Apr 23, 2024
Apr 23, 2024
Apr 23, 2024
Apr 23, 2024
Apr 23, 2024
Updated: Apr 23, 2024
ಸಮಾಜಶಾಸ್ತ್ರವು ಸಾಮಾಜಿಕ ಸಂಬಂಧಗಳ ವ್ಯವಸ್ಥಿತ ಅಧ್ಯಯನ. ಸಮಾಜವು ಗುಂಪುಗಳಿಂದ ಮಾಡಲ್ಪಟ್ಟಿದ್ದು, ಈ ಗುಂಪುಗಳಲ್ಲಿನ ಸಂಬಂಧಗಳನ್ನು ಅಲ್ಲಿ ನಡೆಯುವ ಕ್ರಿಯೆ-ಪ್ರತಿಕ್ರಿಯೆಗಳ ಮೂಲಕ ಗುರುತಿಸಬಹುದು. ಕ್ರಿಯೆ-ಪ್ರತಿಕ್ರಿಯೆಗಳನ್ನು ಒಟ್ಟಾಗಿ ಅಂತಃಕ್ರಿಯೆ ಎನ್ನಬಹುದು.
ಜನರು ಏನನ್ನು ಮಾಡುವರೋ – ಅಂದರೆ, ಯಾವ ಕ್ರಿಯೆಯಲ್ಲಿ ತೊಡಗುವರೋ, ಅದು ವರ್ತನೆ ಎನಿಸುತ್ತದೆ. ವರ್ತನೆಯ ಸ್ವರೂಪ – ಪ್ರತ್ಯಕ್ಷವಾಗಿರಬಹುದು, ಪರೋಕ್ಷವಾಗಿರಬಹುದು, ಕ್ರಿಯೆಯಲ್ಲಿ ತೊಡಗುವುದರಿಬಹುದು ಅಥವಾ ತೊಡಗದೇ ಇರುವುದಾಗಿರಬಹುದು. ಹಾಗಾದರೆ, ಕ್ರಿಯೆ ಎಂದರೇನು? ಯಾವ ಚಟುವಟಿಕೆಗೆ ಕರ್ತೃವು ವೈಯಕ್ತಿಕ ಅರ್ಥವನ್ನು ನೀಡುವನೋ ಅದು ಕ್ರಿಯೆ ಎನಿಸಿಕೊಳ್ಳುತ್ತದೆ.
ಮ್ಯಾಕ್ಸ ವೆಬರ್ ಅವರು ವ್ಯಾಖ್ಯಾನಿಸುವಂತೆ – ವ್ಯಕ್ತಿಗಳ ವೈಯಕ್ತಿಕ ವರ್ತನೆಯು ಇತರರ ವರ್ತನೆಯನ್ನು ಪರಿಗಣಿಸಿ ಅದರಂತೆ ಮುಂದುವರೆದರೆ, ಅದು ಸಾಮಾಜಿಕ ಎನಿಸಿಕೊಳ್ಳುತ್ತದೆ. ಸಾಮಾಜಿಕ ವರ್ತನೆಯ ಒಲವು ಭೂತಕಾಲಕ್ಕಿರಬಹುದು, ವರ್ತಮಾನ ಕೇಂದ್ರಿತವಾಗಿರಬಹದು ಅಥವಾ ನಿರೀಕ್ಷಿತ ಭವಿಷ್ಯತ್ತಿನ ಬಗ್ಗೆ ಆಗಿರಬಹುದು
Action is social, insofar as, its subjective meaning takes account of the behaviour of others and is thereby oriented in its course. Social action can be oriented to the past, present or expected future of one’s behaviour – Max Weber, Economy and Society:1978; 4/22
ಅಂತಃಕ್ರಿಯೆಯು ಕ್ರಿಯೆಯ ಸ್ವರೂಪವನ್ನು ಪ್ರಭಾವಿಸುವುದಲ್ಲದೇ, ಗುಣಮಟ್ಟವನ್ನೂ ಕೂಡ ಪ್ರಭಾವಿಸುತ್ತದೆ. ವೆಬರ್ ಅವರು ವ್ಯಕ್ತಿಗಳ ಬಗ್ಗೆ ಮಾತನಾಡಿದರೂ ಕೂಡ, ಸಾಮಾಜಿಕ ಘಟಕಗಳ ನಡುವಿನ ಅಂತಃಕ್ರಿಯೆಯನ್ನೂ ಒಳಗೊಂಡಿರುತ್ತೆ ಎಂಬುದನ್ನು ನಾವು ಗಮನಿಸಬೇಕು. ಅಃತಃಕ್ರಿಯೆಯಲ್ಲಿ ಇಬ್ಬರು ಅಥವಾ ಹೆಚ್ಚಿನ ಜನರು ಪರಸ್ಪರ ಅರ್ಥಪೂರ್ಣ ಕ್ರಿಯೆಯಲ್ಲಿ ತೊಡಗುವರು. ಹಾಗಾಗಿ, ಪಾರಸ್ಪರಿಕತೆಯು ಸಾಮಾಜಿಕತೆಯ ಪ್ರಾಥಮಿಕ ಲಕ್ಷಣವಾಗಿರುವುದು.
ಅಂತಃಕ್ರಿಯೆಯು ಮನಸೋಇಚ್ಛೆ ನಡೆಯುವ ಪ್ರಕ್ರಿಯೆಯಲ್ಲ. ವ್ಯಕ್ತಿಗಳು ತಮ್ಮ ಇಷ್ಟದಂತೆ ಬೇರೆ ವ್ಯಕ್ತಿಗಳೊಡನೆ ವ್ಯವಹರಿಸಲು ಸಾಧ್ಯವಿಲ್ಲ. ಹಾಗೆ ಮಾಡಿದರೆ, ಅಂತಃಕ್ರಿಯೆ ಅಸಾಧ್ಯವಾಗುವುದು. ಏಕೆಂದರೆ, ಒಬ್ಬ ವ್ಯಕ್ತಿ ಇತರ ವ್ಯಕ್ತಿ /ವ್ಯಕ್ತಿಗಳ ಪ್ರತಿಕ್ರಿಯೆ ಏನಿರಬಹುದು ಎಂದು ಊಹಿಸಿ ತದನಂತರ ಕ್ರಿಯೆಯಲ್ಲಿ ತೊಡಗುವನು. ಮತ್ತೊಬ್ಬರ ಪ್ರತಿಕ್ರಿಯೆ ಏನೆಂದು ಊಹಿಸಲು ಸಾಧ್ಯವಾಗದಿದ್ದರೆ, ಮನುಷ್ಯ ಯಾವುದೇ ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ದೈನಂದಿನ ಜೀವನವು ನಿರೀಕ್ಷಿತ ಪ್ರತಿಕ್ರಿಯೆಗಳನ್ನು, ಪರಿಣಾಮಗಳನ್ನು ಅವಲಂಬಿಸಿರುವುದು. ಈ ನಿರೀಕ್ಷೆಗಳು ಅಂತಃಕ್ರಿಯೆಯ ತಳಹದಿಯಲ್ಲಿರುವ ನಿಯಮಗಳಿಂದ ಸಾಧ್ಯವಾಗುವುದು. ಅಂದರೆ, ಸಮಾಜಶಾಸ್ತ್ರಜ್ಞರು ಸಾಮಾಜಿಕ ಅಂತಃಕ್ರಿಯೆಯನ್ನು ನಿರ್ಧರಿಸುವ ನಿಯಮಗಳನ್ನು ಅಧ್ಯಯನ ಮಾಡುವರು.
ಒಂದು ಸರಳ ಉದಾಹರಣೆಯನ್ನು ಗಮನಿಸೋಣ: ನಾವು ಕೊತ್ತಂಬರಿ ಸೊಪ್ಪು ಅಥವಾ ಹುರಳಿಕಾಯಿ ವ್ಯಾಪಾರ ಮಾಡಿದಾಗ, ಒಂದು ಕೈನಿಂದ ದುಡ್ಡು ಕೊಟ್ಟು ಮತ್ತೊಂದು ಕೈನಲ್ಲಿ ಸೊಪ್ಪಿನ ಕಂತೆಯನ್ನು ತೆಗೆದುಕೊಳ್ಳುವುದಿಲ್ಲ. ಹೋಟೆಲಿನಲ್ಲಿ ತಿಂಡಿಯನ್ನು ತಿನ್ನುವ ಮೊದಲು ಅಥವಾ ಕಾಫಿಯನ್ನು ಕುಡಿಯುವ ಮೊದಲು ನಮ್ಮ ಬಳಿ ದುಡ್ಡಿದೆಯೆಂದು ಮಾಣಿಗೆ ತೋರಿಸುವುದಿಲ್ಲ. ನಾವು ದುಡ್ಡು ನೀಡುತ್ತೇವೆ ಎಂಬ ನಂಬಿಕೆಯ ಮೇಲೆ ಸೊಪ್ಪಿನ ಕಂತೆಯನ್ನು, ತಿಂಡಿಯನ್ನು ಅಥವಾ ಕಾಫಿಯನ್ನು ನಮಗೆ ನೀಡುವರು. ಸನ್ನಿವೇಶ ಇದಕ್ಕೆ ತದ್ವಿರುದ್ಧ ಕೂಡ ಇರಬಹುದು. ನಾವೇನು ಹಣವನ್ನು ಪಡೆದೇ ನಮ್ಮ ಸೇವೆಯನ್ನು ಇತರರಿಗೆ ಒದಗಿಸುವುದಿಲ್ಲ. ಲಾಭ-ನಷ್ಟದ ವ್ಯವಹಾರವಾದಂತಹ ವ್ಯಾಪಾರದಲ್ಲೂ ಕೂಡ ನಾವು ಮೋಸಹೋಗುವುದಿಲ್ಲವೆಂಬ ನಂಬಿಕೆಯ ಮೇಲೆ ಅಂತಃಕ್ರಿಯೆಯಲ್ಲಿ ತೊಡಗುವೆವು. ಈ ನಂಬಿಕೆ ಎಲ್ಲಿಂದ ಬರುವುದು? ಅಪರಿಚಿತ ವ್ಯಕ್ತಿಗಳು ಮೋಸಮಾಡುವುದಿಲ್ಲ ಎಂಬ ಭರವಸೆ ಎಲ್ಲಿಂದ ಮೂಡಿಬರುತ್ತದೆ?
ಈ ಭರವಸೆಯ ತಳಹದಿಯಲ್ಲಿ ನಾವು ಸಾಮಾಜಿಕ ಮೌಲ್ಯಗಳಿರುವುದನ್ನ ಗುರುತಿಸಬಹುದು. ಈ ಮೌಲ್ಯಗಳು ಸ್ಪಷ್ಟಸ್ವರೂಪ ಪಡೆದುಕೊಂಡಾಗ, ಅವು ಸಾಮಾಜಿಕ ಸಂಸ್ಥೆ ಎನಿಸಿಕೊಳ್ಳುತ್ತವೆ. ಸಾಂಸ್ಥೀಕರಣಗೊಂಡಾಗ ಮೌಲ್ಯಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ, ನಮ್ಮೆಲ್ಲ ಕ್ರಿಯೆಗಳನ್ನ ಪ್ರಭಾವಿಸುವುದು, ಕ್ರಿಯೆಗಳ ಮೂಲಕ ವ್ಯಕ್ತವಾಗುವುದು ಮತ್ತು ಇತರರು ಅದನ್ನು ಅರ್ಥಮಾಡಿಕೊಳ್ಳಬಹುದು. ವಾಸ್ತವದಲ್ಲಿ ನಮ್ಮ ಎಲ್ಲ ಚಟುವಟಿಕೆಗಳು ಮೌಲ್ಯಗಳ ಚೌಕಟ್ಟಿನಲ್ಲಿಯೇ ನಡೆಯುವುದಂದ ಅಂತಃಕ್ರಿಯೆಗೆ ಅರ್ಥ ದೊರಕುವುದೇ ಮೌಲ್ಯಗಳಿಂದ.
ಮೌಲ್ಯಗಳು ನಮ್ಮ ಜೀವನಕ್ಕೆ ಅರ್ಥ ನೀಡುತ್ತದೆಂದ ಮೇಲೆ, ನಾವು ಸಾಮಾಜಿಕ ಸಂಸ್ಥೆಗಳಲ್ಲಿ ಹುಟ್ಟಿ, ಬೆಳೆದು, ಅಲ್ಲಿಯೇ ಪ್ರಾಣ ಬಿಡುತ್ತೇವೆ ಎಂದರೆ ಅತಿಶಯೋಕ್ತಿಯೇನು ಆಗುವುದಿಲ್ಲ.
ಮುಂದಿನ ಸಂಚಿಕೆಯಲ್ಲಿ ಓದೋಣ – ಸಮಾಜವೆಂದರೇನು?
Comments