Apr 23, 2024
Apr 23, 2024
Apr 23, 2024
Apr 23, 2024
Apr 23, 2024
Updated: Apr 23, 2024
ಪೀಟರ್ ಎಲ್ ಬರ್ಜರ್ ಮತ್ತು ಥಾಮಸ್ ಟಿ ಲಕ್ಮನ್ ಅವರು The Social Construction of Reality ಎಂಬ ಗ್ರಂಥವನ್ನು 1969ರಲ್ಲಿ ಪ್ರಕಟಿಸಿದರು. ಇವರು ಆಲ್ಫ್ರೆಡ್ ಶಟ್ಜ ಎಂಬ ಜರ್ಮನ್ ಮೂಲದ ಫೆನಾಮೆನಾಲಜಿಸ್ಟನಿಂದ ಪ್ರಭಾವಿತರಾಗಿದ್ದರು. ಅಲ್ಲದೇ, ಎಮಿಲಿ ಡರ್ಖೀಂ ಮತ್ತು ಕಾರ್ಲ ಮಾರ್ಕ್ಸ ಅವರ ಚಿಂತನೆಗಳ ಆಧಾರದಲ್ಲಿ ತಮ್ಮ ವಿಚಾರಧಾರೆಯನ್ನು ಬೆಳೆಸಿರುವರು. ಐವತ್ತಕ್ಕೂ ಹೆಚ್ಚು ವರ್ಷಗಳಿಗಿಂತಲೂ ಮೊದಲು ಪ್ರಕಟವಾದ ಈ ಗ್ರಂಥ ಇಂದಿಗೂ ಸಮಾಜಶಾಸ್ತ್ರೀಯ ಚಿಂತನೆಯಲ್ಲಿ ಸಂಚಲನ ಮೂಡಿಸುತ್ತದೆ. ಅವರ ಸಿದ್ಧಾಂತ ತನ್ನ ವ್ಯಾಪ್ತಿ ಮತ್ತು ವಿಶಾಲತೆಯಿಂದಾಗಿ ತತ್ತ್ವ ಶಾಸ್ತ್ರಕ್ಕೆ ಹತ್ತಿರವಾಗಿದೆಯೆಂದು ಪರಿಗಣಿತವಾಗಿದೆ.
ವಾಸ್ತವತೆಯ ಸಾಮಾಜಿಕ ನಿರ್ಮಾಣದ ಸಿದ್ಧಾಂತವು ನಮ್ಮ ಹಾಗು ಇತರರ ದೃಷ್ಟಿಕೋಣಗಳನ್ನು ಹೊಸ ರೀತಿಯಲ್ಲಿ ನೋಡುವ, ಅರ್ಥಮಾಡಿಕೊಳ್ಳುವ ದಾರಿಯನ್ನು ತೋರಿಸಿಕೊಟ್ಟತು. ಹಾಗಾಗಿ, ಇದನ್ನು ಒಂದು ಉತ್ತಮ ಕಲಿಕಾ ಸಾಧನೆವೆಂದೂ ಪರಿಗಣಿಸಲಾಗುತ್ತದೆ. ನವೀನ ಚಿಂತನಾಕ್ರಮಗಳ ಮತ್ತು ದೃಷ್ಟಿಕೋಣಗಳ ಬಗ್ಗೆ ಮನಸ್ಸನ್ನು ತೆರೆಯುವ ಸಿದ್ಧಾಂತವೆಂದು ಗುರುತಿಸಲ್ಪಟ್ಟಿದೆ.
ನಾವು ವಾಸಿಸುವ ಪ್ರಪಂಚದಾದ್ಯಂತ ಅನೇಕ ವಸ್ತುಗಳಿವೆ. ಕಲ್ಲು-ಮಣ್ಣು, ನೀರು, ಗಿಡ-ಗಂಟೆ, ಮರ-ಬಳ್ಳಿ ಹೀಗೆ ಅನೇಕ ಭೌತಿಕ ವಸ್ತುಗಳು ನಿಸರ್ಗದಲ್ಲಿರುವುದು. ಇದಲ್ಲದೇ, ಪ್ರಾಣಿ ನಿರ್ಮಿತವಾದ ಗೂಡು, ಹಳ್ಳಗಳಿರಬಹುದು, ಮಾನವ ನಿರ್ಮಿತವಾದ ಮನೆ, ಹಳ್ಳ-ಕೊಳ್ಳ, ಆಣೆಕಟ್ಟು, ಮೇಜು-ಕುರ್ಚಿ, ಬರೆಯುವ ಕಾಗದ-ಲೇಖನಿ, ಕೇಳುವ ರೇಡಿಯೋ ಅಥವಾ ನೋಡುವ ದೂರದರ್ಶನದಂತಹ ವಸ್ತುಗಳೂ ಇರುವವು.
ಹುಟ್ಟಿದಂತಹ ಮಗು ಬೆಳೆದಂತೆಲ್ಲಾ ತನ್ನ ಹಿರಿಯರ ಮೂಲಕ ವಸ್ತುಗಳನ್ನು ಹೆಸರಿಸಲು, ಉಪಯೋಗಿಸಲು ಕಲಿತುಕೊಳ್ಳುತ್ತದೆ. ಈ ಕಲಿಯುವಿಕೆ ಮಾನವರು ಬಳಸುವ ಸಂಜ್ಞೆಗಳ ಮೂಲಕ ಸಾಧ್ಯ. ಮಾನವರು ನಿರ್ಮಿಸಿರುವ ಅತ್ಯಂತ ಉಪಯುಕ್ತಕಾರಿ ಸಂಜ್ಞೆ ಎಂದರೆ ನಾವು ಮಾತನಾಡಲು ಹಾಗು ಬರೆಯಲು ಬಳಸುವ ಭಾಷೆ.
ಭಾಷೆಯ ಮೂಲಕ ವಸ್ತುಗಳನ್ನು ಗುರುತಿಸುವುದು ಮಾತ್ರವಲ್ಲ, ಇತರರೊಡನೆ ಸಂಭಾಷಣೆ ಕೂಡ ಮಾಡುತ್ತೇವೆ. ಕಲಿಯುವಿಕೆ ನಡೆಯುವುದೇ ಭಾಷೆ-ಸಂಭಾಷಣೆ ಮೂಲಕ. ಈ ಪ್ರಕ್ರಿಯೆಯಲ್ಲಿ ಗುಂಪಿನಲ್ಲಿರುವಂತಹ ಇತರ ವ್ಯಕ್ತಿಗಳೊಡನೆ ಯಾವ ರೀತಿ ವರ್ತಿಸಬೇಕೆಂಬುದನ್ನು ಕಲಿಯುವೆವು. ನಮ್ಮ ಅನುಭವದಲ್ಲಿ ಬಂದಿರುವಂತೆ, ವ್ಯಕ್ತಿಗಳು ತಮ್ಮ ಮನಸ್ಸಿಗೆ ಬಂದಂತೆ ವರ್ತಿಸಲು ಸಾಧ್ಯವಿಲ್ಲ. ವ್ಯಕ್ತಿಗಳ ವರ್ತನೆ ನಿರ್ದಿಷ್ಟ ಚೌಕಟ್ಟಿನಲ್ಲಿ - ನಿಯಮಗಳ ಚೌಕಟ್ಟಿನಲ್ಲಿ ನಡೆಯುವುದು. ಈ ನಿಯಮಗಳು ನಾವು ಹೇಗಿರಬೇಕೆಂದು ಮಾರ್ಗದರ್ಶನ ಮಾಡುವುದಲ್ಲದೇ, ಇತರರಿಂದ ಏನನ್ನು (ಅಂದರೆ, ಯಾವ ರೀತಿಯ ವರ್ತನೆಯನ್ನು) ನಿರೀಕ್ಷಿಸಬಹುದೆಂಬುದನ್ನು ಕಲಿಸಿ ಕೊಡುವುದು.
ದೈನಂದಿನ ಜೀವನದ, ತೀರಾ ಸಾಮಾನ್ಯವಾಗಿ ಕಾಣಬರುವ ವರ್ತನೆಯೊಂದನ್ನು ಉದಾಹರಣೆಯಾಗಿ ನೋಡೋಣ. ಬೀದಿಯಲ್ಲಿ ಹೋಗಬೇಕಾದರೆ ಅಥವಾ ಉದ್ಯೋಗದ ಸ್ಥಳದಲ್ಲಿ ಯಾರಾದರು ಪರಿಚಯಸ್ಥರು ಎದುರಾದರೆ, ನಮಸ್ಕಾರ, ಶುಭೋದಯ ಎಂದು ಹೇಳುವುದು ರೂಢಿಯಲ್ಲಿದೆ. ಈ ರೀತಿ ಪರಿಚಯಸ್ಥರನ್ನು ಸಂಬೋಧಿಸುವುದು ಉಚಿತವಾದ ವರ್ತನೆ ಎನಿಸಿಕೊಂಡಿದೆ. ಹಾಗೆಯೇ, ಸಂಬೋಧಿಸಲ್ಪಟ್ಟ ವ್ಯಕ್ತಿ ಪ್ರತಿಯಾಗಿ ನಮಸ್ಕಾರ, ಶುಭೋದಯ ಇತ್ಯಾದಿ ಹೇಳಬಹುದು. ಹೇಳುತ್ತಾರೆ ಎಂಬುದು ರೂಢಿಯಲ್ಲಿರುವ ನಿರೀಕ್ಷೆ. ಹಾಗೆ ಪ್ರತಿ ಸಂಬೋಧಿಸದಿದ್ದರೆ, ಅದನ್ನು ಅನುಚಿತ, ಒರಟುತನ ಎಂದು ಕರೆಯುತ್ತೇವೆ. ಅನಾಗರಿಕ, ಅಸಂಸ್ಕೃತ ಎಂದೂ ಕೆಲವರು ಕರೆಯಬಹುದು. ಈ ಬಗೆಯ ವರ್ತನಾ ವಿಧಾನಗಳನ್ನು ನಾವು ಇತರರೊಡನೆ ನಡೆಸುವ ಅಂತಃಕ್ರಿಯೆಯಿಂದ, ಪ್ರಾಥಮಿಕವಾಗಿ, ಭಾಷೆ-ಸಂಭಾಷಣೆಗಳ ಮೂಲಕ ಕಲಿಯುವೆವು.
ನಮ್ಮ ಸಹಚರರು ಹಾಗು ಸಹವಾಸಿಗಳೊಡನೆ ತೀರಾ ಅಲ್ಪ ಪ್ರಮಾಣದ ಭಾಗವಹಿಸುವಿಕೆಯನ್ನು ಅಸಭ್ಯತೆ ಎಂದು ಗುರುತಿಸಲಾಗುವುದು. ನಮ್ಮನ್ನು ಉದ್ದೇಶಿಸಿ ಮಾತನಾಡಿದಾಗ ಉತ್ತರಿಸದಿರುವುದು ಸರಿಯಲ್ಲ. ಟಾಂಜೇನಿಯಾದ ಹೇಹೇ ಬುಡಕಟ್ಟು ಜನರಲ್ಲಿ ತಮ್ಮ ನೆರೆಹೊರೆಯವರಿಗೆ ನಮಸ್ಕಾರ ತಿಳಿಸದಿದ್ದರೆ, ಅವಮಾನಿತ ವ್ಯಕ್ತಿ ಹಲ್ಲೆ ಮಾಡಬಹುದು ಅಥವ ಶಾಪ/ಮಾಟಮಂತ್ರದ ಮೂಲಕ ಕೊಲ್ಲಲು ಪ್ರಯತ್ನಿಸಬಹುದು. ನ್ಯೂಗಿನಿ ದ್ವೀಪದ ಟ್ವಾಡೆ (Tauade) ಜನರಲ್ಲೂ ಇದೇ ಬಗೆಯ ವರ್ತನೆ ಕಂಡುಬರುವುದು. ಪರಸ್ಪರರನ್ನು ಅಭಿವಾದಿಸದಿರುವುದು ಸಾಮಾಜಿಕ ಗಾಯವನ್ನುಂಟು ಮಾಡುವುದೆಂದು ಅನೇಕ ಸಮುದಾಯಗಳು ಗುರುತಿಸುತ್ತವೆ. ಅಭಿವಾದನೆಗೆ ಪ್ರತ್ಯಭಿವಾದನೆ ಮಾಡದಿರುವುದು ವ್ಯಕ್ತಿಯ ಅವಮಾನದ ಜೊತೆಗೆ, ಅದಕ್ಕೆ ಸಾಕ್ಷಿಯಾದವರಿಗೂ ಮುಜುಗರ ಉಂಟುಮಾಡುವುದು.
ಪರಿಚಯಸ್ಥರನ್ನು ಮಾತನಾಡಿಸುವುದು ಸಭ್ಯತೆ; ಅವರೊಡನೆ ಸಂಭಾಷಣೆಯಲ್ಲಿ ತೊಡಗದಿರುವುದು ಅಸಭ್ಯತೆ. ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಅಸಾಮಾಜಿಕ ವರ್ತನೆಯಲ್ಲಿ ತೊಡಗಿದ ವ್ಯಕ್ತಿಯನ್ನು ಮಾಂತ್ರಿಕ ಎಂದು ಗುರುತಿಸಿ ಸಾಯಿಸಲಾಗುತ್ತದೆ. ಸಹಚರರೊಡನೆ ಸಾಮಾಜಿಕವಾಗಿಲ್ಲದಿರುವುದು ಸಮಸ್ಯೆಗಳನ್ನು ಸ್ವಾಗತಿಸಿದಂತೆ ಮತ್ತು ಸಮುದಾಯದ ಕೆಂಗಣ್ಣಿಗೆ ಗುರಿಯಾದಂತೆ.
ಸಂಭಾಷಣೆಗೆ ಅದರದೇ ಆದ ನಿಯಮಗಳಿರುವುದು. ಇದನ್ನು ಭಾಗವಹಿಸುವ ಬಾಧ್ಯಸ್ಥಿಕೆಗಳು(involvement obligations) ಎಂದು ಎರ್ವಿಂಗ್ ಗಾಫಮನ್ ಗುರುತಿಸುತ್ತಾರೆ. ಸಂಭಾಷಣೆಯಲ್ಲಿ ತೊಡಗಿರುವವರು “ಅದರ ಬಗ್ಗೆ ಮುಖ್ಯವಾಗಿ ಗಮನಹರಿಸಬೇಕು”, “ಸಹಜವಾಗಿ ಸಂಭಾಷಣೆಯಲ್ಲಿ ತೊಡಗಬೇಕು”, ಮತ್ತು ತಮ್ಮ ಗಮನ ಬೇರೆಡೆಗೆ ಹೋಗಿದೆಯೆಂಬ ಸೂಚನೆ ನೀಡಬಾರದು -ಟೇಬಲ್ಲಿನ ಮೇಲೆ ಬೆರಳಾಡಿಸುವುದು, ಅನ್ಯಮನಸ್ಕರಾಗಿ ದೃಷ್ಟಿ ತಪ್ಪಿಸುವುದು, ಮೊಬೈಲ್ ಫೋನ್ ತೆಗೆದು ನೋಡುವಂತಹ ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಇತ್ಯಾದಿ ಈ ಬಾಧ್ಯಸ್ಥಿಕೆಯ ಕೆಲವು ಲಕ್ಷಣಗಳು.
ಎರ್ವಿಂಗ್ ಗಾಫಮನ್
ಭಾಷೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ತಮ್ಮ ಇಷ್ಟ ಬಂದಂತೆ, ವ್ಯಕ್ತಿ-ವಿಶಿಷ್ಟವಾದ ಬಳಕೆಯನ್ನು ಮಾಡಲು ಸಾಧ್ಯವಿಲ್ಲ. ಅದರ ಬಳಕೆ ವ್ಯಾಕರಣದ ಚೌಕಟ್ಟಿನೊಳಗೆ ನಡೆಯುವುದು. ಕಾಲಕ್ರಮದಲ್ಲಿ ಈ ಚೌಕಟ್ಟು ಬದಲಾಗಬಹುದು. ಆದರೆ, ಭಾಷೆಯ ಪ್ರಯೋಗದ ಅನೇಕ ನಿಯಮಗಳು ಬಹು ದೀರ್ಘಕಾಲದವರೆಗೆ ಬದಲಾಗದೇ ಇರುತ್ತದೆ ಎಂಬುದಂತೂ ನಿಜ. ಆ ನಿಯಮಗಳನ್ನು ನಾವು ಬಹುಪಾಲು ಪಾಲಿಸುತ್ತೇವೆ ಎಂಬುದೂ ನಿಜ. ನಿಯಮಗಳ ಪಾಲನೆಯಿಂದಾಗಿಯೇ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಪರಸ್ಪರರನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾದ್ದರಿಂದ ಹಾಗೂ ಮಾನವರಿಂದ ರೂಪಿಸಲ್ಪಟ್ಟಿರುವುದರಿಂದ ಭಾಷೆ ಸಾಮಾಜಿಕವಾಗಿ ನಿರ್ಮಾಣವಾಗಿದೆ ಎಂದು ಹೇಳಬಹುದು.
ಈ ರೀತಿ ಗುಂಪಿಗೆ ಸಂಬಂಧಿಸಿದಂತಹ ರೂಢಿಗಳು, ನಿಯಮಗಳು ಮತ್ತು ಮೌಲ್ಯಗಳನ್ನು ಕಲಿತುಕೊಳ್ಳುವ ಪ್ರಕ್ರಿಯೆಗೆ ಸಾಮಾಜೀಕರಣ ಎಂದು ಸಮಾಜಶಾಸ್ತ್ರಜ್ಞರು ಕರೆಯುತ್ತಾರೆ.
ಸಾಮಾಜಿಕ ಎಂದರೆ ಮನುಷ್ಯ ನಿರ್ಮಿತವಾದದ್ದು, ಮನುಷ್ಯರಿಂದ ನಿರ್ಮಿಸಲ್ಪಡಬಹುದಾದದ್ದು, ಮನುಷ್ಯರು ಪರಸ್ಪರ ಹಂಚಿಕೊಂಡಿರುವಂತಹುದು ಹಾಗು ಮಾನವರ ದೈನಂದಿನ ಜೀವನದಲ್ಲಿ ಕಂಡುಬರುವಂತಹುದು ಮತ್ತು ದೈನಂದಿನ ಜೀವನದ ಮೂಲದ ರೂಪಿಸಲ್ಪಡುವಂತಹುದು ಎಂದು ಅರ್ಥ ಮಾಡಿಕೊಳ್ಳಬೇಕು.
ಇಲ್ಲಿ ಬರೆದಿರುವಂತಹುದನ್ನು ನೀವು ಓದಿ, ಅರ್ಥ ಮಾಡಿಕೊಂಡು, ಪ್ರತಿಕ್ರಿಯಿಸಬಹುದಾದ ಸಾಧ್ಯತೆಗಳೇ ಸಾಮಾಜಿಕತೆಯ ನಿರ್ಮಾಣಕ್ಕೆ ಒಂದು ಉದಾಹರಣೆಯಾಗಿರುವುದು. ಹೇಗೆ ನಾವು ಬೆಳಕನ್ನು ನೀಡುವ ವಸ್ತುಗಳನ್ನು ಸೂರ್ಯ, ಚಂದ್ರ, ದೀಪ ಎಂದು ಕರೆಯುವೆವೋ, ಅವುಗಳ ನಡುವಿನ ಭಿನ್ನತೆಗಳನ್ನು ಗುರುತಿಸಲು ಈ ಪದಗಳು ಸಹಕಾರಿಯಾಗಿವೆಯೋ, ಹಾಗೆಯೇ, ಸಾಮಾಜೀಕರಣದ ಮೂಲಕ ನಾವು ಗಂಡು, ಹೆಣ್ಣು, ತಾಯಿ, ತಂದೆ, ಗಂಡ, ಹೆಂಡತಿ, ಮಗ, ಮಗಳು, ನಾಯಕಿ, ವಿದೂಷಕ, ಗೂಂಡ ಮುಂತಾದವರನ್ನು ಗುರುತಿಸಲು ಕಲಿಯುವೆವು. ಅದೇ ರೀತಿಯಲ್ಲಿ, ಯಾವ ರೀತಿ ವಿವಾಹ ಆಗಬೇಕು, ವಿವಾಹದ ನಂತರ ಎಲ್ಲಿ ವಾಸ ಮಾಡಬೇಕು (ಗಂಡನ ಮನೆ, ಹೆಂಡತಿಯ ಮನೆ, ಹೊಸ ಮನೆ), ಸತ್ತ ನಂತರದಲ್ಲಿ ಸತ್ತ ವ್ಯಕ್ತಿಯ ಆಸ್ತಿಯ ವಾರಸುದಾರರು ಯಾರು (ಮೊದಲ ಮಗ, ಕೊನೆ ಮಗ, ಕೊನೆಯ ಮಗಳು ಇತ್ಯಾದಿ), ಯಾರು ಜನರನ್ನು ಆಳಬೇಕು, ಯಾವುದು ಹಣ ಹಾಗು ಯಾವುದು ಹಣವಲ್ಲ, ಯಾವುದು ಪವಿತ್ರ ಮತ್ತು ಯಾವುದು ಅಪವಿತ್ರ - ಹೀಗೆ ಪ್ರತಿಯೊಂದು ಚಟುವಟಿಕೆಯನ್ನು ಹಂಚಿಕೊಳ್ಳಲ್ಪಟ್ಟಂತಹ ಅರ್ಥದ ಆಧಾರದಲ್ಲಿ ನಡೆಸುವೆವು (ಹಂಚಿಕೊಂಡಿರುವುದು ಎಂದರೆ ನಾವು ಮತ್ತು ಇತರು ಒಪ್ಪಿರುವಂತಹುದು ಎಂದು ಅರ್ಥ). ನಮ್ಮ ಜೀವನ ಈ ದೈನಂದಿನ ಚಟುವಟಿಕೆಗಳೇ ಆಗಿರುವುದರಿಂದ, ಇವುಗಳೇ ನಮ್ಮ ಅನುಭವಗಳಾಗಿರುವುದರಿಂದ, ವಾಸ್ತವತೆ ಸಾಮಾಜಿಕವಾಗಿ ನಿರ್ಮಾಣವಾಗುತ್ತದೆ ಎಂದು ಪೀಟರ್ ಬರ್ಜರ್ ಮತ್ತು ಥಾಮಸ್ ಲಕ್ಮನ್ ವಾದಿಸಿದ್ದಾರೆ.
ಹುಟ್ಟಿನಿಂದ ಹಿಡಿದು ಜೀವನ ಪರ್ಯಂತ ನಾವು ನಮ್ಮ ಸುತ್ತಮುತ್ತಲಿನವರೊಡನೆ ಹೊಂದಿಕೊಂಡು ಹೋಗುತ್ತೇವೆ. ಅವರನ್ನು ನಾವು ಅರ್ಥ ಮಾಡಿಕೊಳ್ಳುವುದರಿಂದ (ಹಾಗು ಅವರು ನಮ್ಮನ್ನು ಅರ್ಥಮಾಡಿಕೊಳ್ಳುವುದರಿಂದ) ಹೊಂದಾಣಿಕೆ ಸಾಧ್ಯ. ನಮ್ಮ ಸುತ್ತಲಿನ ಜನರೊಡನೆ ನಾವು ಅಸಂತುಷ್ಟರಾಗಿದ್ದರೆ ಅವರಿಂದ ದೂರ ಸರಿಯುತ್ತೇವೆ. ಈ ರೀತಿ ದೂರ ಹೋಗುವುದು ಅಥವಾ ಸಂಪರ್ಕವನ್ನು ತಪ್ಪಿಸಿಕೊಳ್ಳುವುದೂ ಕೂಡ ನಾವು ಗುಂಪಿನ ಜೀವನದ ಮೂಲಕ ಕಲಿಯುವೆವು. ಇದೂ ಒಂದು ಬಗೆಯ ಹೊಂದಾಣಿಕೆಯೇ. ಹಾಗಾಗಿ, ನಾವು ಸಮಾಜದಲ್ಲಿ ಬೆಳೆಯುವುದಂದರೆ, ಇತರರನ್ನು ಅರ್ಥಮಾಡಿಕೊಳ್ಳಲು ಕಲಿಯುವ ಪ್ರಕ್ರಿಯೆಯೇ ಆಗಿರುವುದು. ಈ ಪ್ರಕ್ರಿಯೆ ನಾವು ಇತರರೊಡನೆ ನಡೆಸುವ ಸಂವಹನದಿಂದ ಮಾತ್ರ ಸಾಧ್ಯ. ಸಂವಹನ ಮನುಷ್ಯ-ಮನುಷ್ಯರ ನಡುವಿನ ಸಂಪರ್ಕದ ಕೊಂಡಿ.
ಈಗಾಗಲೇ ನಾವು ನೋಡಿದಂತೆ, ನಾವು ಸಮಾಜದಲ್ಲಿ ಅನೇಕ ಚಟುವಟಿಕೆಗಳಲ್ಲಿ ತೊಡಗುವೆವು.
ಸಮಾಜಶಾಸ್ತ್ರದಲ್ಲಿ ಮನುಷ್ಯರ ಚಟುವಟಿಕೆಯನ್ನು ಕ್ರಿಯೆ ಎಂದು ಕರೆಯಲಾಗುತ್ತದೆ. ಈ ಕ್ರಿಯೆಗಳನ್ನು ನಾವು ಇತರರನ್ನು ಉದ್ದೇಶದಲ್ಲಿಟ್ಟುಕೊಂಡು ಮಾಡುವೆವು. ನಮ್ಮ ಕ್ರಿಯೆಗಳು ಇತರರಿಗೆ ಅರ್ಥವಾಗುವ ರೀತಿಯಲ್ಲಿ ಇರುತ್ತದೆ. ಅವರು ನಮ್ಮ ಕ್ರಿಯಗೆ ಪ್ರತಿಕ್ರಿಯಿಸುವುದರಿಂದ ಅವರಿಗೆ ನಮ್ಮ ಕ್ರಿಯೆ ಅರ್ಥವಾಗಿದೆಯೆಂದು ನಾವು ಅರ್ಥಮಾಡಿಕೊಳ್ಳುವೆವು. ಈ ಬಗೆಯ ಕ್ರಿಯೆ-ಪ್ರತಿಕ್ರಿಯೆಗಳನ್ನು ಅಂತಃಕ್ರಿಯೆ ಎಂದು ಗುರುತಿಸುವೆವು. ಅಂತಃಕ್ರಿಯೆಯು ಇತರರನ್ನು ಉದ್ದೇಶದಲ್ಲಿಟ್ಟುಕೊಂಡು ನಡೆಸುವುದರಿಂದ ಅದು ಸಾಮಾಜಿಕ ಸ್ವರೂಪದ್ದೆಂದು ನಾವು ಹೇಳಬಹುದು.
ನಾವು ನಡೆಸುವ ಕ್ರಿಯೆಯ ಸ್ವರೂಪ ಈಗಾಗಲೇ ಸಮಾಜದಿಂದ ನಿರ್ಧರಿಸಲ್ಪಟ್ಟಿರುವುದು.ಆದ್ದರಿಂದ ಅದಕ್ಕೆ ವಸ್ತನಿಷ್ಠ ಸ್ವರೂಪವಿದೆ ಎನ್ನಬಹುದು. ಆದರೆ, ವೈಯಕ್ತಿಕವಾಗಿ ನಾವು ಕ್ರಿಯೆಯಲ್ಲಿ ತೊಡಗಬೇಕಾದಾಗ, ತೊಡಗಿಕೊಂಡಿಸಿದಾಗ, ಅದರ ಕಾರಣ-ಪರಿಣಾಮಗಳ ಬಗ್ಗೆ ಚಿಂತಿಸದೇ, ಯಾಂತ್ರಿಕವಾಗಿ,ಕಣ್ಣು ಮುಚ್ಚಿಕೊಂಡು ನಡೆಸುವುದಿಲ್ಲ. ಪ್ರತ್ಯೇಕ ವ್ಯಕ್ತಿಗಳಾಗಿ ನಾವು ನಮ್ಮ ಕ್ರಿಯೆಯ ಕಾರಣ-ಪರಿಣಾಮದ ಬಗ್ಗೆ ಚಿಂತಿಸಿ ತದನಂತರ ಅದರಲ್ಲಿ ತೊಡಗಿಸಿಕೊಳ್ಳುತ್ತೇವೆ. ಹಾಗಾಗಿ ಅದಕ್ಕೆ ವ್ಯಕ್ತಿನಿಷ್ಠ ಸ್ವರೂಪ ಕೂಡ ಇರುವುದು. ಅಂದರೆ, ನಾವು ನಿರಂತರವಾಗಿ ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ನಿರ್ಮಾಣ ಮಾಡುತ್ತ ಹೋಗುತ್ತೇವೆ. ಹಾಗೆ ನಾವು ನಿರ್ಮಿಸಿದ ಪ್ರಪಂಚದ ನಿಯಮಗಳನ್ನು ನಾವು ಅನಿವಾರ್ಯವಾಗಿ ಪಾಲಿಸಬೇಕಾಗುವುದು.
ನಾವು ಹುಟ್ಟುವುದಕ್ಕೂ ಮುನ್ನ ಸಮಾಜವಿತ್ತು. ನಮ್ಮ ನಂತರವೂ ಸಮಾಜವಿರುತ್ತದೆ. ಅಂದರೆ, ಸಮಾಜವೆನ್ನುವುದು ಈಗಾಗಲೇ ಸಿದ್ಧಪಡಿಸಿ ನೀಡಲ್ಪಟ್ಟ ವಸ್ತುವಾಗಿರುವುದು. ಸಮಾಜವನ್ನು ಒಂದು ವಸ್ತು -ಆಬ್ಜೆಕ್ಟ (object) ಎಂದು ಕರೆಯುವುದರ ಅರ್ಥವೇನೆಂದರೆ, ಅದಕ್ಕೆ ನಮಗಿಂತ ಹೊರಗಿರುವ ಗುಣವಿರುವುದು. ಸಮಾಜ ಒಂದು ವಸ್ತುವೆಂದು ಪರಿಗಣಿಸಿದಾಗ, ನಾವು ಪ್ರಮುಖವಾಗಿ ಗಮನ ಹರಿಸುತ್ತಿರುವುದು ಅಲ್ಲಿನ ಸಾಮಾಜಿಕ ಸಂಸ್ಥೆಗಳ ಕಡೆ. ಉದಾಹರಣೆಗೆ, ಕುಟುಂಬ ನಮ್ಮ ಜೀವನದ ಅನಿವಾರ್ಯ ಮತ್ತು ನಿರಂತರ ಭಾಗವಾಗಿರುತ್ತದೆ. ಈ ಕಾರಣದಿಂದಲೇ ವ್ಯಕ್ತಿಯು ಸಮಾಜದಿಂದ ರೂಪಿಸಲ್ಪಡುತ್ತಾನೆ ಎಂದು ಹೇಳುವುದು. ಅಷ್ಟೇ ಅಲ್ಲ, ವ್ಯಕ್ತಿಯ ಜೀವನವು ಸಾಮಾಜಿಕ ಸನ್ನಿವೇಶಗಳಿಂದ - ಲಭ್ಯವಾಗುವ ಅವಕಾಶಗಳು ಅಥವಾ ವಂಚಿತವಾದ ಅವಕಾಶಗಳು, ಯಾವ ಬಗೆಯ ಅನ್ಯಾಯಗಳನ್ನು ಎದುರಿಸಬೇಕಾಗುತ್ತದೆ ಇತ್ಯಾದಿ, ಸದಾ ಪ್ರಭಾವಿಸಲ್ಪಡುತ್ತದೆ.
ಸಮಾಜ ಹೇಗೆ ವ್ಯಕ್ತಿಯನ್ನು ರೂಪಿಸುವುದೋ, ಅದೇ ಬಗೆಯಲ್ಲಿ ವ್ಯಕ್ತಿ ಕೂಡ ಸಮಾಜವನ್ನು ರೂಪಿಸುವ ಸಾಮರ್ಥ್ಯ ಹೊಂದಿರುತ್ತಾನೆ. ಏಕೆಂದರೆ, ಅಂತಃಕ್ರಿಯೆಗೆ ನಾವು ನೀಡುವ ಅರ್ಥ ನಮ್ಮ ಸಾಮಾಜಿಕ ಸಂದರ್ಭದಿಂದ ಪ್ರಭಾವಿತವಾಗಿರುತ್ತದೆ. ಸಮಾಜದಲ್ಲಿ ಈಗಾಗಲೇ ಒಪ್ಪಲ್ಪಟ್ಟಂತಹ, ಈಗಾಗಲೇ ಅನುಸರಿಸುತ್ರಿರುವಂತಹ ನಿಮಯ-ಮೌಲ್ಯಗಳು ಮಾತ್ರವಿದ್ದರೇ, ಸಾಮಾಜಿಕ ಬದಲಾವಣೆ ಅಸಾಧ್ಯವಾಗುವುದು. ಬದಲಿಗೆ, ಮಾನವರು ತಮ್ಮ ಪ್ರತಿಯೊಂದು ಅಂತಃಕ್ರಿಯೆಯ ಮೂಲಕ ಸಾಮಾಜಿಕ ಜೀವನದ ಅರ್ಥವನ್ನು ಪುನಃ ಸ್ಥಾಪಿಸುವರು.
ಈ ಪುನಃಸ್ಥಾಪನೆ, ಎರಡು ಬಗೆಯದಾಗಿರಬಹುದು:
೧. ಈಗಾಗಲೇ ಸ್ಥಾಪಿತವಾದಂತಹ ಅರ್ಥವನ್ನು ಒಪ್ಪಿಕೊಳ್ಳುವುದು, ಅಥವಾ
೨. ಅಂತಃಕ್ರಿಯೆಗೆ ಹೊಸ ಅರ್ಥವನ್ನು ನೀಡುವುದು.
ಅಷ್ಟೇ ಅಲ್ಲ, ಪ್ರತಿಯೊಂದು ಬಾರಿ ಅಂತಃಕ್ರಿಯೆಯಲ್ಲಿ ತೊಡಗಿದಾಗ ನಾವು ಸಾಮಾಜಿಕತೆಯನ್ನು ಪುನಃ ರಚಿಸುವೆವು. ಆದ್ದರಿಂದ, ಸಮಾಜವೆನ್ನುವುದು ವ್ಯಕ್ತಿಗತ ಅರ್ಥೈಸುವಿಕೆಯ ಪ್ರಕ್ರಿಯೆಯ ವಿಷಯ ಕೂಡ, ಹೌದು.
ಒಟ್ಟಿನಲ್ಲಿ,
೧. ಸಮಾಜ ಒಂದು ವಸ್ತುವಾಗಿ ನಮ್ಮನ್ನು ರೂಪಿಸುವುದು, ಮತ್ತು
೨. ವ್ಯಕ್ತಿಗಳಾಗಿ ನಾವು ಅಂತಃಕ್ರಿಯೆಯೆ ಮೂಲಕ ಸಾಮಾಜಿಕ ಅರ್ಥವನ್ನು ಪುನರ್ಸ್ಥಾಪಿಸುವುದರಿಂದ, ಸಮಾಜವನ್ನು ಪುನಃ ಪುನಃ ನಿರ್ಮಾಣ ಮಾಡುತ್ತೇವೆ. ಆದ್ದರಿಂದ, ನಾವು ಅರ್ಥವನ್ನು ಸ್ಥಾಪಿಸಿದ ಕೂಡಲೇ ಅದು ವಾಸ್ತವಿಕತೆಯ ಸ್ವರೂಪವನ್ನು ಪಡೆದು ನಮ್ಮ ಇತರ ಕ್ರಿಯೆಗಳನ್ನು ಪ್ರಭಾವಿಸುವ ಸಾಮರ್ಥ್ಯ ಪಡೆಯುತ್ತದೆ. ಬರ್ಜರ್ ಮತ್ತು ಲಕ್ಮನ್ ಅವರು ನಿರ್ಮಾಣ ಎಂಬ ಪದ ಬಳಸಿದಾಗ, ಅವರು ಪೂರ್ಣಗೊಂಡ ಸ್ಥಿತಿಯನ್ನು ಮಾತ್ತ ಸೂಚಿಸುತ್ತಿಲ್ಲ. ಅರ್ಥಮಾಡಿಕೊಳ್ಳುವಿಕೆ ಎನ್ನುವುದು ನಿರಂತರವಾಗಿ ನಡೆಯುವ ಪ್ರಕ್ರಿಯೆ ಎಂಬುದನ್ನು ಸೂಚಿಸುತ್ತಿರುವರು.
ದೈನಂದಿನ ಜೀವನದ ವಾಸ್ತವತೆಯ ಸೃಷ್ಟಿಯಲ್ಲಿ, ಬದಲಾವಣೆಯಲ್ಲಿ ಹಾಗು ನಿರ್ವಹಣೆಯಲ್ಲಿ ಭಾಷೆ ಅತ್ಯಂತ ಮಹತ್ತ್ವದ ಪಾತ್ರ ವಹಿಸುವುದು. ಭಾಷೆ ಸಂಕೇತಗಳಿಂದ ಮಾಡಲ್ಪಟ್ಟಿದೆ. ಈ ಸಂಕೇತಗಳು ಒಂದು ಭಾಷೆಯಿಂದ ಮತ್ತೊಂದಕ್ಕೆ ವಿಭಿನ್ನವಾಗಿರುವುದು. ಉದಾಹರಣೆಗೆ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಮೊದಲ ಅಕ್ಷರಗಳನ್ನು ಬರೆಯುವ (ಸಂಕೇತಿಸುವ) ರೀತಿ ಬೇರೆಯಾಗಿರುವುದು. ಅದೇ ರೀತಿಯಲ್ಲಿ, ನಮ್ಮ ಜೀವನದಲ್ಲಿ ಇನ್ನೂ ಅನೇಕ ಬಗೆಯ ಸಂಕೇತಗಳನ್ನು ನಾವು ಕಾಣಬಹುದು. ಸಂಕೇತಗಳನ್ನು ನಾವು ದೈಹಿಕ ಚರ್ಯೆ, ಹಾವ-ಭಾವಗಳ ಮೂಲಕ ಕೂಡ ನೀಡಬಹುದು. ಹಾಗಾಗಿ, ಅರ್ಥಮಾಡಿಕೊಳ್ಳುವುದೆಂದರೆ, ಸಂಕೇತಗಳನ್ನು ಅರ್ಥ ಮಾಡಿಕೊಳ್ಳುವುದು. ಸಂಕೇತಗಳನ್ನು ವ್ಯಾಖ್ಯಾನಿಸುವುದು. ಸಾಮಾಜೀಕರಣವು ಭಾಷೆಯ ಮೂಲಕ ಆಗುವುದು. ಅದು ಮಕ್ಕಳಲ್ಲಿ ಪ್ರಾಥಮಿಕ ಸಾಮಾಜೀಕರಣಕ್ಕೆ ಕಾರಣವಾದರೆ, ವಯಸ್ಕರಲ್ಲಿ ಹೊಸ ಉಪಸಂಸ್ಕೃತಿಗಳನ್ನು ಪರಿಚಯಿಸುವುದರ ಮೂಲಕ ಮಾಧ್ಯಮಿಕ ಸಾಮಾಜೀಕರಣಕ್ಕೆ ಕಾರಣವಾಗುವುದು.
ಭಾಷೆ ಮತ್ತು ಸಂವಹನದ ಪ್ರಾಮುಖ್ಯತೆಗೆ ಬರ್ಜರ್ ಮತ್ತು ಲಕ್ಮನ್ ಗುರುತಿಸುವ ಇತರ ಕಾರಣಗಳೆಂದರೆ:
೧. ನಮ್ಮನ್ನು ನಾವು ಅರಿತುಕೊಳ್ಳಲು ಬಳಸುವ ಸಾಧನ - ಭಾಷೆ. ನಮ್ಮ ಬಗ್ಗೆ ಇತರರಿಂದ ಮಾಹಿತಿ ಪಡೆದುಕೊಳ್ಳುತ್ತೇವೆ ಮತ್ತು ಮಾತಿನ ಮೂಲಕ ವಾಸ್ತವತೆಯ ಬಗ್ಗೆ ಸ್ಪಷ್ಟ ಚಿತ್ರಣ ಪಡೆಯುತ್ತೇವೆ;
೨. ವ್ಯಾಖ್ಯೆಗಳ ಮೂಲಕ ಅರ್ಥವನ್ನು ಹಂಚಿಕೊಳ್ಳುವ ಮತ್ತು ಪರಸ್ಪರರನ್ನು ಅರ್ಥಮಾಡಿಕೊಳ್ಳುವ ಸಾಧನ - ಭಾಷೆ. (ವ್ಯಾಖ್ಯೆ: ನಿರ್ದಿಷ್ಟ ಅರ್ಥ ನೀಡುವಿಕೆ)
೩. ಪ್ರಪಂಚವನ್ನು ಸೃಜಿಸುವ, ವ್ಯಾಖ್ಯಾನಿಸುವ ಮತ್ತು ಅರಿವಿಗೆ ತಂದುಕೊಳ್ಳಲು ಬಳಸುವ ಸಾಧನ - ಭಾಷೆ.
ನಮಗೆಲ್ಲ ತಿಳಿದಿರುವಂತೆ,
ಅ. ನಮ್ಮ ಅನುಭವಗಳನ್ನು ವ್ಯಾಖ್ಯಾನಿಸುವುದರ ಮೂಲಕ ನಾವು ಪ್ರಪಂಚವನ್ನು ಅರಿತುಕೊಳ್ಳುತ್ತೇವೆ
ಆ. ಇಂದಿನ ಅನುಭವಗಳ ವ್ಯಾಖ್ಯಾನ ಅದಕ್ಕೂ ಮುಂಚಿನ ಅನುಭವಗಳ ಆಧಾರದಲ್ಲಿಯೇ ನಡೆಯುತ್ತದೆ. ಉದಾಹರಣೆಗೆ, ಕೈ ಕೆಸರಾದರೆ ಬಾಯಿ ಮೊಸರು ಎಂಬ ನಾಣ್ಣುಡಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತಿದ್ದರೆ, ಇದರ ಮೂಲ ಹಾಗು ಉಪಯುಕ್ತತೆ ಬಗ್ಗೆ ಆಲೋಚಿಸದೇ ಅದನ್ನು ಪಾಲಿಸುವ ಸಾಧ್ಯತೆಗಳು ಹೆಚ್ಚು.
ಇ. ಹಿಂದಿನ ಅನುಭವಗೆಳೆಂದರೆ ಏನು? ಅದು ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಕುಟುಂಬ ಮುಂತಾದವುಗಳನ್ನು ಒಳಗೊಂಡಿರುತ್ತದೆ.
ಇದರ ಪರಿಣಾಮಗಳೇನು? ಬರ್ಜರ್ ಮತ್ತು ಲಕ್ಮನ್ ಗುರುತಿಸುವಂತೆ:
೧. ನಮ್ಮ ಹಿಂದಿನ ಅನುಭವಗಳ ಆಧಾರದಲ್ಲಿ ನಾವು ಜಗತ್ತನ್ನು ಅರ್ಥಮಾಡಿಕೊಳ್ಳುವುದರಿಂದ, ಆ ವಾಸ್ತವವೇ ಸತ್ಯವೆಂದು ತಿಳಿದು, ಸಾಮಾಜಿಕ ಅಂತಃಕ್ರಿಯೆಯಲ್ಲಿ ತೊಡಗುವೆವು. ಹುಟ್ಟಿನಿಂದ ಕಲಿತದ್ದೇ ಸಹಜ, ಸರಿ ಎಂದು ಜನರು ತಿಳಿಯುವುದರಲ್ಲಿ ಆಶ್ಚರ್ಯವೇನಿಲ್ಲ. ಇದರಿಂದಾಗಿ ವಾಸ್ತವತೆಯನ್ನು ಬೇರೆ-ಬೇರೆ ಬಗೆಯಲ್ಲೂ ವ್ಯಾಖ್ಯಾನಿಸಬಹುದು, ಅರ್ಥಮಾಡಿಕೊಳ್ಳಬಹುದೆಂಬುದನ್ನು ನಾವು ಮರೆತುಬಿಡುವ ಸಾಧ್ಯತೆಗಳೇ ಹೆಚ್ಚು. ಅದಲ್ಲದೇ, ನಮಗಿರುವ ಅರಿವು ಸೀಮಿತ ಅನುಭವಗಳನ್ನು ಆಧರಿಸುವುದರಿಂದ, ನಮ್ಮ ಮುಂದಿರುವ ಆಯ್ಕೆಗಳು ಕಡಿಮೆಯೇ ಎನ್ನಬಹುದು.
೨. ಸಾಮಾಜಿಕ ಸನ್ನಿವೇಶವನ್ನು ಅರ್ಥಮಾಡಿಕೊಂಡ ಪರಿಯಲ್ಲಿಯೇ ನಾವು ಕ್ರಿಯೆಯಲ್ಲಿ ತೊಡಗುವುದರಿಂದ, ಅದರ ಪರಿಣಾಮಗಳೂ ವಾಸ್ತವವಾಗ ಬಹುದು. ಉದಾಹರಣೆಗೆ, ತರಗತಿ ತುಂಬಾ ನೀರಸವಾಗಿರುತ್ತದೆಂದು ನಂಬಿ ತರಗತಿಗೆ ಹಾಜರಾದರೆ, ಅದಕ್ಕೆ ತಕ್ಕಂತೆ ನಾವು ವರ್ತಿಸುವೆವು ಹಾಗು ತರಗತಿ ಖಂಡಿತವಾಗಿಯೂ ನೀರಸವಾಗಿ ಪರಿಣಮಿಸುವುದು. ರಾಬರ್ಟ್ ಕಿಂಗ್ ಮರ್ಟನ್ ಅವರು ಥಾಮಸ್ ಪ್ರಮೇಯವೆಂದು ಪ್ರಚಾರಕ್ಕೆ ತಂದ ಸೆ-ಫುಲ್ ಫಿಲ್ಲಿಂಗ ಪ್ರಾಫೆಸಿ ಇದನ್ನೇ ಹೇಳುವುದು. ಪರೀಕ್ಷೆಯ ಹಿಂದಿನ ದಿನ, ಎಷ್ಟೇ ಅಚ್ಚುಕಟ್ಟಾಗಿ ಓದಿದ್ದರೂ ಹೆದರಿಕೆಗೆ ಒಳಗಾದ ವಿದ್ಯಾರ್ಥಿ ತಾನು ನಪಾಸಾಗುವೆನೆಂದು ಮತ್ತೆ-ಮತ್ತೆ ಚಿಂತಿಸಿದರೆ, ಅವನು ನಪಾಸಾಗುವುದು ಖಂಡಿತ.
ಹಾಗಾಗಿ, ಸಾಮಾಜಿಕ ನಿರ್ಮಾಣವಾದದ ಪ್ರಕಾರ ಸಾಮಾಜಿಕ ಪ್ರಪಂಚವು ಸಂಭಾಷಣೆಗಳಿಂದ ಮಾಡಲ್ಪಟ್ಟಿದೆ. ಸಾಮಾಜಿಕ ಪ್ರಪಂಚವು ಒಟ್ಟಾಗಿ ನಡೆಸುವ ಕ್ರಿಯೆಗಳ ಮಾದರಿಯಾಗಿದೆ. ಸಾಮಾಜಿಕ ಪ್ರಪಂಚದಲ್ಲಿ ಇರುವುದೆಂದರೆ, ಕ್ರೀಡೆಗಳಲ್ಲಿ ತೊಡಗಿದಂತೆ. ಜನ್ಮದಾರಭ್ಯ ನಾವು ಸಾಮಾಜಿಕ ಅಂತಃಕ್ರಿಯೆಯ ಮಾದರಿಗಳಲ್ಲಿ ತೊಡಗಿರುವೆವು, ಭಾಗವಾಗಿರುವೆವು.
ಕ್ರೀಡೆಗಳ ನಿಯಮಗಳನ್ನು ರೂಪಿಸುವವರು ನಾವೇ ಹಾಗೂ ಸಮಯ ಕಳೆದಂತೆ ಅದರಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇವೆ. ನಿಯಮಗಳನ್ನು ಮೀರಲು ನಾವು ಸಿದ್ಧರಿರುವುದಿಲ್ಲ. ಈ ನಿಯಮಗಳು ನಮ್ಮ ಜೀವನದ ಸಾಮಾಜಿಕತೆಯನ್ನು ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಡುವುದು. ನಾವು ಈ ಅಂತಃಕ್ರಿಯೆಯ ಭಾಗವಾಗುವ ಸಾಮರ್ಥ್ಯ ಹೊಂದಿರುತ್ತೇವೆ. ನಮ್ಮ ಚಟುವಟಿಕೆಗಳು ತಮಗೆ ತಾವೆ ರೂಪುಗೊಳ್ಳುವವು ಮತ್ತು ನಾವದರ ಭಾಗವಾಗಿ ಬಿಡುವೆವು. ಕ್ರಿಕೆಟ ಆಟದ ಬಗ್ಗೆ ಚಿಂತಿಸಿ - ಟೆಸ್ಟ್ ಆಟದಿಂದ ಒಂದು ದಿನದ ಆಟವಾಗಿ ಪರಿಣಮಿಸಿತು. ಒಂದು ದಿನದ ಆಟದಲ್ಲೂ ಮೊದಲು ೬೦ ಓವರ್ ಗಳಿದ್ದವು, ತದನಂತರ ೫೦ ಓವರ್ ಆಟವಾಯಿತು. ಈಗ ೨೦ ಓವರ್ ಗಳ ಆಟ ಚಾಲ್ತಿಯಲ್ಲಿದೆ. ನಿಯಮಗಳ ರೂಪಿಸುವಿಕೆ, ಬದಲಾಯಿಸುವಿಕೆಗೆ ಕ್ರಿಕೆಟ್ ಆಟದ ಇತರ ನಿಯಮಗಳ ಬದಲಾವಣೆಗಳ ಬಗ್ಗೆ ನಾವಿಲ್ಲಿ ಚಿಂತಿಸಬಹುದು.
ದೈನಂದಿನ ಜೀವನದ ಸಂಭಾಷಣೆಗಳು ನಮ್ಮ ಸಾಮಾಜಿಕ ಪ್ರಪಂಚದ ವಾಸ್ತವತೆಯನ್ನು ರೂಪಿಸುತ್ತದೆ. ಅಂದರೆ, ನಮ್ಮ ಜ್ಞಾನವು ದೈನಂದಿನ ಜೀವನದ ಅಂತಃಕ್ರಿಯೆಗಳಿಂದ ಲಭ್ಯವಾಗುವವು. ಹಾಗಾಗಿ, ಜ್ಞಾನವು ನಮ್ಮ ಎಲ್ಲ ಚಟುವಟಿಕೆಗಳಲ್ಲಿ ಇರುವುದು.
ಜ್ಞಾನವೆಂದರೆ ಕೇವಲ ಶಾಲಾ-ಕಾಲೇಜುಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ಕಲಿಯುವ ವಿದ್ಯೆಯಲ್ಲ; ಕೇವಲ ವಿಜ್ಞಾನಿಗಳ, ವಿದ್ವಾಂಸರ, ಸಾಹಿತಿಗಳ, ಬುದ್ಧಿಜೀವಿಗಳ ಚರ್ಚೆಗಳಲ್ಲಿ, ಬರಹಗಳಲ್ಲಿ ಕಂಡುಬರುವಂತಹುದಲ್ಲ. ಜ್ಞಾನವು ನಮ್ಮೆಲ್ಲರ ಪ್ರತಿಯೊಂದು ಕ್ರಿಯೆಯಲ್ಲಿ - ಅಡುಗೆ ಮಾಡುವುದು, ಊಟ ಮಾಡುವುದು, ಸೈಕಲ್ ಅಥವಾ ಕಾರಿನ ರಿಪೇರಿ, ಮೊಬೈಲ್ ಫೋನಿನ ಬಳಕೆ, ಕಛೇರಿಯ ಕೆಲಸ ಮಾಡುವುದು ಮತ್ತು ಮಾಡಿಸುವುದು ಮತ್ತು ಇತರ ಎಲ್ಲ ಬಗೆಯ ಚಟುವಟಿಕೆಗಳೂ ಸೇರಿರುವುದು. ಈ ದೈನಂದಿನ ಚಟುವಟಿಕೆಗಳ ಹಿನ್ನಲೆಯಲ್ಲಿರುವ ಜ್ಞಾನವೇ ಸಾಮಾಜಿಕ ವಾಸ್ತವತೆಯ ನಿರ್ಮಾಣದಲ್ಲಿ ಸಹಕಾರಿಯಾಗಿರುವುದು. ದೈನಂದಿನ ಜೀವನದ ವಿವಿಧ ಆಯಾಮಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ಪ್ರತಿಯೊಬ್ಬ ವ್ಯಕ್ತಿಯೂ ಹೊಂದಬೇಕಾಗಿಲ್ಲ. ಬದಲಿಗೆ, ಯಾರು ನಿರ್ದಿಷ್ಟ ವಿಷಯದ ಬಗ್ಗೆ ಜ್ಞಾನ ಹೊಂದಿದ್ದಾರೆ ಎಂಬುದನ್ನು ತಿಳಿದಿದ್ದರೆ ಸಾಕು. ನಮ್ಮ ಕಾರು ಕೆಟ್ಟುಹೋದರೆ, ಅದನ್ನು ರಿಪೇರಿ ಮಾಡಲು ನಮಗೆ ಬರದಿದ್ದರೂ ಚಿಂತೆಯಿಲ್ಲ; ಮೆಕ್ಯಾನಿಕನ ಬಳಿ ಹೋದರೆ ಸಾಕು, ಎಂಬ ವಿಶ್ವಾಸ ನಮಗಿರುತ್ತದೆ. ಈ ನಂಬಿಕಯೇ ಸಾಮಾಜಿಕ ಪ್ರಪಂಚದ ವಾಸ್ತವತೆ ನಿರ್ಮಾಣಕ್ಕೆ ಕಾರಣ. ಬರ್ಜರ್ ಮತ್ತು ಲಕ್ಮನ್ ಹೇಳುವಂತೆ - ಸಮಾಜವು ಮನುಷ್ಯ ನಿರ್ಮಿತ. ಸಮಾಜಕ್ಕೆ ವಸ್ತುನಿಷ್ಠ ಅಸ್ತಿತ್ವ ಇರುವುದು; ವ್ಯಕ್ತಿಯು ಸಾಮಾಜಿಕತೆಯಿಂದ ರೂಪಿಸಲ್ಪಡುತ್ತಾನೆ (Society is a human product. Society is an objective reality, man is a social product).
ಮಾನವರು ಸಮುದಾಯ ಜೀವಿಗಳೆಂದಾಗ, ಅವರು ಸಾಮಾಜಿಕ ಸಮುದಾಯದ ಮತ್ತು ಚಾರಿತ್ರಿಕ ಸಮುದಾಯದ ಸದಸ್ಯರೆಂಬುದನ್ನು ಗುರುತಿಸ ಬೇಕು. ಮಾನವರ ಸಾಮಾಜಿಕತೆಯು ಅವರ ಪೂರ್ವಜರಿಂದ, ಅವರ ಸಮಕಾಲೀನರಿಂದ ಮತ್ತು ಅವರ ಉತ್ತರಾಧಿಕಾರಿಗಳನ್ನು ಉದ್ದೇಶಿಸಿ ಮಾಡುವ ಕ್ರಿಯೆಗಳಿಂದ ಕೂಡಿದೆ ಎಂಬುದನ್ನು ನಾವು ಮರೆಯಬಾರದು. ಈ ಭೂತ, ಭವಿಷ್ಯತ್ ಮತ್ತು ವರ್ತಮಾನದ ದೃಷ್ಟಿಯೇ ವಾಸ್ತವತೆಯು ಸಾಮಾಜಿಕವಾಗಿ ನಿರ್ಮಾಣವಾಗಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಡುವುದು.
ವಾಸ್ತವತೆಯ ಸಾಮಾಜಿಕ ನಿರ್ಮಾಣ ಸಿದ್ಧಾಂತವು ಸಮಾಜದ ಎರಡು ಮುಖ್ಯ ಆಯಾಮಗಳನ್ನು ನಮ್ಮ ಗಮನಕ್ಕೆ ತರುವುದು:
೧. ಸಮಾಜ ವಸ್ತುನಿಷ್ಠ ಅಸ್ತಿತ್ವ ಹೊಂದಿದ್ದು ನಮ್ಮ ಜೀವನವನ್ನು ಸಂಸ್ಥೆಗಳ ಮೂಲಕ ರೂಪಿಸುವುದು
೨. ವ್ಯಕ್ತಿಗಳು ತಮ್ಮ ದೈನಂದಿನ ಜೀವನದ ಕ್ರಿಯೆಗಳನ್ನು ವ್ಯಕ್ತಿನಿಷ್ಠವಾಗಿ ವ್ಯಾಖ್ಯಾನಿಸುವುದರ ಮೂಲಕ ಹೊಸ ಅರ್ಥವನ್ನು - ಸಾಮಾಜಿಕತೆಯ ಸ್ವರೂಪವನ್ನು ಪುನಃ ರಚಿಸುವರು
ವಾಸ್ತವತೆಯ ನಿರ್ಮಾಣವೆಂದರೆ ಡಯಲ್ಕ್ಟೆಕಲ್ ಸಂಬಂಧ ಎನ್ನಬಹುದು. ಡಯಲ್ಕ್ಟೆಕಲ್ ಎಂದರೆ ಅಸ್ತಿತ್ವ ಮತ್ತು ಕ್ರಿಯೆಗಳು ಏಕಕಾಲದಲ್ಲಿ, ಜೊತೆಯಾಗಿ ಇರುವುದು ಮತ್ತು ಕಾರ್ಯನಿರ್ವಹಿಸುವುದು. ಸಮಾಜ ವ್ಯಕ್ತಿಯನ್ನು ರೂಪಿಸುವುದು ಮತ್ತು ವ್ಯಕ್ತಿಗಳು ತಮ್ಮ ಕ್ರಿಯೆಗಳ ಮೂಲಕ ಸಮಾಜವನ್ನು ರಚಿಸುವರು. (ಸಮಾಜದಿಂದ) ರೂಪಿಸಲ್ಪಡುವುದು ಮತ್ತು (ವ್ಯಕ್ತಿಗಳಿಂದ) ರೂಪಿಸುವಿಕೆ ನಿರಂತರವಾಗಿ ನಡೆಯುವಂತಹುದು. ಯಾರು ಯಾರನ್ನು ರೂಪಿಸುತ್ತಾರೆ ಎಂಬ ಪ್ರಶ್ನೆ ಸರಿಯಲ್ಲ. ಅವರಿಬ್ಬರು ಪರಸ್ಪರ ಪೂರಕವಾಗಿ ಕ್ರಿಯೆಯಲ್ಲಿ ತೊಡಗುವರು. ಸಮಾಜ ಮತ್ತು ವ್ಯಕ್ತಿಗಳ ನಡುವಿನ ಅಂತಃಕ್ರಿಯೆಯಿಂದಾಗಿಯೇ ವಾಸ್ತವತೆಯು ಸಾಮಾಜಿಕವಾಗಿ ನಿರ್ಮಾಣಗೊಳ್ಳುತ್ತಾ ಹೋಗುವುದು.
ಬರ್ಜರ್ ಮತ್ತು ಲಕ್ಮನ್ ಅವರು ಶುದ್ಧ ಸಮಾಜಶಾಸ್ತ್ರೀಯ ವಿವರಣೆಯನ್ನು ತಮ್ಮ ಈ ಸಿದ್ಧಾಂತದ ಮೂಲಕ ನೀಡಿರುವರು. ಸಮಾಜ-ವ್ಯಕ್ತಿಗಳ ನಡುವಿನ ಅಂತಃಕ್ರಿಯೆಯು ನಮ್ಮ ಜೀವನದಲ್ಲಿ ಹಾಸುಹೊಕ್ಕಿರುವುದನ್ನು ಗುರುತಿಸಿದರೆ, ವಾಸ್ತವತೆ ಮಾನವ ನಿರ್ಮಿತ ಮತ್ತು ಪುನರ್ನಿಮಾಣವೂ ಮಾನವರಿಂದ ಸಾಧ್ಯ ಎಂಬುದನ್ನು ತಿಳಿಯಾಗಿ ತಿಳಿಸುತ್ತದೆ. ಈ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳುವುದೇ ಸಮಾಜಶಾಸ್ತ್ರೀಯ ತಿಳುವಳಿಕೆ.
Comments