Apr 23, 2024
Apr 23, 2024
Apr 23, 2024
Apr 23, 2024
Apr 23, 2024
Updated: Apr 23, 2024
ಸಮಾಜ
ಮನುಷ್ಯರು ವಾಸಿಸುವ ಅತ್ಯಂತ ದೊಡ್ಡ ಸಾಮಾಜಿಕ ಗುಂಪೆಂದರೆ – ಸಮಾಜ. ಈ ಗುಂಪಿಗೆ ನಿರ್ದಿಷ್ಟ ಭೌಗೋಳಿಕ ಸೀಮೆಗಳಿರುತ್ತದೆ ಮತ್ತು ಸಾಮಾನ್ಯ ಸಂಸ್ಥೆಗಳನ್ನು ಹೊಂದಿರುತ್ತದೆ. ಸಮಾಜಗಳು ಮತ್ತು ರಾಷ್ಟ್ರಗಳು ಒಂದೇ ಆಗಬೇಕಾಗಿಲ್ಲ. ಒಂದು ರಾಷ್ಟ್ರವು ಅನೇಕ ಸಮಾಜಗಳನ್ನು (ಅಂದರೆ, ಸಾಮಾಜಿಕ ಗುಂಪುಗಳನ್ನು) ಹೊಂದಿರಬಹುದು. ಉದಾಹರಣೆಗೆ, ಬೇರೆ-ಬೇರೆ ಸಮಾಜಗಳು ವಿಭಿನ್ನವಾದ ಸಂಸ್ಥೆಗಳನ್ನು, ನ್ಯಾಯಪದ್ಧತಿಗಳನ್ನು/ನ್ಯಾಯತತ್ತ್ವಗಳನ್ನು ಹೊಂದಿರಬಹುದು. ಉದಾಹರಣೆಗೆ, ಭಾರತದಲ್ಲಿ ಅಪರಾಧ ಕಾನೂನು ಎಲ್ಲರಿಗೂ ಸಮಾನವಾಗಿದ್ದರೂ, ನಾಗರಿಕ/ಸಿವಿಲ್ ನ್ಯಾಯದಲ್ಲಿ ವ್ಯತ್ಯಾಸಗಳನ್ನು ಕಾಣಬಹುದು. ಕೆನಡಾ ದೇಶದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ನ್ಯಾಯವ್ಯವಸ್ಥೆಗಳೆರೆಡೂ ಕಂಡುಬರುತ್ತದೆ.
ಸಮಾಜದಲ್ಲಿನ ಸಂಬಂಧಗಳನ್ನು ನಾವು ಸಾಮಾಜಿಕ ಅಂತಃಕ್ರಿಯೆಯ ಮೂಲಕ ಗುರುತಿಸಬಹುದು/ಅವಲೋಕಿಸಬಹುದು. ಅಂತಃಕ್ರಿಯೆ ವಿವಿಧ ಹಂತಗಳಲ್ಲಿ – ಮನೆಯಲ್ಲಿ, ನೆರೆಹೊರೆಯಲ್ಲಿ, ಶಾಲಾ-ಕಾಲೇಜಿಗಳಲ್ಲಿ, ಉದ್ಯೋಗದ ಸ್ಥಳದಲ್ಲಿ, ಉಂಟಾಗುವುದು. ಸಾಮಾಜಿಕ ಅಂತಃಕ್ರಿಯೆಯಿಲ್ಲದೆ ಸಮಾಜ ಅಸ್ತಿತ್ವದಲ್ಲಿರಲು ಸಾಧ್ಯವೇ ಇಲ್ಲ. ಕ್ರಿಯೆ-ಪ್ರತಿಕ್ರಿಯೆಗಳು ನಡೆಯಬೇಕೆಂದರೆ, ಜನರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಅಂದರೆ, ಜನರು ಅರ್ಥವನ್ನು ಪರಸ್ಪರ ಹಂಚಿಕೊಳ್ಳುವುದರಿಂದ ಮಾತ್ರ ಅಂತಃಕ್ರಿಯೆ ಸಾಧ್ಯವಾಗುತ್ತದೆ. ಹಾಗಾಗಿ ಸಂಸ್ಥೆಗಳು ಅರ್ಥವನ್ನು ಪ್ರಮಾಣೀಕರಿಸುವ, ಅರ್ಥಕ್ಕೆ ಸಾಮಾನ್ಯತೆಯ ಲಕ್ಷಣವನ್ನು ನೀಡುವ ಕಾರ್ಯವನ್ನು ಮಾಡುವವು.
ಅರ್ಥವನ್ನು ಹಂಚಿಕೊಳ್ಳುವ ಪ್ರಕ್ರಿಯೆಯು ಕುತೂಹಲಕರವಾಗಿರುವುದು. ಅಂತಃಕ್ರಿಯೆಯು ಹಂಚಿಕೊಳ್ಳಲ್ಪಟ್ಟ ಅರ್ಥಗಳಿಂದ ಸಾಧ್ಯ. ಆದರೆ, ಹಂಚಿಕೊಳ್ಳುವುದರಿಂದ ಅರ್ಥದ – ಅರ್ಥ ಮಾಡಿಕೊಳ್ಳುವ ಕ್ರಿಯೆಗೆ ಪುಷ್ಟಿ ದೊರಕುವುದು. ಅಲ್ಲದೇ, ಹಂಚಿಕೊಳ್ಳುವಿಕೆಯು ಜನರ ನಡುವಿನ ಸಂಪರ್ಕದಿಂದ ಸಾಧ್ಯವಾಗುವುದು. ಒಟ್ಟಿನಲ್ಲಿ, ಜನರ ನಡುವೆ ಸಂಪರ್ಕ ಹಂಚಿಕೊಳ್ಳಲ್ಪಟ್ಟ ಅರ್ಥದಿಂದ ಸಾಧ್ಯ ಮತ್ತು ಸಂಪರ್ಕದಿಂದಾಗಿ ಅರ್ಥಗಳು ನಿರಂತರತೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಒಂದು ಮತ್ತೊಂದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ.
ಜನರು ಯಾವುದರ ಅರ್ಥವನ್ನು ಹಂಚಿಕೊಳ್ಳುವರು?
ಮನುಷ್ಯರು ಹುಟ್ಟುವುದು ಸಾಮಾಜಿಕ ಗುಂಪುಗಳಲ್ಲಿ, ಜೀವನ ನಡೆಸುವುದು ಗುಂಪುಗಳಲ್ಲಿ ಹಾಗು ಜೀವನದ ಅಂತ್ಯದವರೆಗೂ ಗುಂಪಿನಲ್ಲಿಯೇ ಇರುತ್ತಾರೆ. ಗುಂಪಿಲ್ಲದ ಮಾನವ ಜೀವನ ಅಸಾಧ್ಯ. ಸಾಮಾಜಿಕ ಗುಂಪಿನ ಕಟ್ಟುಪಾಡಗಳು ಬೇಕಿಲ್ಲವೆಂದು ತಿರಸ್ಕರಿಸಿರುವ ಸಂನ್ಯಾಸಿಗಳಿರಬಹುದು ಅಥವಾ ಗುಂಪಿನ ಹೊರಗಡೆ ಸ್ವಇಚ್ಛೆಯಿಂದ ವಾಸಿಸುವ ಏಕಾಂಗಿ ವ್ಯಕ್ತಿಗಳಾಗಿರಬಹುದು ಅಥವಾ ಗುಂಪಿನಲ್ಲಿ ವಾಸಿಸುವವರಿರಬಹುದು, ಎಲ್ಲರೂ ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪರೋಕ್ಷವಾಗಿಯಾದರೂ ಗುಂಪನ್ನು ಅವಲಂಬಿಸಬೇಕು. ಈಗಾಗಲೇ ನಾವು ತಿಳಿದುಕೊಂಡಂತೆ, ಗುಂಪು ಜೀವನ ಹಂಚಿಕೊಳ್ಳಲ್ಪಟ್ಟಂತಹ ಅರ್ಥಗಳನ್ನು (ಸಹಮತವನ್ನು) ಅವಲಂಬಿಸಿದೆ. ಹಾಗಾದರೆ, ಯಾವುದರ ಅರ್ಥದ ಬಗ್ಗೆ ನಾವು ಗಮನ ಹರಿಸಬೇಕು?
ಮೊದಲನೆಯದಾಗಿ, ಅಂತಃಕ್ರಿಯೆ ಸಾಧ್ಯವಾಗಬೇಕೆಂದರೆ, ಮಾನವರ ನಡುವೆ ಸಂವಹನ ಅವಶ್ಯಕ. ಮನುಷ್ಯ ತನ್ನ ಚಿಂತನೆಗಳನ್ನು, ಭಾವನೆಗಳನ್ನು, ಅಭಿಪ್ರಾಯಗಳನ್ನು ಇತರರೊಂದಿಗೆ ವ್ಯಕ್ತಪಡಿಸುವನು ಮತ್ತು ಅವರ ಪ್ರತಿಕ್ರಿಯೆಗಳನ್ನು ಎದುರು ನೋಡುವನು ಹಾಗು ಪುನಃ ಅದಕ್ಕೆ ಪ್ರತಿಕ್ರಿಯಿಸುವನು. ಈ ಬಗೆಯ ಸಂವಹನ ಪ್ರಾಥಮಿಕವಾಗಿ ಭಾಷೆಯ ಮೂಲಕ ಉಂಟಾಗುವುದು.
ಭಾಷೆ ಮೂಲತಃ ಶಬ್ದಗಳಿಂದ ಮಾಡಲ್ಪಟ್ಟಿರುವುದು. ಅದಲ್ಲದೇ, ಸನ್ನೆಗಳ ಮೂಲಕ ಕೂಡ ನಡೆಯುವುದು. ಸನ್ನೆ/ಸಂಜ್ಞೆಗಳು ದೈಹಿಕ ಚರ್ಯೆಗಳಾಗಿರಬಹುದು ಅಥವಾ ಬರವಣಿಗೆಯ ಸ್ವರೂಪದಲ್ಲಿರಬಹುದು. ಉದಾಹರಣೆಗೆ, ಮುಖಭಾವ, ಕೈ/ಕಣ್ಸನ್ನೆ, ಬರವಣಿಗೆಗೆ ಬಳಸುವ ಕನ್ನಡ, ಸಂಸ್ಕೃತ, ಇಂಗ್ಲೀಷ್, ತಮಿಳು, ತೆಲುಗಿನಂತಹ ಭಾಷೆಗಳು. ನಾವು ಬಳಸುವ ಪದಗಳು, ಸಂಖ್ಯೆಗಳು, ದೈಹಿಕ ಹಾವ-ಭಾವಗಳ ಬಗ್ಗೆ ನಮ್ಮಲ್ಲಿ ಸಹಮತವಿರುವುದರಿಂದ ನಮ್ಮ ನಡುವೆ ಸಂವಹನ ಸಾಧ್ಯವಾಗಿರುವುದು.
Photo by RODNAE Productions on Pexels.com
Photo by Alena Shekhovtcova on Pexels.com
ದೈಹಿಕ ಚರ್ಯೆಗಳ ಮೂಲಕ ನಡೆಯುವ ಸಂವಹನ ಮಾನವರಿಗೆ ಸೀಮಿತವಾದ ಕೌಶಲ್ಯವೇನಲ್ಲ. ಪ್ರಾಣಿಗಳಲ್ಲೂ ಕಾಣಬರುವುದು.
Photo by Sam Lion on Pexels.com
Photo by Aenic Visuals on Pexels.com
ಆದರೆ, ವಿಶಿಷ್ಟ ಸ್ವರೂಪದ, ಸುಸಂಸ್ಕೃತವಾದ ಸಂವಹನ ಸಾಧನ (ನಾವು ಬಳಸುವ ಭಾಷೆ) ಮಾತ್ರ ಕಾಣಬರುವುದು.
ಎರಡನೆಯದಾಗಿ, ಮಾನವರು ತಮ್ಮ ಸಂಬಂಧಗಳ ಬಗ್ಗೆ ಕೂಡ ಸಹಮತ ಹೊಂದಿರುತ್ತಾರೆ. ಪತಿ-ಪತ್ನಿಯರು ಪರಸ್ಪರರ ಬಗ್ಗೆ ಹೊಂದಿರುವ ನಿರೀಕ್ಷೆಗಳ ಬಗ್ಗೆ ಸಹಮತವಿರುವುದರಿಂದಲೇ ಅವರು ಒಟ್ಟಿಗೆ ಜೀವನ ನಡೆಸಲು ಸಾಧ್ಯ. ಪೋಷಕರು-ಮಕ್ಕಳ ನಡುವೆಯೂ ನಿರೀಕ್ಷೆಗಳು ಹಂಚಿಕೊಳ್ಳಲ್ಪಟ್ಟಿರುತ್ತದೆ. ಹಾಗೆಯೇ, ಸ್ನೇಹಿತರ ನಡುವೆ, ನೆರೆಹೊರೆಯವರ ನಡುವೆ, ಉದ್ಯೋಗ ಸ್ಥಳದಲ್ಲಿ ಕಂಡುಬರುವುದು. ಅಷ್ಟೇ ಅಲ್ಲ, ಅಪರಿಚಿತರು ಸೇರುವಂತಹ ಸ್ಥಳಗಳಾದ ಉದ್ಯಾನವನ, ಸಿನೆಮಾ ಟಾಕೀಸ್, ಬಸ್ ಅಥವಾ ರೈಲು ನಿಲ್ದಾಣಗಳಲ್ಲೂ ಕೂಡ ಮನುಷ್ಯರು ಪರಸ್ಪರರೊಡನೆ ಯಾವ ರೀತಿ ವರ್ತಿಸಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಗಳಿರುವುದಷ್ಟೇ ಅಲ್ಲ, ಅವುಗಳ ಬಗ್ಗೆ ಅತ್ಯಲ್ಪವಾದ ಭಿನ್ನ ನಿಲುವುಗಳಿರುವುದನ್ನು ನಾವು ಕಾಣಬಹುದು.
ಮೂರನೆಯದಾಗಿ, ಮಾನವರ ನಡುವಿನ ಸಂಬಂಧಗಳು ಸ್ಪಷ್ಟ ಸ್ವರೂಪ ಪಡೆದಂತೆ, ಅವುಗಳು ಸಾಮಾಜಿಕ ಸಂಸ್ಥೆಗಳಾಗಿ ರೂಪುಗೊಳ್ಳುವುದು. ಹಾಗಾಗಿ, ಕುಟುಂಬ, ಧರ್ಮ, ಆರ್ಥಿಕತೆ, ವಿವಾಹದಂತಹ ಸಾಮಾಜಿಕ ಸಂಸ್ಥೆಗಳಲ್ಲಿ ಸುಸ್ಪಷ್ಟವಾದ ಸಹಮತ ಕಂಡುಬರುತ್ತದೆ.
ಸಮಾಜದಲ್ಲಿ ಕಾಣಬರುವಂತಹ ಸಹಮತ ಅಭ್ಯಾಸದಿದ ಬಂದಿದ್ದು, ಅದು ಮನುಷ್ಯರ ವರ್ತನೆಯಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಸಾಮಾಜಿಕವಾಗಿ ಒಪ್ಪಲ್ಪಟ್ಟಂತಹ ವರ್ತನೆಯೆಂದರೆ, ನಿರೀಕ್ಷಿತ ರೀತಿಯ ಕ್ರಿಯೆ-ಪ್ರತಿಕ್ರಿಯೆಗಳೇ ಹೊರತು ವಿನಃ, ಮತ್ತೊಂದಲ್ಲ. ಯಾವಾಗ ಈ ನಿರೀಕ್ಷೆಗಳಿಗಿಂತ ಭಿನ್ನವಾಗಿ ಜನರು ವರ್ತಿಸುವರೋ, ಆಗ ಅಂತಃಕ್ರಿಯೆಯಲ್ಲಿ ವ್ಯತ್ಯಯವುಂಟಾಗ ಬಹುದು. ಅನಿರೀಕ್ಷತತೆಯಿಂದಾಗಿ ಮೊದಲು ಗಲಿಬಿಲಿ/ತಬ್ಬಿಬ್ಬಾಗ ಬಹುದು, ತದನಂತರ ಸಾವರಿಸಿಕೊಂಡು ಪ್ರತಿಕ್ರಿಯಿಸಬಹುದು ಅಥವಾ ಜಗಳವಾಗಬಹುದು ಅಥವಾ ಸಂಪೂರ್ಣವಾಗಿ ಮುರಿದು ಬೀಳಬಹುದು. ಒಂದು ಸರಳವಾದ ಚಟುವಟಿಕೆ ಇದನ್ನು ಸುಲಭವಾಗಿ ಅರ್ಥ ಮಾಡಿಸುತ್ತದೆ. ಇದು ನಿಮ್ಮ ಮನೆಯ ಸದಸ್ಯರೊಡನೆ/ಸದಸ್ಯರೊಡನೆ ಮಾಡಬಹುದಾದ ಚಟುವಟಿಕೆ. ಮನೆಯವರು/ಸ್ನೇಹಿತರು ನಿಮಗೆ – ಶುಭೋದಯ/ಗುಡ್ ಮಾರ್ನಿಂಗ್ ಎಂದು ಹೇಳಿದರೆ, ತಕ್ಷಣ – ಏನು ಶುಭ, ಯಾವ ಗುಡ್ ಬಗ್ಗೆ ಹೇಳುತ್ತಿದ್ದೀರ ಎಂದು ಪ್ರಶ್ನಿಸಿ. ಅವರ ಪ್ರತಿಕ್ರಿಯೆಯನ್ನು ದಾಖಲಿಸಿಕೊಳ್ಳಿ. ಹಾಗೆಯೇ, ಊಟ ಚೆನ್ನಾಗಿದೆಯೇ ಎಂದು ಕೇಳಿದರೆ, ಚೆನ್ನಾಗಿದೆ ಎಂದರೇನು? ಯಾವ ಊಟದ ಬಗ್ಗೆ ಕೇಳುತ್ತಿರುವಿರಿ/ ಅನ್ನವೋ, ಪಲ್ಯವೋ, ಮಜ್ಜಿಗೆಯೋ? ನೋಡಲು ಚೆನ್ನಾಗಿದೆ ಎಂದೋ ಅಥವಾ ಬಣ್ಣ ಚೆನ್ನಾಗಿದೆ ಎಂದೋ ಅಥವಾ ರುಚಿ ಚೆನ್ನಾಗೆದೆ ಎಂದು ಅರ್ಥವೋ ಎಂದು ಮರುಪ್ರಶ್ನಿಸಿ. ಮುಂದುವರೆದು, ಚೆನ್ನಾಗಿದೆ ಎಂದರೆ, ಅದರಲ್ಲಿ ಬಳಸಿರುವ ಪದಾರ್ಥಗಳ ಬಗ್ಗೆ ಕೇಳುತ್ತಿರುವಿರೋ ಅಥವಾ ಊಟವನ್ನು ಬಡಿಸಲು ಬಳಸಿರುವ ತಟ್ಟೆ, ಸ್ಪೂನ್ ಮುಂತಾದವುಗಳ ಬಗ್ಗೆ ಕೇಳುತ್ತಿದ್ದೀರ ಎಂದು ಪ್ರಶ್ನೆಗಳನ್ನು ಮುಂದುವರಿಸಿ. ಅವರು ತಬ್ಬಿಬ್ಬಾಗುವುದನ್ನು ನೋಡಿ ನಿಮಗೆ ನಗು ಬರಬಹುದು ಆದರೆ ನಿಮ್ಮ ಜೊತೆಯವರು ನಿಮ್ಮ ಬಗ್ಗೆ ಕೋಪಗೊಳ್ಳ ಬಹುದು, ಬೇಜಾರು ಪಟ್ಟಿಕೊಳ್ಳಬಹುದು ಅಥವಾ ತಲೆ ಕೆಟ್ಟಿದೆಯೇ ಎಂದು ಬೈದುಬಿಡಬಹುದು.
ನಿಮ್ಮ ಪ್ರಶ್ನೆಗಳು ತಾರ್ಕಿಕವಾಗಿ ಸರಿಯಾದುದೇ ಆದರೂ, ನಿಮ್ಮ ಜೊತೆಯವರೇಕೆ ಗಲಿಬಿಲಿಗೊಳ್ಳುತ್ತಾರೆ? ಅವರೇಕೆ ಕೋಪಗೊಳ್ಳುತ್ತಾರೆ? ತರ್ಕಬದ್ಧ ಪ್ರಶ್ನೆಗಳಿಂದ ಬೇಜಾರೇಕೆ ಆಗುವುದು?
ಉತ್ತರ ಅತ್ಯಂತ ಸರಳ. ಶುಭೋದಯವೆಂದು ಯಾರಾದರು ಹೇಳಿದರೆ, ಪ್ರತಿಯಾಗಿ ಶುಭೋದಯವೆಂಬ ಉತ್ತರ ನಿರೀಕ್ಷಿತ. ಅದರ ಬದಲು, ಏನು ಶುಭವೋ ಎಂಬ ಪ್ರತಿಕ್ರಿಯೆ, ನಿರೀಕ್ಷಿತ ವರ್ತನೆಗಿಂತ ಭಿನ್ನವಾಗಿದ್ದು, ಒರಟುತನ, ಅನಾಗರಿಕತನ ಎಂದು ಕರೆಸಿಕೊಳ್ಳುತ್ತದೆ. ಹಾಗೆಯೇ, ಊಟ ಚೆನ್ನಾಗಿದೆಯೇ ಎಂಬ ಪ್ರಶ್ನಗೆ ಕೇಳಿದಂತಹ ಪ್ರತಿಪ್ರಶ್ನೆಗಳೆಲ್ಲವೂ ಕೂಡ ತಾರ್ಕಿಕವಾಗಿ ಸರಿಯಾದರೂ ಕೂಡ, ಸಾಮಾಜಿಕವಾಗಿ ಅವು ಅಸಮರ್ಪಕ ಎಂದು ಕರೆಯಲ್ಪಡುತ್ತವೆ. ಊಟ ಮತ್ತು ಚೆನ್ನಾಗಿದೆ ಎಂಬ ಪದಗಳ ಅರ್ಥ ಸ್ಪಷ್ಟ, ಯಾವುದೇ ವಿವರಣೆಗಳ ಅವಶ್ಯಕತೆಯಿಲ್ಲ ಎಂಬುದು ರೂಢಿಯಲ್ಲಿದೆ. ಹಾಗಾಗಿ, ಪ್ರತಿಪ್ರಶ್ನೆಗಳು ಸಮಸ್ಯೆಗಳಿಗೆ ಕಾರಣವಾಗುವುದು. ನಾವು ನಮಗೆ ತಿಳಿಯದೆಯೇ, ಎದುರಿರುವ ಸನ್ನಿವೇಶವನ್ನು ಮೇಲುನೋಟಕ್ಕೆ “ಸ್ಪಷ್ಟ, ಸುಸ್ಪಷ್ಟ” ಎಂದು ಭಾವಿಸಿಕೊಂಡು, ದೈನಂದಿನ ವ್ಯವಹಾರದಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದಲ್ಲದೆ, ಪ್ರತಿ ಬಾರಿಯೂ ನಾವು ವಿವರಣೆಗಳನ್ನು ಪಡೆದೇ ಮುಂದುವರಿಯುತ್ತೇವೆ ಎಂದು ಬಯಸಿದರೆ, ನಿತ್ಯ ಜೀವನ ನರಕವಾಗುವುದು. ಸಹಮತ (ಅರ್ಥಗಳ ಬಗ್ಗೆ) ಇರುವುದರಿಂದಲೇ ಸಾಮಾಜಿಕ ಅಂತಃಕ್ರಿಯೆ ಸಾಧ್ಯ. ಯೋಚಿಸದೇ ಒಪ್ಪಿಕೊಂಡಂತಹ ವಾಸ್ತವಗಳಿವು (taken for granted realities).
ಸಹಮತ ಹೇಗೆ ಉಂಟಾಗುವುದು?
ಸಮಾಜದಲ್ಲಿ ಸಹಮತ ಸಂಪೂರ್ಣವಾಗಿ ಕಂಡುಬರುವುದೇ ಅಥವಾ ಭಿನ್ನಮತ ಕೂಡ ಕಾಣಬರುತ್ತದಯೇ? ಸಹಮತ ಹೇಗೆ ಉಂಟಾಗುವುದು? ಜನರೇಕೆ ಅರ್ಥಗಳನ್ನು ಹಂಚಿಕೊಳ್ಳುವರು?
ಪ್ರಪ್ರಥಮವಾಗಿ ನಾವು ಗುರುತಿಸಬೇಕಾದ ಅಂಶವೆಂದರೆ, ಅಂತಃಕ್ರಿಯೆ ಕೇವಲ ಸಹಕಾರ, ಸಹಮತದಿಂದ ಮಾಡಲ್ಪಟ್ಟಿರುವುದಿಲ್ಲ. ಅದು ಸ್ಪರ್ಧಾತ್ಮಕ ಸ್ವರೂಪದ್ದಾಗಿರಬಹುದು ಅಥವಾ ಸಂಘರ್ಷಾತ್ಮಕ ಸ್ವರೂಪ ಪಡೆಯಬಹುದು. ಸ್ಪರ್ಧೆಯಲ್ಲಾಗಲಿ, ಸಂಘರ್ಷದಲ್ಲಾಗಲಿ, ನಿರ್ದಿಷ್ಟ ಮಟ್ಟದ ಸಹಮತ ಮತ್ತು ಸಹಕಾರ ಅವಶ್ಯಕ. ಇಲ್ಲದಿದ್ದರೆ, ಅಂತಃಕ್ರಿಯೆ ಅಸಾಧ್ಯವಾಗುವುದು. ಅಂತಃಕ್ರಿಯೆಯು ಮೌಖಿಕ ಸಂವಹನವನ್ನು ಒಳಗೊಂಡಿರಬಹುದು ಅಥವಾ ಇಲ್ಲದಿರಬಹುದು. ಅನೇಕ ಸಂದರ್ಭಗಳಲ್ಲಿ ದೈಹಿಕ ಚರ್ಯೆಗಳೇ ಸಂವಹನದ ಪ್ರಮುಖ ಸಾಧನವಾಗುತ್ತದೆ. ಈ ಸಂವಹನಾತ್ಮಕ ಸೂಚನೆಗಳು ಸಹಕಾರ, ಸ್ಪರ್ಧೆ, ಸಂಘರ್ಷಗಳಿಗೆ ಮಾರ್ಗದರ್ಶಿಗಳಾಗುತ್ತವೆ. ಈ ಎಲ್ಲ ಸಂದರ್ಭಗಳಲ್ಲೂ ಅಂತಕ್ರಿಯೆ ಸಮಾನತೆಯ ನೆಲೆಯಲ್ಲಿ ನಡೆಯುವುದು, ಕರ್ತೃಗಳ ನಡುವೆ ಕ್ರಿಯೆಯ ಅರ್ಥದ ಬಗ್ಗೆ ಸಂಪೂರ್ಣವಾದ/ಏಕರೀತಿಯ ಭಾವನೆ/ಸಹಮತವಿದೆ ಎಂದೇನಲ್ಲ. ಅಂತಃಕ್ರಿಯಯಲ್ಲಿ ತೊಡಗಿರುವವರು ತಮ್ಮ ತಮ್ಮ ನೆಲೆಯಲ್ಲಿ ಪರಸ್ಪರರನ್ನು ಅರ್ಥಮಾಡಿಕೊಳ್ಳುತ್ತಾರೆಂಬುದು ಮುಖ್ಯ.
ಸಾಮಾಜಿಕ ಗುಂಪುಗಳಲ್ಲಿನ ಸಹಮತಕ್ಕೆ ಮುಖ್ಯ ಕಾರಣ ಸಾಮಾಜೀಕರಣ. ಮಕ್ಕಳು/ವ್ಯಕ್ತಿಗಳು ಗುಂಪಿನ ಮೌಲ್ಯಗಳು ಮತ್ತು ನಿಯಮಗಳನ್ನು ಕಲಿಯುವಂತಹ, ತಮ್ಮ ಜೀವನದ ಭಾಗವಾಗಿ ಮಾಡಿಕೊಳ್ಳುವಂತಹ ಪ್ರಕ್ರಿಯೆಯನ್ನು ಸಾಮಾಜೀಕರಣವೆಂದು ಕರೆಯಬಹುದು. ಸರಳವಾಗಿ ಹೇಳಬೇಕೆಂದರೆ, ಸಮಾಜ ಒಪ್ಪುವಂತಹ ವರ್ತನೆಯ ಕಲಿಯುವಿಕೆಯೇ ಸಾಮಾಜೀಕರಣ. ಲಿಖಿತ ಮತ್ತು ಅಲಿಖಿತ ನಿಯಮಗಳು ಹಾಗು ಮೌಲ್ಯಗಳ ಕಲಿಯುವಿಕೆ ಸಹಮತಕ್ಕೆ ಕಾರಣವೆಂದು ಗುರುತಿಸಬಹುದು.
ಸಮಾಜದಲ್ಲಿ, ಹಾಗಾದರೆ, ಭಿನ್ನಮತದ ಸ್ಥಾನವೇನು? ಭಿನ್ನಮತದಿಂದಾಗಿ ಸಾಮಾಜಿಕ ಅಂತಃಕ್ರಿಯೆ ಮುರಿದುಬೀಳುವುದಿಲ್ಲವೇ? ಸಾಮಾಜಿಕ ಅಂತಃಕ್ರಿಯೆಯೇ ಸಾಧ್ಯವಾಗಲಿಲ್ಲವೆಂದರೆ, ಸಮಾಜಶಾಸ್ತ್ರ ಏನನ್ನು ಅಧ್ಯಯನ ಮಾಡುವುದು? ವಿವಿಧ ಕಾಲಘಟ್ಠಗಳ ಅಧ್ಯಯನ ಸಾಧ್ಯವೇ? ಎಂಬ ಪ್ರಶ್ನೆಗಳನ್ನು ಬುದ್ಧಿವಂತ ವಿದ್ಯಾರ್ಥಿ ಕೇಳಬಹುದು.
ಈ ಪ್ರಶ್ನೆಗಳನ್ನು ಉತ್ತರಿಸಲು ಅನೇಕ ಸಿದ್ಧಾಂತಗಳು ಹುಟ್ಟಿಕೊಂಡಿವೆ. ಏಕೆಂದರೆ, ಇವುಗಳನ್ನ ಸುಲಭವಾಗಿ ಉತ್ತರಿಸಲು ಸಾಧ್ಯವಿಲ್ಲ. ಆದರೆ, ಯಾವುದೇ ಅಧ್ಯಯನ ವಿಷಯ ವಿಜ್ಞಾನವೆನಿಸಿಕೊಳ್ಳಬೇಕೆಂದರೆ, ಕೆಲವು ಮೂಲಭೂತ ತತ್ತ್ವಗಳನ್ನು ಆ ಶಾಸ್ತ್ರದ ವಿಷಯ ತಜ್ಞರು ಒಪ್ಪಿಕೊಂಡಿರಬೇಕು. ಸಮಾಜಶಾಸ್ತ್ರದಲ್ಲೂ ಈ ಬಗೆಯ ಮೂಲಭೂತ ಪರಿಕಲ್ಪನಾತ್ಮಕ ಸಹಮತವಿರುವುದು. ಆದ್ದರಿಂದ, ಭಿನ್ನಮತವಿದ್ದಾಗ ಕೂಡ, ಸಾಮಾಜಿಕ ಅಂತಃಕ್ರಿಯೆ ಸಂಪೂರ್ಣವಾಗಿ ಮುರಿದು ಬೀಳುವುದಿಲ್ಲ ಎಂಬುದು ನಿರ್ವಿವಾದ. ಭಿನ್ನಮತ ಸಾಮಾಜಿಕ ಗುಂಪುಗಳಲ್ಲಿ ಅನಿವಾರ್ಯ. ಈ ಭಿನ್ನಮತವನ್ನು ಎದುರಿಸುವ, ನಿವಾರಿಸುವ, ಪರಿಹಾರ ಕಂಡುಕೊಳ್ಳುವ ಸಾಂಸ್ಥಿಕ ಸಾಧನಗಳನ್ನು ಪ್ರತಿಯೊಂದು ಸಾಮಾಜಿಕ ಗುಂಪೂ ಹೊಂದಿರುತ್ತೆ. ಕೆಲವೊಮ್ಮೆ ಅಸ್ತಿತ್ವದಲ್ಲಿರುವ ಸಂಸ್ಥೆಗಳು ಬದಲಾದ ಸಂದರ್ಭಕ್ಕೆ ಅನುಕೂಲಕರವಾಗಿಲ್ಲದಿದ್ದರೆ, ಪ್ರಶ್ನೆಗಳು ಪರಿಹಾರಗಳಿಗಿಂತ ಹೆಚ್ಚಿದ್ದರೆ, ಹೊಸ ಸಾಂಸ್ಥಿಕ ಸ್ವರೂಪಗಳನ್ನು ಸ್ಥಾಪಿಸುವ ಅವಶ್ಯಕತೆಯುಂಟಾಗಿ, ಬದಲಾವಣೆ ಉಂಟಾಗಬಹುದು.
ಸಮಾಜಗಳಲ್ಲಿ ಸಾರ್ವತ್ರಿಕವಾಗಿ ಕಾಣಬರುವ ಸಂಸ್ಥೆಗಳು ಯಾವುವು? ನಮಗೆ ತಿಳಿದಿರುವಂತೆ, ಎಲ್ಲ ಗುಂಪುಗಳಲ್ಲೂ ಮಕ್ಕಳನ್ನು ಪೋಷಿಸಲು, ಸಾಮಾಜಿಕ ಸದಸ್ಯರಾಗಲು ಬೇಕಿರುವ ತರಬೇತಿ (ಸಾಮಾಜೀಕರಣ) ನೀಡಲು ಕುಟುಂಬ ಅವಶ್ಯಕ. ಇದರೊಟ್ಟಿಗೆ ಕಾಣಬರುವ ಮತ್ತೊಂದು ಸಂಸ್ಥೆ ಬಂಧುತ್ವ. ಹಾಗೆಯೇ, ಸ್ತ್ರೀ-ಪುರುಷರ ನಡುವಿನ ಲೈಂಗಿಕ ಸಂಬಂಧಳನ್ನ ಮಾನ್ಯ ಮಾಡಲು ವಿವಾಹ ಎಂಬ ಸಂಸ್ಥೆ ಇರುವುದು. ಈಚಿನ ದಿನಗಳಲ್ಲಿ ವಿವಾಹ ಇಬ್ಬರು ವ್ಯಕ್ತಿಗಳ ನಡುವಿನ ಲೈಂಗಿಕ ಸಂಬಂಧಕ್ಕೆ ಮಾನ್ಯತೆ ನೀಡುತ್ತೆ ಎಂದೂ ಗುರುತಿಸಬಹುದು (ಕೆಲವು ದೇಶಗಳಲ್ಲಂತೂ ಇದು ಸತ್ಯ). ಯಾವುದೇ ಗುಂಪಿನಲ್ಲಾದರೂ ಅಧಿಕಾರ ಹಂಚಿಕೆ ಕಂಡುಬರುತ್ತದೆ. ಇದಕ್ಕಾಗಿ ರಾಜಕೀಯ ಸಂಸ್ಥೆಯಿದ್ದರೆ, ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳ ಬಳಕೆಗೆ ಸಂಬಂಧಿಸಿದಂತೆ ಆರ್ಥಿಕ ಸಂಸ್ಥೆಯನ್ನು ಕಾಣುತ್ತೇವೆ. ಗುಂಪಿನ ಕಟ್ಠುಪಾಡುಗಳನ್ನು ಪಾಲಿಸುವಂತೆ ಪ್ರೇರೇಪಿಸುವ ಮತ್ತು ಅವುಗಳನ್ನು ಮುರಿದಾಗ ಶಿಕ್ಷಿಸುವ ಕಾನೂನು ಮತ್ತೊಂದು ಸಂಸ್ಥೆ.
ಆದರೆ, ಜನರೇಕೆ ಈ ಸಾಂಸ್ಥಿಕ ಕಟ್ಟುಪಾಡುಗಳನ್ನು ಒಪ್ಪಿಕೊಳ್ಳುತ್ತಾರೆ? ಮುಖ್ಯವಾಗಿ ಎರಡು ಕಾರಣಗಳನ್ನು ನಾವು ಗುರುತಿಸಬಹುದು.
(೧) ಸಾಮಾಜೀಕರಣದಿಂದಾಗಿ ಅಂತಃಕ್ರಿಯೆಯು ನಿರ್ದಿಷ್ಟ ಮಾದರಿಯಲ್ಲಿಯೇ ನಡೆಯುತ್ತದೆ. ನಮ್ಮ ವರ್ತನೆ ಅಭ್ಯಾಸದಿಂದ ರೂಪಿತವಾಗಿರುವುದರಿಂದ, ಅದರಲ್ಲಿ ಬದಲಾವಣೆ ಸುಲಭವಾಗಿ ಉಂಟಾಗುವುದಿಲ್ಲ. ಉದಾಹರಣೆಗೆ, ನಾವು ಧರಿಸುವ ಬಟ್ಟೆ, ಸೇವಿಸುವ ಕಾಫಿ ಅಥವ ಚಹಾ ನಾವು ಅಭ್ಯಾಸ ಮಾಡಿಕೊಂಡಿರುವ ಅಭಿರುಚಿಯನ್ನು ಅವಲಂಬಿಸಿರುತ್ತದೆ. ನಾವು ಬಳಸುವ ಭಾಷೆ, ಭೇಟಿ ನೀಡುವ ಅಂಗಡಿಗಳು, ನೋಡುವ ಚಲನ ಚಿತ್ರ, ಕೇಳುವ ಹಾಡು ಕೂಡ ಕಲಿಯುವಿಕೆ ಮತ್ತು ಅಭ್ಯಾಸದಿಂದ ರೂಪುಗೊಂಡಿರುತ್ತದೆ. ಅದೇ ಬಗೆಯಲ್ಲಿ, ನಾವು ವಿವಾಹವಾಗ ಬಯಸುವ ಸಂಗಾತಿ ಕೂಡ ನಮ್ಮ ಸಾಮಾಜಿಕ ಮೌಲ್ಯಗಳಿಗೆ ಅನುಗುಣಗಿರುತ್ತಾರೆ.
(೨) ಸಂಸ್ಥೆಗಳು ಕೇವಲ ನಿರ್ಬಂಧಗಳನ್ನು ಹೇರುವುದಿಲ್ಲ. ಅವು ಅಂತಃಕ್ರಿಯೆಯಿಂದ ನಾವು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ತೋರಿಸಿಕೊಡುತ್ತದೆ. ಅಂದರೆ, ನಮ್ಮ ಕ್ರಿಯೆ ಇತರರ ಒಪ್ಪಿಗೆಗೆ ಪಾತ್ರವಾಗುವುದೋ (ಬಹುಮಾನಿತವಾಗುವುದೋ) ಅಥವಾ ತಿರಸ್ಕರಿಸಲ್ಪಡಬಹುದೋ (ಶಿಕ್ಷೆ) ಎಂಬುದರ ಬಗ್ಗೆ ಸರಿಸುಮಾರು ಅಂದಾಜು ಮಾಡಲು ಅವಕಾಶ ಮಾಡಿಕೊಡುವುದು. ಸಾಮಾಜಿಕ ಗುಂಪಿನ ಸದಸ್ಯರಾಗಿ ನಮ್ಮ ಹಕ್ಕುಗಳೇನು ಎಂಬುದರ ಜೊತೆಗೆ ನಮ್ಮ ಬಾಧ್ಯಸ್ಥಿಕೆಗಳೇನು ಎಂಬುದನ್ನ ಸಂಸ್ಥೆಗಳು ನಿರ್ಧರಿಸುವವು. ಉದಾಹರಣೆಗೆ, ವಿದ್ಯಾರ್ಥಿಯಾಗಿ ಕಾಲೇಜಿನ ಬಗ್ಗೆ ಯಾವ ನಿರೀಕ್ಷೆಗಳನ್ನು ಹೊಂದಿರುತ್ತೇವೆಯೋ (ಸರಿಯಾದ ಸಮಯದಲ್ಲಿ ತರಗತಿ ಪ್ರಾರಂಭವಾಗಬೇಕು, ಸಮಾಜಶಾಸ್ತ್ರ ತರಗತಿಯಲ್ಲಿ ಅರ್ಥಶಾಸ್ತ್ರದ ಪಾಠ ನಡೆಯಬಾರದು ಇತ್ಯಾದಿ) ಹಾಗೆಯೇ, ಬಾಧ್ಯಸ್ಥಿಕೆಗಳನ್ನೂ ಸ್ಪಷ್ಟ ಪಡಿಸುತ್ತವೆ (ಸರಿಯಾದ ಸಮಯದಲ್ಲಿ ತರಗತಿಗೆ ಹಾಜರಾಗಬೇಕು, ಹಾಜರಾತಿ ನಿಯಮಿತವಾಗಿರಬೇಕು, ತರಗತಿಗೆ ಬರುವ ಮೊದಲು ಆ ದಿನದ ಪಾಠಕ್ಕೆ ಸಂಬಂಧಿಸಿದಂತೆ ಪೂರ್ವ ತಯಾರಿ ಮಾಡಿಕೊಂಡಿರಬೇಕು ಇತ್ಯಾದಿ).
ಸಾಮಾಜಿಕ ಬದಲಾವಣೆಯ ಅನೇಕ ಸಂದರ್ಭಗಳಲ್ಲಿ ಹೊಸ ಬಗೆಯ ಸಹಮತ ಮೂಡುವುದನ್ನು ನಾವು ಗುರುತಿಸಬಹುದು. ಪ್ರಪಂಚದಾದ್ಯಂತ ಮೊಬೈಲ್ ಫೋನುಗಳು ಜನಪ್ರಿಯಗೊಂಡಂತೆ, ಅವು ಅದುವರೆಗೂ ಸಾಮಾನ್ಯವಾಗಿ ಒಪ್ಪಲ್ಪಟ್ಟಂತಹ ಸಾಮಾಜಿಕ ಜೀವನದ ನಿಯಮಗಳನ್ನು ಗಾಳಿಗೆ ತೂರಲಾಯಿತು. ಜನರು ಎಲ್ಲ ಸಮಯ ಸಂದರ್ಭಗಳಲ್ಲೂ ತಮಗೆ ಬರುತ್ತಿದ್ದ ಕರೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದರು. ವಾಹನ ಚಲಿಸುವಾಗ ಕರೆಗಳನ್ನು ಸ್ವೀಕರಿಸುತ್ತಿದ್ದರಿಂದ ಅಪಘಾತಗಳು ಹೆಚ್ಚಿದವು. ಹಾಗಾಗಿ, ಅದಕ್ಕೆ ಸಂಬಂಧಿಸಿದಂತೆ, ಸರ್ಕಾರ ಹೊಸ ಕಾನೂನುಗಳನ್ನು ತರಬೇಕಾಯಿತು.
ಮೊಬೈಲ್ ಫೋನುಗಳು ಸಾಮಾಜಿಕ ಸಂವಹನ ಕ್ಷೇತ್ರದಲ್ಲಿ ಮತ್ತೊಂದು ಬಗೆಯ ಸಮಸ್ಯೆ ಆರಂಭವಾಯಿತು. ಸಭೆ-ಸಮಾರಂಭಗಳು ನಡೆಯುವಾಗ ಅನೇಕ ಫೋನುಗಳು ರಿಂಗಣಿಸಲಾರಂಭಿಸಿದವು. ಆಭಾಸ ಹೆಚ್ಚಾಯಿತು. ಸ್ನೇಹಿತರೊಡನೆ ನಡೆಯುತ್ತಿದ್ದ ಮಾತು-ಕಥೆ ಫೋನ್ ಕರೆಗಳಿಂದಾಗಿ ಮುಜುಗರದ ನಿಶ್ಶಬ್ದತೆಯನ್ನು ತಂದಿತು. ಹೋಟೆಲುಗಳಲ್ಲಿನ ಸಂತೋಷ ಕೂಟಗಳು ಅಲ್ಲಿ ಸೇರಿರುವ ವ್ಯಕ್ತಿಗಳ ನಡುವಿನ ಸಂವಹನ ಹೆಚ್ಚಿಸಲಿಲ್ಲ; ಅಲ್ಲಿಯೂ ಜನರು ತಮ್ಮ ಕಿವಿಗಳಿಗೆ ಫೋನಂಟಿಸಿಕೊಂಡಿರುತ್ತಿದ್ದರು. ಶೋಕ ಸಭೆಗಳ ಸ್ಥಿತಿ ಮತ್ತಷ್ಟು ಶೋಚನೀಯವಾಯಿತು.
ಈ ಸಂದರ್ಭ ಅನೇಕ ಔಪಚಾರಿಕ ಮತ್ತು ಅನೌಪಚಾರಿಕ ನಿಯಮಗಳನ್ನು ಚಾಲ್ತಿಗೆ ತಂದಿತು. ಉದಾಹರಣೆಗೆ, ಸಭೆಗಳಲ್ಲಿ ಮೊಬೈಲುಗಳನ್ನು ನಿಶ್ಶಬ್ದದಲ್ಲಿರಿಸಿ ಅಥವಾ ಬಂದ್ ಮಾಡಬೇಕೆಂದು ಮನವಿ ಮಾಡಿಕೊಂಡರು. ಅದು ಪ್ರಯೋಜನಕಾರಿಯಾಗದ್ದರಿಂದ ಆದೇಶ ಜಾರಿಗೊಳಿಸಲಾರಂಬಿಸಿದರು. ಅನೌಪಚಾರಿಕ ಸಂದರ್ಭಗಳಲ್ಲೂ ಕೆಲವು ಅನೌಪಚಾರಿಕ ನಿರೀಕ್ಷೆಗಳು ಚಾಲ್ತಿಗೆ ಬಂದವು.
ನಾರ್ವೆ ದೇಶದ ಯುವಜನತೆಯ ಬಗ್ಗೆ ಅಧ್ಯಯನ ನಡೆಸಿದ ರಿಚ್ ಲಿಂಗ್ ಅವರು ತಮ್ಮ ಪ್ರಬಂಧ – One can talk about common manners (1997)ರಲ್ಲಿ, ಈ ಬಗೆಯ ಕೆಲವು ಹೊಸ ನಿರೀಕ್ಷೆಗಳನ್ನು ದಾಖಲಿಸಿದ್ದಾರೆ. ಉದಾಹರಣೆಗೆ, ಸಾರ್ವಜಿನಿಕ ಸ್ಥಳಗಳಲ್ಲಿ ಫೋನಿನ ಮೂಲಕ ಏರು ಧ್ವನಿಯಲ್ಲಿ ಮಾತನಾಧುವವರನ್ನು ಛೇಡಿಸುವುದು ಸರ್ವೇಸಾಮಾನ್ಯವಾಗಿತ್ತು. ಅಂತಹವರನ್ನು harry (tacky) ಮತ್ತು soss (vulgar)ಎಂದು ಕರೆಯುತ್ತಿದ್ದರಿಂದ ಯುವಕರು ಫೋನನ್ನು ವಿವೇಚನೆಯಿಂದ ಬಳಸುತ್ತಿದ್ದರು.
ಶೆರ್ರಿ ಟರ್ಕಲ್ ಅವರು Reclaiming Conversation: The Power of Talk in a Digital Age (2015) ಎಂಬ ತಮ್ಮ ಪುಸ್ತಕದಲ್ಲಿ ರೂಲ್ ಆಫ್ ತ್ರಿ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ. ಆಕೆಯ ಮಾಹಿತಿದಾರರು ಹೇಳಿದಂತೆ, ಗುಂಪಿನಲ್ಲಿರಬೇಕಾದರೆ, ಕನಿಷ್ಟ ಪಕ್ಷ ಮೂರು ಜನರಾದರೂ ಸಂಭಾಷಣೆಯಲ್ಲಿ ತೊಡಗಿದ್ದರೆ ಮಾತ್ರ, ಇತರರು ತಮ್ಮ ಫೋನಿನ ಕಡೆ ಗಮನಹರಿಸಬಹುದು. ಇಲ್ಲದಿದ್ದರೆ, ಆ ವರ್ತನೆ ಅಸಮರ್ಪಕ ಅಥವಾ ತಪ್ಪು ನಡವಳಿಕೆ ಎನಿಸಿಕೊಳ್ಳುತ್ತದೆ.
ಸಹಮತ, ಹಾಗಾಗಿ, ಸಾಮಾಜಿಕ ಸಂವಹನಕ್ಕೆ ಅನಿವಾರ್ಯ. ಸಾಮಾಜಿಕ ಸಂಪರ್ಕ ಸಂವಹನದಿಂದ ಮಾತ್ರ ಸಾಧ್ಯ. ಸಾಮಾಜಿಕ ಸಂವಹನ-ಸಂಪರ್ಕಗಳಿಲ್ಲದೇ ಮಾನವರ ಜೀವನದಲ್ಲಿ ಸಾಮಾಜಿಕತೆ ಅಸಾಧ್ಯ. ಸಾಮಾಜಿಕತೆ ಎಂದರೆ ಹಂಚಿಕೊಳ್ಳುವುದು. ಆದ್ದರಿಂದ ಸಹಮತವಿಲ್ಲದ ಸಾಮಾಜಿಕ ಜೀವನವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಸಹಮತವನ್ನು ಕಲಿತೊಕೊಳ್ಳುತ್ತೇವೆ ಮತ್ತು ಅದನ್ನು ಪುನಃ-ಪುನಃ ಸಾಧಿಸಲು ಪ್ರಯತ್ನಿಸುತ್ತೇವೆ. ನಮ್ಮ ಎಲ್ಲ ಕ್ರಿಯೆಗಳೂ ಹಂಚಿಕೊಂಡಿರುವ ಅರ್ಥವನ್ನು ಅಭಿವ್ಯಕ್ತಗೊಳಿಸುವ ಪ್ರಯತ್ನವೆಂದೇ ಹೇಳಬಹುದು. ನಮ್ಮ ಎಲ್ಲ ಕ್ರಿಯೆಗಳೂ “ಇತರರನ್ನು” ದೃಷ್ಟಿಯಲ್ಲಿಟ್ಟುಕೊಂಡೇ ನಡೆಯುವುದರಿಂದ, ಸಾಮಾನ್ಯ ಅರ್ಥಗಳ ಹಿನ್ನಲೆಯಲ್ಲಿಯೇ ನಾವು ಮುಂದುವರಿಯ ಬೇಕಾಗುವುದು
ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳ ವ್ಯವಸ್ಥಿತ ಅಧ್ಯಯನ. ಸಮಾಜವು ಗುಂಪುಗಳಿಂದ ಮಾಡಲ್ಪಟ್ಟಿದ್ದು, ಈ ಗುಂಪುಗಳಲ್ಲಿನ ಸಂಬಂಧಗಳನ್ನು ಅಲ್ಲಿ ನಡೆಯುವ...
Comments