೈಯಾಡಿನಂತೆ, ಸದಸ್ಯರ ಹೊರಹೋಗುವಿಕೆಯಿಂದ ಗುಂಪು ತನ್ನ ಅಸ್ತಿತ್ವ ಕಳೆದೊಕೊಳ್ಳುತ್ತದೆಂಬ ಸ್ಥಿತಿ ಇಲ್ಲಿರುವುದಿಲ್ಲ. ಓರ್ವ ಸದಸ್ಯ ಹೊರಬಂದರೂ ಕೂಡ, ಇತರ ಇಬ್ಬರು ಮೂರನೆಯವನ ವಿರುದ್ಧ ಸಂಬಂಧ ಮುಂದುವರಿಸಬಹುದಾದ್ದರಿಂದ ಗುಂಪು ಉಳಿದುಕೊಳ್ಳುವ ಸಾಧ್ಯತೆಗಳಿರುತ್ತವೆ.

ಈ ಬಗೆಯ ತ್ರಿವಳಿ ಸಂಬಂಧದಲ್ಲಿ ಮೂರನೆಯ ವ್ಯಕ್ತಿಯು ಮೂರು ಬಗೆಯ ಪಾತ್ರಗಳನ್ನು ನಿರ್ವಹಿಸಬಹುದು:

೧. ಮಧ್ಯಸ್ಥಿಕೆ: ಇತರ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದಾಗ, ಮೂರನೆಯ ವ್ಯಕ್ತಿ ತಟಸ್ಥನಾಗಿ, ವಸ್ತುನಿಷ್ಠ ನೋಡುಗನಾಗಿ, ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ಪಾತ್ರ ವಹಿಸಿಕೊಳ್ಳಬಹುದು

೨. ಇಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಹುದು

೩. ಮೂರನೆಯ ಪಾತ್ರಧಾರಿಯು ಉದ್ದೇಶಪೂರ್ವಕವಾಗಿ ಇತರರಿಬ್ಬರ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಒಡೆದು ಆಳುವ ನಿಯಮ ಪಾಲಿಸುವುದು.


ಇ. ಅಧಿಕಾರ ಮತ್ತು ಅಧೀನತೆ

ಮೂರನೆಯ ಸೋಶಿಯೇಶನ್ ಸ್ವರೂಪವು ಅತ್ಯಂತ ಪ್ರಚಲಿತವಾದಂತಹ, ಆಧಿಕಾರ-ಅಧೀನತೆಯ ಸಂಬಂಧದ್ದು. ಅಧಿಕಾರ (superordination) ಎಂದರೆ ಸಂಪೂರ್ಣ ಪ್ರಾಬಲ್ಯತೆ ಹಾಗು ಅಧೀನತೆ (subordination) ಸಂಪೂರ್ಣ ವಿಧೇಯತೆಯನ್ನು ಸೂಚಿಸುವುದು. ಪ್ರತಿಯೊಂದು ಸಮಾಜದಲ್ಲೂ ಒಂದಲ್ಲ ಒಂದು ಬಗೆಯ ಪ್ರಾಬಲ್ಯತೆ ಅನಿವಾರ್ಯ. ಆದರೆ, ಸಿಮ್ಮೆಲ್ ಗುರುತಿಸುವ ಅಧಿಕಾರ ಸಂಬಂಧದಲ್ಲಿ, ಅಧಿಕಾರಿಯು ತಾನೇ ಸೃಜಿಸಿದ ನಿಯಮಗಳನ್ನು ಅನುಸರಿಸುವ ಇಚ್ಛೆಯುಳ್ಳವನಾಗಿರುತ್ತಾನೆ (ನಿಯಮಗಳು ಕೇವಲ ಇತರರಿಗೆ ಮಾತ್ರವಲ್ಲ, ತನಗೂ ಅನ್ವಯವಾಗುತ್ತದೆಂದು ಒಪ್ಪಕೊಂಡಿರುವ ಸ್ಥಿತಿ). ಮುಂದುವರಿದು, ಅಧಿಕಾರಿ-ಅಧೀನ ಸಂಬಂಧವು ಸಮಪ್ರಮಾಣದ ಭಾಗವಹಿಸುವಿಕೆಯನ್ನು ಹೊಂದಿರುವುದಿಲ್ಲ ಎನ್ನುತ್ತಾರೆ ಸಿಮ್ಮೆಲ್. ಅಧಿಕಾರಿಯು ತನ್ನ ಸಂಪೂರ್ಣ ವ್ಯಕ್ತಿತ್ವವನ್ನು ತೊಡಗಿಸಿಕೊಂಡರೆ, ಅಧೀನರು ಕೇವಲ ಭಾಗಶಃ ತೊಡಗಿಸಿಕೊಂಡಿರುತ್ತಾರೆ.

ಒಟ್ಟಿನಲ್ಲಿ, ಸಮಾಜದ ಬಗೆಗಿನ ತಮ್ಮ ಅಧ್ಯಯನದಲ್ಲಿ ಸಿಮ್ಮೆಲ್ ಅವರು ಸೋಶಿಯೇಶನ್ನಿನಲ್ಲಿ ಭಾಗವಹಿಸುವ ವ್ಯಕ್ತಿಗಳ ಸಂಖ್ಯೆ ಅದರ ಸ್ವರೂಪವನ್ನು ಯಾವಬಗೆಯಲ್ಲಿ ನಿರ್ಧರಿಸುತ್ತದೆ ಎಂಬುದರ ಬಗ್ಗೆ ಗಮನ ಹರಿಸಿರುವರು. ಸಣ್ಣ ಗುಂಪುಗಳಲ್ಲಿ ದೈನಂದಿನ ಅಂತಃಕ್ರಿಯೆಗಳಲ್ಲಿ ತೊಡಗುವ ಸಾಧ್ಯತೆಗಳು ಹೆಚ್ಚು. ಗುಂಪಿನ ಗಾತ್ರ ದೊಡ್ಡದಾದಂತೆ, ಸದಸ್ಯರ ಗುಣಲಕ್ಷಣಗಲ್ಲಿ ವಿಭಿನ್ನತೆ ಉಂಟಾಗುತ್ತದೆ. ನಿರ್ದಿಷ್ಟ ಗಾತ್ರದ ನಂತರ, ವೈಯಕ್ತಿಕತೆ ಮತ್ತು ರಾಚನಿಕ ವೈವಿಧ್ಯತೆ ಹೆಚ್ಚುವುದು. ಮುಖತಃ ನಡೆಯುವ ಅಂತಃಕ್ರಿಯಗಳ ಬದಲು ಔಪಚಾರಿಕ ರೂಪದ ಕಛೇರಿಗಳು, ಲಿಖಿತ ನಿಯಮಗಳು, ಸ್ಪಷ್ಟವಾಗಿ ಗುರುತಿಸಲ್ಪಡುವಂತಹ ಬಾಧ್ಯಸ್ಥಿಕೆಗಳು ಮತ್ತು ಕರ್ತವ್ಯಗಳು ಹುಟ್ಟಿಕೊಳ್ಳುವವು. ಸಣ್ಣ ಗುಂಪುಗಳಲ್ಲಿನ ಸದಸ್ಯರು ಸಾಮಾಜಿಕ ಸಂಬಂಧಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡರೆ, ದೊಡ್ಡ ಗುಂಪುಗಳಲ್ಲಿನ ಭಾಗವಹಿಸುವಿಕೆ ಸಂಪೂರ್ಣವಾಗಿರುವುದಿಲ್ಲ ಮತ್ತು ಅವರ ಭಾಗಶಃ ವ್ಯಕ್ತಿತ್ವಕ್ಕೆ ಸೀಮಿತವಾಗಿರುತ್ತದೆ.


Recent Posts

See All

Formal Sociology: ಫಾರ್ಮಲ್ ಸಮಾಜಶಾಸ್ತ್ರ

ಜಾರ್ಜ್ ಸಿಮ್ಲೆಲ್ ಅವರು ಜರ್ಮನಿಯ ಪ್ರಸಿದ್ಧ ತತ್ತ್ವಶಾಸ್ತ್ರಜ್ಞರಾದ ಇಮಾನ್ಯುಯೆಲ್ ಕ್ಯಾಂಟ್ ಅವರಿಂದ ಪ್ರಭಾವಿತರಾಗಿದ್ದರು. ಈ ಪ್ರಭಾವದ ಹಿನ್ನಲೆಯಲ್ಲಿ ಸಿಮ್ಮೆಲ್...

Comments


©2022 by LearningSociology. Proudly created with Wix.com

bottom of page