top of page

ಸಮಾಜಶಾಸ್ತ್ರೀಯ ಕಲ್ಪನೆ

Soumya Kumar

Updated: Apr 23, 2024

ಸಮಾಜಶಾಸ್ತ್ರೀಯ ಕಲ್ಪನೆ

ನಾವು ಯಾವುದನ್ನು ವೈಯಕ್ತಿಕ ವಿಷಯಗಳೆಂದು ತಿಳಿದುಕೊಂಡಿದ್ದೇವೋ, ಅವು ಸಾಮಾಜಿಕ ಸ್ವರೂಪದ ಅಂಶವನ್ನು ಹೊಂದಿದೆ ಎಂಬುದನ್ನು ಅರಿಯುವ ಸಾಮರ್ಥ್ಯವೇ ಸಮಾಜಶಾಸ್ತ್ರೀಯ ಕಲ್ಪನೆ. ಒಂದೇ ದೇಶ, ಕಾಲ, ಸನ್ನಿವೇಶದಲ್ಲಿ ವಾಸಿಸುತ್ತಿರುವ ಜನರು ಸಮಾನ ಅನುಭವಗಳನ್ನು ಹೊಂದಿರ ಬಹುದಾದ್ದರಿಂದಲೇ, ಸಾಮಾಜಿಕತೆಯು ಕಂಡುಬರುವುದು. ಆದ್ದರಿಂದ ಸಾಮಾಜಿಕತೆ ಎಂದರೆ, ಹಂಚಿಕೊಳ್ಳಲ್ಪಟ್ಟ ಅನುಭವಗಳಲ್ಲದೇ, ಬೇರೆ ಅಲ್ಲ. ಅನೇಕ ಸಂದರ್ಭಗಳಲ್ಲಿ ಮೇಲು ನೋಟಕ್ಕೆ ವೈಯಕ್ತಿಕ ಎನಿಸುವಂತಹ ವಿಷಯಗಳು, ಸಾಮಾಜಿಕ ಸ್ವರೂಪದ್ದಾಗಿರುತ್ತದೆಂಬ ಅರಿವನ್ನು ನೀಡುವ ಪ್ರತಿಭೆಯೇ ಸಮಾಜಶಾಸ್ತ್ರೀಯ ಕಲ್ಪನೆ. ಸಮಾಜಶಾಸ್ತ್ರವು ಮಾನವತಾವಾದದ ನೆಲೆಗಟ್ಟಿನಲ್ಲಿ ಬೆಳೆದಿದೆ ಹಾಗೂ ಈ ಬೆಳವಣಿಗೆಗೆ ಕಾರಣ ಅದರ ಮಾನವೀಯ ವಿಶ್ಲೇಷಣಾ ಸಾಮರ್ಥ್ಯ ಎಂಬುದನ್ನು ಈ ಪರಿಕಲ್ಪನೆ ಸೂಚಿಸುತ್ತದೆ.

C Wright Mills

ಸಿ ರೈಟ್ ಮಿಲ್ಸ್ ಅವರು The Sociological Imagination ಎಂಬ ಪುಸ್ತಕವನ್ನು ೧೯೫೯ರಲ್ಲಿ ಪ್ರಕಟಿಸಿದರು. ಇಮಾಜಿನೇಷನ್ ಎಂಬ ಪದ ಬಳಸುವಾಗ, ರೈಟ್ ಮಿಲ್ಸ್ ಅವರು ಕಲ್ಪನಾ ಶಕ್ತಿಯ ಬಗ್ಗೆ ಮಾತ್ರ ಸೂಚಿಸುತ್ತಿಲ್ಲ; ಅದೊಂದು ಸೃಜನ ಶಕ್ತಿ, ಸೃಷ್ಟಿ ಶಕ್ತಿಯೂ ಹೌದು. ಅದನ್ನು ಪ್ರತಿಭೆ ಎನ್ನಬಹುದು. (ಆದರೆ, ಪ್ರತಿಭೆ ಎಂಬ ಪದ ಗೊಂದಲವನ್ನು ಉಂಟು ಮಾಡಬಹುದಾದ್ದರಿಂದ, ಕಲ್ಪನೆ ಎಂಬ ಪದವನ್ನು ಸಾಮಾನ್ಯವಾಗಿ ಬಳಸುವೆ). ಸಮಾಜಶಾಸ್ತ್ರೀಯ ಕಲ್ಪನೆಯು ಸಮಾಜಶಾಸ್ತ್ರದ ದಾರ್ಶನಿಕ ಶಕ್ತಿಯನ್ನು ನಮ್ಮ ಗಮನಕ್ಕೆ ತರುವುದು. ಸಾಮಾಜಿಕ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಸುಲಭಸಾಧ್ಯವಾಗಿಸುವ ಒಂದು ಉತ್ತಮ ಸಾಧನ.

ಎಡಪಂಥೀಯ ಚಿಂತಕರೆಂದು ಗುರುತಿಸಲ್ಪಡುವ ಮಿಲ್ಸ್ ಅವರು ಸಮಾಜಶಾಸ್ತ್ರವು ಅತಿಯಾದ ಸೈದ್ಧಾಂತಿಕ ಅಮೂರ್ತತೆಯಿಂದ ಹಾಗು ಕೇವಲ ಮಾಹಿತಿ ಸಂಗ್ರಹಿಸುವ ಹುಚ್ಚಿನಿಂದ ಬಳಲುತ್ತಿದೆ ಮತ್ತು ಈ ಜಾಡ್ಯಗಳಿಂದ ಹೊರಬರದಿದ್ದರೆ, ನಿಷ್ಪ್ರಯೋಜಕವಾಗುವುದೆಂದು ವಾದಿಸಿದ್ದಾರೆ. ಹಾಗಾಗಿ, ಈ ಗ್ರಂಥವು ಸಮಾಜಶಾಸ್ತ್ರದ ಸ್ವರೂಪ ಮತ್ತು ಉದ್ದೇಶಗಳನ್ನು ಗುರುತಿಸುವುದು. ಸಮಾಜಶಾಸ್ತ್ರ ಅಧ್ಯಯನ ವಿಷಯದ ಭವಿಷ್ಯದ ದಾರಿಯನ್ನೂ ಗುರುತಿಸುವ ಗ್ರಂಥ.

ಸರಳವಾಗಿ ಹೇಳಬೇಕೆಂದರೆ, ಸಮಾಜಶಾಸ್ತ್ರೀಯ ಕಲ್ಪನೆಯು ವೈಯಕ್ತಿಕ ಜೀವನವು ಹೇಗೆ ಸಾಮಾಜಿಕ ರಚನೆಗಳ ಜೊತೆ ಅಂತಃಕ್ರಿಯೆಯಲ್ಲಿ ತೊಡಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂಬುದನ್ನು ಗುರುತಿಸುವಂತಹ ಮನಸ್ಸಿನ ಸಾಮರ್ಥ್ಯವನ್ನು ಸೂಚಿಸುವುದು. ಮಿಲ್ಸ್ ಈ ಸಾಮರ್ಥ್ಯವನ್ನು ಮನಸ್ಸಿನ ಗುಣ – quality of mind, ಎಂದು ಕರೆದಿರುವರು.

ಸಮಾಜಶಾಸ್ತ್ರವು ವ್ಯಕ್ತಿಗಳ ತೊಂದರೆಗಳನ್ನು ಸಾರ್ವಜಿನಿಕ ಸಮಸ್ಯೆ ಅಥವಾ ವಿಷಯವಾಗಿ ಪರಿವರ್ತಿಸುತ್ತದೆ.

ವ್ಯಕ್ತಿಗಳು ಯಾವ ಬಗೆಯಲ್ಲಿ ತಮ್ಮ ಜೀವನವನ್ನು ಅರ್ಥಮಾಡಿಕೊಳ್ಳುತ್ತಾರೆ ಎಂಬುದನ್ನು ವಿಶ್ಲೇಷಿಸುತ್ತಾ, ವ್ಯಕ್ತಿಯು ಜೀವನದಲ್ಲಿ ಎದುರಿಸುವ ಸಮಸ್ಯೆಗಳಿಗೂ ಸಾಮಾಜಿಕ ರಚನೆಗೂ ನಿಕಟ ಸಂಬಂಧವಿದೆಯೆನ್ನುತ್ತಾರೆ. ಅವರು ಹೇಳುವಂತೆ ಇಂದಿನ ದಿನಗಳಲ್ಲಿ ಜನರು ತಮ್ಮ ಖಾಸಗಿ ಜೀವನವು ಸರಣಿ ಸ್ವರೂಪದ ಬಲೆಯೆಂದು ಭಾವಿಸುತ್ತಾರೆ. ಅವರಿಗೆ ದೈನಂದಿನ ಜೀವನದ ಸಮಸ್ಯೆಗಳಿಂದ ಹೊರಬರುವುದು ಅಸಾಧ್ಯವೆಂದೆನಿಸುತ್ತದೆ; ಈ ಅನಿಸಿಕೆ ಸತ್ಯವೂ ಕೂಡ. ಸಾಮಾನ್ಯ ಜನರಿಗೆ ತಾವೇನು ಮಾಡುತ್ತಾರೋ ಹಾಗು ದೈನಂದಿನ ಖಾಸಗಿತನದ ವಲಯದಲ್ಲಿ ಕಟ್ಟಿಹಾಕಲ್ಪಟ್ಟಿರುವುದರ ಬಗ್ಗೆ ಮಾತ್ರ ಪ್ರತ್ಯಕ್ಷ ಅರಿವಿರುತ್ತದೆ; ಅವರ ದೃಷ್ಟಿ ಹಾಗೂ ಶಕ್ತಿಗಳು ಅವರ ಉದ್ಯೋಗ, ಕುಟುಂಬ ಮತ್ತು ನೆರೆಹೊರೆಗೆ ಸೀಮಿತವಾಗಿರುತ್ತದೆ; ಇತರ ಸಾಮಾಜಿಕ ಪರಿಸರಗಳಲ್ಲಿ ಅವರ ಚಲನೆ ಪ್ರಾತಿನಿಧಿಕ ಸ್ವರೂಪದ್ದಾಗಿರುತ್ತದೆ ಮತ್ತು ಕೇವಲ ಪ್ರೇಕ್ಷಕರಂತಿರುತ್ತದೆ. ತಮ್ಮ ಸದ್ಯದ ಸ್ಥಿತಿಯನ್ನು ಅತಂತ್ರಗೊಳಿಸುವ ಆತಂಕಗಳ ಬಗ್ಗೆ ಆಕಾಂಕ್ಷೆಗಳ ಬಗ್ಗೆ ಅವರು ಹೆಚ್ಚು ತಿಳಿದಷ್ಟೂ, ತಾವು ಕಟ್ಟುಹಾಕಿಲ್ಪಟ್ಟಿರುವೆವು ಎಂಬ ಭಾವನೆ ಹೆಚ್ಚುವುದು.

ಈ ಬಗೆಯ ಸಿಲುಕಿಗೊಂಡಿರುವ ಭಾವನೆಯ ತಳಹದಿಯಲ್ಲಿರುವುದು ಮೇಲು ನೋಟಕ್ಕೆ ಅವೈಯಕ್ತಿಕವೆನಿಸುವ, ವಿಶ್ವವ್ಯಾಪಿ ಸಾಮಾಜಿಕ ರಚನೆಯಲ್ಲಿನ ಬದಲಾವಣೆಗಳು. ಆದರೆ, ಪ್ರಸ್ತುತ ಸಮಾಜದ ವಾಸ್ತವಗಳು ಅಲ್ಲಿ ವಾಸಿಸುತ್ತಿರುವಂತಹ ಪ್ರತ್ಯೇಕ ಸ್ತ್ರೀ-ಪುರುಷರ ಚರಿತ್ರೆ ಕೂಡ ಆಗಿರುತ್ತದೆ. ಒಂದು ದೇಶವು ಕೈಗಾರಿಕೀಕರಣಗೊಂಡಂತೆ ಓರ್ವ ಕೃಷಿಕನು ಉದ್ಯೋಗಿಯಾಗಬಹುದು ಅಥವಾ ನಿರುದ್ಯೋಗಿಯಾಗಬಹುದು; ಊಳಿಗಮಾನ್ಯ ಪದ್ಧತಿಯ ಭೂಮಾಲೀಕನು ನಿರ್ಗತಿಕನಾಗಬಹುದು ಅಥವಾ ಓರ್ವ ವ್ಯಾಪಾರಿಯಾಗಬಹುದು. ವರ್ಗಗಳು ಮೇಲೇರಿದಂತೆ ಅಥವ ಕೆಳಗಿಳಿದಂತೆ, ವ್ಯಕ್ತಿಯು ಉದ್ಯೋಗಿಯಾಗಬಹುದು ಅಥವಾ ನಿರುದ್ಯೋಗಿಯಾಗಬಹುದು. ಯುದ್ಧಗಳುಂಟಾದಾಗ ಇನ್ಸೂರೆನ್ಸ್ ವ್ಯಾಪಾರಿ ರಾಕೆಟ್ ಹಾರಿಸುವನಾಗಬಹುದು; ಅಂಗಡಿಯಲ್ಲಿ ಲೆಕ್ಕ ಬರೆಯುವವನು, ರ‍್ಯಾಡಾರ್ ಆಪರೇಟರ್ ಆಗಬಹುದು; ಓರ್ವ ಪತ್ನಿ ಅಥವಾ ಪತಿ ಒಂಟಿಯಾಗಿ ಜೀವಿಸಬಹುದು; ಒಂದು ಮಗುವು ತನ್ನ ತಂದೆ-ತಾಯಿಯರಿಲ್ಲದೆ ಬೆಳೆಯಬಹುದು. ವ್ಯಕ್ತಿಯ ಜೀವನವನ್ನಾಗಲಿ ಅಥವ ಒಂದು ಸಮಾಜದ ಚರಿತ್ರೆಯನ್ನಾಗಲಿ, ಒಂದರಿಂದ ಮತ್ತೊಂದನ್ನು ಬೇರ್ಪಡಿಸಿ ಅರಿಯಲು ಸಾಧ್ಯವಿಲ್ಲ.

ವಿಪರ್ಯಾಸವೆಂದರೆ, ಜನರು ತಾವು ಎದುರಿಸುವ ಸಮಸ್ಯೆಗಳನ್ನು ಚಾರಿತ್ರಿಕ ಬದಲಾವಣೆ ಅಥವಾ ಸಾಂಸ್ಥಿಕ ಅಸಾಮಂಜಸ್ಯತೆಗಳಿಂದಾಗಲಿ ವ್ಯಾಖ್ಯೆ ಮಾಡುವುದಿಲ್ಲ. ಹಾಗೆಯೇ ತಮ್ಮ ಸುಖ-ದುಃಖಗಳನ್ನು ಸಮಾಜದ ಏಳು-ಬೀಳುಗಳೊಡನೆ ಸಂಬಂಧಿಸುವ ಪ್ರಯತ್ನ ಮಾಡುವುದಿಲ್ಲ. ತಮ್ಮ ವೈಯಕ್ತಿಕ ಜೀವನದ ಮಾದರಿಗಳು ಮತ್ತು ಜಾಗತಿಕ ಚರಿತ್ರೆಯ ನಡುವಿರುವಂತಹ ಕ್ಲಿಷ್ಟ ಸಂಬಂಧದ ಅರಿವಿಲ್ಲದಿರುವುದರಿಂದ, ಸಾಮಾನ್ಯ ಜನರು ತಾವೇನಾಗುತ್ತಿದ್ದೇವೆ ಹಾಗೂ ತಾವು ಯಾವ ಬಗೆಯಲ್ಲಿ ಚರಿತ್ರೆಯ ರೂಪಿಸುವಿಕೆಯಲ್ಲಿ ಭಾಗವಹಿಸುತ್ತಿದ್ದೇವೆ ಎಂಬುದನ್ನು ತಿಳಿದಿಲ್ಲ. ನಾವಿಂದು ವ್ಯಕ್ತಿ ಮತ್ತು ಸಮಾಜ, ಜೀವನ ವೃತ್ತಾಂತ ಮತ್ತು ಚರಿತ್ರೆ, ಸ್ವಪ್ರಜ್ಞೆ ಮತ್ತು ಪ್ರಪಂಚದ ಅನ್ಯೋನ್ಯ ಪ್ರಭಾವವನ್ನು ಗುರುತಿಸಲು ಅವಶ್ಯವಿರುವ ಮನೋವೃತ್ತಿ ಹೊಂದಿಲ್ಲ.

ಕೆಲವು ಉದಾಹರಣೆಗಳನ್ನು ಗಮನಿಸೋಣ:

೧. ಇಂಗ್ಲೀಷ್ ಭಾಷೆ ಬರದಿರುವುದರಿಂದ ನನಗೆ ಉದ್ಯೋಗ ದೊರೆಯುತ್ತಿಲ್ಲ

೨. ನನಗೆ ಕಂಪ್ಯೂಟರ್ ಬಳಸಲು ಬರವುದಿಲ್ಲ. ಆದ್ದರಿಂದ ಉದ್ಯೋಗ ದೊರೆಯುತ್ತಿಲ್ಲ.

೩. ನನಗೆ ಗಣಿತ ಕಷ್ಟವೆನಿಸುವುದರಿಂದ, ಕಲಾ ವಿಭಾಗ ಆಯ್ದುಕೊಂಡೆ

ಮೇಲಿನ ಮೂರೂ ಸನ್ನಿವೇಶಗಳಲ್ಲೂ ಸಮಸ್ಯೆಯ ಮೂಲ ವೈಯಕ್ತಿಕ ನೆಲೆಯದ್ದೋ ಅಥವಾ ಸಾಮಾಜಿಕವಾದದ್ದೋ ಎಂಬುದನ್ನು ನಾವು ಗುರುತಿಸಬೇಕಾಗುತ್ತದೆ. ಸೂಕ್ಷ್ಮವಾಗಿ ವಿಚಾರ ಮಾಡಿದರೆ, ಇಂಗ್ಲೀಷ್ ಭಾಷೆಯನ್ನು ಕಲಿಯುವ ಅವಕಾಶ, ಕಂಪ್ಯೂಟರ್ ಗಳನ್ನು ಬಳಸಲು ಮತ್ತು ಅದಕ್ಕೆ ಬೇಕಾದ ಕೌಶಲ್ಯವನ್ನು ಪಡೆಯಲು ಬೇಕಾದ ತರಬೇತಿ, ಹಾಗು ಗಣಿತವನ್ನು ಅಸಂತೋಷಕರವಾಗಿ ಬೋಧಿಸುವ ಕ್ರಮದಿಂದಾಗಿ ತನ್ನಂತೆಯೇ ಅನೇಕ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದನ್ನು ನಾವು ಮನಗಾಣಬಹುದು. ಇಂತಹ ಸಂದರ್ಭಗಳಲ್ಲಿ ನಿರುದ್ಯೋಗಿಯಾಗಿರುವುದಕ್ಕೆ ಅಥವಾ ಗಣಿತವನ್ನು ಸರಿಯಾಗಿ ಕಲಿಯದಿರುವುದಕ್ಕೆ ವ್ಯಕ್ತಿಯನ್ನು ವೈಯಕ್ತಿಕವಾಗಿ ಜವಾಬ್ದಾರನನ್ನಾಗಿ ಮಾಡಿ, ದೂಷಿಸುವುದರಲ್ಲಿ ಯಾವುದೇ ಅರ್ಥವಿಲ್ಲ.

ಹಾಗೆಯೇ, ಮತ್ತೊಂದು ಉದಾಹರಣೆಯನ್ನು ಗಮನಿಸೋಣ: ನಾನು ದಪ್ಪಕ್ಕಿದ್ದೇನೆ. ತೆಳ್ಳಗಾಗಬೇಕು ಎಂದು ಬಯಸಿದರೆ, ಆ ಬಯಕೆಯ ಮೂಲವೇನೆಂಬುದನ್ನು ನಾವು ಸ್ಪಷ್ಟವಾಗಿ ಗುರುತಿಸಬೇಕು. ಗುಂಪಿನಲ್ಲಿರುವ ಬಹುಪಾಲು ಮಹಿಳೆಯರು/ಹುಡುಗಿಯರು ಈ ಬಗೆಯ ಬಯಕೆಯಿಂದ ಪ್ರೇರಿತರಾಗಿ, ಅಪೌಷ್ಠಿಕತೆಯಿಂದ ನರಳಿದರೆ, ಅದು ಸಾಮಾಜಿಕ ಸಮಸ್ಯೆಯಾಗುವುದೇ ಹೊರತು, ವೈಯಕ್ತಿಕ ನೆಲೆಯ ಸಮಸ್ಯೆಯಲ್ಲ.

ಆದ್ದರಿಂದ, ಸಮಾಜಶಾಸ್ತ್ರೀಯ ಕಲ್ಪನೆಯು ಆತ್ಮಚರಿತ್ರೆ ಮತ್ತು ಚರಿತ್ರೆಗಳ ನಡುವಿನ ಸಂಬಂಧಗಳನ್ನು ಅರಿಯಲು ಸಹಾಯ ಮಾಡುತ್ತದೆ. ಪ್ರತಿಯೊಂದು ಹಂತದಲ್ಲೂ ನಾವು ವ್ಯಕ್ತಿಗಳೂ ಹೌದು ಮತ್ತು ಸಾಮಾಜಿಕ ಪ್ರಪಂಚಗಳ ಸದಸ್ಯರೂ ಹೌದು.

ನಾವೆದುರಿಸುವ ಅಸಮಾನತೆಗಳು ಮತ್ತು ಅನ್ಯಾಯಗಳು ನಮಗೆ ದೊರೆಯುವ ಅವಕಾಶಗಳನ್ನು ಮತ್ತು ನಮ್ಮ ಸುಪ್ತ ಪ್ರತಿಭೆ ಅರಳುವುದೋ ಅಥವಾ ಇಲ್ಲವೋ ಎಂಬುದನ್ನು ನಿರ್ಧರಿಸುತ್ತದೆ. ಈ ಪರಿಕಲ್ಪನೆಯ ಮೂಲಕ ಚರಿತ್ರೆ ಹಾಗೂ ವೈಯಕ್ತಿಕ ಜೀವನವನ್ನು ಅರ್ಥಮಾಡಿಕೊಳ್ಳುವುದಷ್ಟೇ ಅಲ್ಲ, ಸಮಾಜದಲ್ಲಿ ಅವುಗಳ ನಡುವಿರುವ ಸಂಬಂಧವನ್ನು ಕೂಡ ಹಿಡಿದಿಡಬಹುದು. ಈ ಬಗೆಯ ದೃಷ್ಟಿಕೋಣ ಕೇವಲ ಸಮಾಜಶಾಸ್ತ್ರದ ಉಪನ್ಯಾಸಕರುಗಳಿಗಷ್ಟೇ ಸೀಮಿತವಾಗಿರಬೇಕಿಲ್ಲ; ಪ್ರತಿಯೊಬ್ಬ ಮನುಷ್ಯನೂ ಈ ಅಭ್ಯಾಸವನ್ನು ಬೆಳಸಿಕೊಳ್ಳಬಹುದು. ಈ ಅರಿವು ನಮ್ಮ ಸದ್ಯದ, ವೈಯಕ್ತಿಕ ಸಾಮಾಜಿಕ ಸ್ಥಿತಿ ಹಾಗೂ ನಮ್ಮ ಜೀವನವನ್ನು ರೂಪಿಸುವ, ನಮ್ಮನ್ನು ಸುತ್ತುವರೆದಿದ್ದರೂ ದೂರದಲ್ಲಿರುವ, ಅವೈಯಕ್ತಿಕ ಸಾಮಾಜಿಕ ಪ್ರಪಂಚದೊಡನೆ ಇರುವ ಸಂಬಂಧಗಳನ್ನು ತಿಳಿಯಲು ಅವಕಾಶ ಮಾಡಿಕೊಡುತ್ತದೆ.

ಅಂದರೆ, ನಾವು ವಾಸಿಸುವ ಸಾಮಾಜಿಕ ಪ್ರಪಂಚಗಳ ಬಗ್ಗೆ ವಿಮರ್ಶಾತ್ಮಕವಾದ ಪ್ರಶ್ನೆಗಳನ್ನು ಕೇಳಲು ಮತ್ತು ಅವುಗಳಿಗೆ ಉತ್ತರಗಳನ್ನು ಹುಡುಕಲು ಸಮಾಜಶಾಸ್ತ್ರೀಯ ಕಲ್ಪನೆ ಸಹಾಯ ಮಾಡುವುದು. ಬುದ್ಧಿವಂತಿಕೆಯಿಂದ ಈ ಸಾಮರ್ಥ್ಯವನ್ನು ಬಳಸಿಕೊಂಡರೆ, ನಾವು ನಮಗೋಸ್ಕರ ಗುರುತಿಸಿಕೊಂಡಿರುವ ಗುರಿಗಳನ್ನು ಸಾಧಿಸಲು, ಪರಿಣಾಮಕಾರಿಯಾಗಿ ಜೀವನ ನಡೆಸಲು ಸಹಾಯ ಮಾಡುವುದು.

ಈ ಮಾನಸಿಕ ಸತ್ತ್ವವನ್ನು ಉಳಿಸಿಕೊಳ್ಳಬೇಕೆಂದರೆ, ಸಮಾಜಶಾಸ್ತ್ರವು ಕಾರ್ಪೊರೇಶನ್ನುಗಳು ಮತ್ತು ಸರ್ಕಾರಗಳ ಹಿಡಿತದಿಂದ ಸ್ವತಂತ್ರವಾಗಿರಬೇಕು. ಕೇವಲ ಸಿದ್ಧಾಂತಗಳ ರಚನೆಯಲ್ಲಿ ಮುಳುಗಿಹೋಗುವುದರ ಬದಲು ದೈನಂದಿನ ಜೀವನದ ಸಮಸ್ಯೆಗಳ ಬಗ್ಗೆ ಸಮಾಜಶಾಸ್ತ್ರಜ್ಞರು ಗಮನಹರಿಸಬೇಕೆನ್ನುತ್ತಾರೆ.

ವೈಯಕ್ತಿಕ ತೊಂದರೆ ಮತ್ತು ಸಮಸ್ಯೆ ನಡುವಿನ ವ್ಯತ್ಯಾಸವನ್ನು ಗುರುತಿಸಲು ರೈಟ್ ಮಿಲ್ಸ್ ಅವರು ನೀಡಿರುವ ಕೆಲವು ಉದಾಹರಣೆಗಳನ್ನು ಗಮನಿಸೋಣ. ಮೊದಲಿಗೆ ನಿರುದ್ಯೋಗ, ಒಂದು ಲಕ್ಷ ಜನ ಸಂಖ್ಯೆಯಿರುವ ನಗರದಲ್ಲಿ ಓರ್ವ ವ್ಯಕ್ತಿ ಮಾತ್ರ ನಿರುದ್ಯೋಗಿಯಾಗಿದ್ದರೆ ಅದು ಆತನ ವೈಯಕ್ತಿಕ ಸಮಸ್ಯೆ; ಸ್ಥಿತಿಯ ಪರಿಹಾರಕ್ಕೆ ಆತನ ವ್ಯಕ್ತಿತ್ವ, ಕೌಶಲ್ಯಗಳು ಮತ್ತು ಸದ್ಯದ ಅವಕಾಶಗಳನ್ನು ಪರಿಗಣಿಸಬೇಕಾಗುತ್ತದೆ. ಆದರೆ, ೫೦ ದಶಲಕ್ಷ ಜನಸಂಖ್ಯೆ ದೇಶದಲ್ಲಿ ೧೫ ದಶಲಕ್ಷ ಜನರು ನಿರುದ್ಯೋಗಿಗಳಾಗಿದ್ದರೆ, ಅದೊಂದು ಸಮಸ್ಯೆ – ಸಾಮಾಜಿಕ ವಿವಾದಾಂಶವಾಗುವುದು. ಅವಕಾಶಗಳ ರಚನೆಯೇ ಮುರಿದುಬಿದ್ದಿರುವುದರಿಂದ, ಈ ಸಮಸ್ಯೆಗೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಉತ್ತರ ಕಂಡುಕೊಳ್ಳುವುದು ಕಷ್ಟ ಸಾಧ್ಯ. ಸಮಸ್ಯೆಯ ಸ್ಪಷ್ಟ ನಿರೂಪಣೆ ಹಾಗೂ ಸಾಧ್ಯವಾಗಬಹುದಾದ ಪರಿಹಾರಗಳನ್ನು ಆರ್ಥಿಕ ಮತ್ತು ರಾಜಕೀಯ ಸಂಸ್ಥೆಗಳ ವಿಮರ್ಶೆಯಿಂದ ಮಾತ್ರ ಸಾಧ್ಯ.

ಎರಡನೆಯ ಉದಾಹರಣೆಯಾಗಿ ಯುದ್ಧವನ್ನು ಪರಿಗಣಿಸೋಣ. ಯುದ್ಧದ ಸನ್ನಿವೇಶದಲ್ಲಿ ಹೇಗೆ ಉಳಿದುಕೊಳ್ಳಬಹುದು ಅಥವ ಘನತೆಯಿಂದ ಸಾವನ್ನಪ್ಪಬಹುದು ಎಂಬುದು ವೈಯಕ್ತಿಕ ವಿಷಯ. ಅದೇ ರೀತಿಯಲ್ಲಿ ವೈಯಕ್ತಿಕ ತೊಂದರೆಯು – ಹಣವನ್ನು ಹೇಗೆ ಸಂಪಾದಿಸಬಹುದು, ಸೈನ್ಯದ ಏಣಿಶ್ರೇಣಿ ವ್ಯವಸ್ಥೆಯಲ್ಲಿ ಹೇಗೆ ಮೇಲ್ವರ್ಗಕ್ಕೆ ಹೋಗಬಹುದು, ಅಥವ ಯುದ್ಧದ ಪರಿಸಮಾಪ್ತಿಗೆ ಯಾವ ಬಗೆಯಲ್ಲಿ ಕೊಡುಗೆ ನೀಡಬಹುದು – ಎಂಬುದನ್ನು ಒಳಗೊಂಡಿರುವುದು. ಒಟ್ಟಿನಲ್ಲಿ, ತನ್ನ ಮೌಲ್ಯಗಳ ಚೌಕಟ್ಟಿನಲ್ಲಿ ನಿರ್ದಿಷ್ಟ ಸಾಮಾಜಿಕ ಪರಿಸರಗಳನ್ನು ಗುರುತಿಸಿಕೊಂಡು ಹೇಗೆ ಉಳಿಯುವುದು ಅಥವ ಗೌರವದಿಂದ ಸಾಯಬಹುದು ಎಂಬುದು ವೈಯಕ್ತಿಕ ತೊಂದರೆಯ ಚೌಕಟ್ಟಿಗೆ ಬರುತ್ತದೆ.

ಆದರೆ, ಯುದ್ಧದ ರಾಚನಿಕ ಅಂಶಗಳು ಅದರ ಕಾರಣಗಳ ಬಗೆಯದ್ದಾಗಿದೆ; ಯಾವ ಬಗೆಯ ವ್ಯಕ್ತಿಗಳು ನಾಯಕರಾಗುತ್ತಾರೆ, ಆರ್ಥಿಕ, ಮತ್ತು ರಾಜಕೀಯ, ಕೌಟುಂಬಿಕ ಮತ್ತು ಧಾರ್ಮಿಕ ಸಂಸ್ಥೆಗಳು ಹಾಗೂ ಅಸಂಘಟಿತ ರಾಷ್ಟ್ರ-ಪ್ರಭುತ್ವಗಳ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಹೊಂದಿರುವುದು.

ವಿವಾಹ ಎಂಬ ಸಂಸ್ಥೆಯೂ ಕೂಡ ಈ ಬಗೆಯಲ್ಲಿ ವಿಶ್ಲೇಷಿಸಬಹುದು. ವಿವಾಹದೊಳಗೆ ಸ್ತ್ರೀ-ಪುರುಷರು ವೈಯಕ್ತಿಕ ನೆಲೆಯಲ್ಲಿ ತೊಂದರೆಗಳನ್ನು ಎದುರಿಸಬಹುದು; ಆದರೆ, ಪ್ರತಿ ಸಾವಿರ ವಿವಾಹಿತರಲ್ಲಿ ೨೫೦ ಜನರು ವಿಚ್ಛೇದನ ಪಡೆದರೆ ಅದು ವಿವಾಹ ಹಾಗೂ ಕುಟುಂಬ ಸಂಸ್ಥೆಗಳ ರಚನೆಗೆ ಸಂಬಂಧಿಸಿದ ಸಮಸ್ಯೆಯಾಗುವುದು. ಅಥವ ಬೃಹದ್ಗಾತ್ರ, ಸುಂದರ, ಕೊಳಕು, ಕಾಸ್ಮಾಪಾಲಿಟನ್ ಅವಕಾಶಗಳ ಆಗರ, ಕೊಳಚೆಗೇರಿಗಳು, ಅನಾಮಿಕತೆಯಂತಹ ಗುಣಗಳನ್ನು ಹೊಂದಿರುವ ಬೆಂಗಳೂರಿನಂತಹ ನಗರವನ್ನು ಪರಿಗಣಿಸೋಣ. ಅನೇಕ ಉನ್ನತ ವರ್ಗದವರು ಈ ನಗರದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕಂಡುಕೊಂಡಿರುವ ಮಾರ್ಗವೆಂದರೆ – ಖಾಸಗಿ ಬಡಾವಣೆಗಳು, ಗೇಟೆಡ್ ಕಮ್ಯುನಿಟಿಗಳು, ಸ್ವಂತ ವಾಹನ ನಿಲುಗಡೆಗೆ ಅವಕಾಶವಿರುವ ಬಹುಮಹಡಿ ಕಟ್ಟಡಗಳು. ಅಥವ ನಗರ ಪ್ರದೇಶದಿಂದ ೨೦-೩೦ ಮೈಲಿ ದೂರದ ಪ್ರದೇಶದಲ್ಲಿನ ಫಾರ್ಮ್ ಹೌಸ್‌ಗಳಲ್ಲಿ ವಾಸ.

ಆದರೀ ಖಾಸಗಿ ಮಟ್ಟದ ಸುಲಭಮಾರ್ಗಗಳು ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಆಗುವುದಿಲ್ಲ. ನಗರವೆಂಬ ರಚನೆಯನ್ನು ಕೆಡವಿ ಹೊಸದನ್ನು ರಚಿಸಬೇಕೇ? ಹೌದಾದರೆ, ಯಾವ ಬಗೆಯ ಯೋಜನೆಗಳನ್ನು ರೂಪಿಸಬೇಕು ಮತ್ತು ಯಾರು ಜಾರಿಗೊಳಿಸಬೇಕು? ನಗರವನ್ನು ಸಣ್ಣ-ಸಣ್ಣ ಪ್ರಮಾಣದ ಘಟಕಗಳಾಗಿ ಮಾಡಬೇಕೆ? ಅಥವಾ ಹೊಸ ಸ್ಥಳದಲ್ಲಿ ನೂತನ ನಗರ ನಿರ್ಮಿಸಬೇಕೆ? ರಾಚನಿಕ ವಿವಾದಾಂಶಗಳನ್ನು ಎದುರಿಸಿ, ಸಮರ್ಪಕ ಪರಿಹಾರ ಪಡೆಯಲು ರಾಜಕೀಯ ಹಾಗೂ ಆರ್ಥಿಕ ಪರಿಸರಗಳ ಇತರೆಲ್ಲ ಪರಿಸರಗಳ ಮೇಲೆ ಬೀರುವ ಪ್ರಭಾವವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಎಲ್ಲಿಯವರೆಗೂ ಆರ್ಥಿಕತೆ ಕುಸಿಯುವ ಸಾಧ್ಯತೆಗಳಿವೆಯೋ ಅದುವರೆಗೂ ನಿರುದ್ಯೋಗ ಸಮಸ್ಯೆಯನ್ನು ನಾವು ಎದುರಿಸಲೇ ಬೇಕು; ಈ ಸನ್ನಿವೇಶದಲ್ಲಿ ವೈಯಕ್ತಿಕ ನೆಲೆಯಲ್ಲಿ ಎದುರಿಸುವುದು ಅಸಾಧ್ಯ. ಎಲ್ಲಿಯವರೆಗೂ ರಾಷ್ಟ್ರ-ಪ್ರಭುತ್ವ ವ್ಯವಸ್ಥೆಯ ಆಂತರಿಕ ರಚನೆಯಲ್ಲಿ ಯುದ್ಧ ಭಾಗವಾಗಿರುತ್ತದೋ ಹಾಗೂ ಔದ್ಯೋಗಿಕ ಪ್ರಪಂಚದಲ್ಲಿ ವ್ಯಕ್ತಿ ಶಕ್ತಿಹೀನನಾಗಿರುತ್ತಾನೋ, ಅದುವರೆಗೂ ವ್ಯವಸ್ಥೆಯ ಸಮಸ್ಯೆಗಳನ್ನು ಆತ ಎದುರಿಸಲಾರ. ಎಲ್ಲಿಯವರೆಗೂ ಕುಟುಂಬ ಎಂಬ ಸಂಸ್ಥೆ ಮಹಿಳೆಯನ್ನು ಕೇವಲ ಕೈಗೊಂಬೆಯಾಗಿ ಪುರುಷರು ಕುಟುಂಬದ ಮೂಲಾಧಾರವೆಂದು ರೂಪಿಸುವುದೋ ಅದುವರೆಗೂ ತೃಪ್ತಿಕರ ವಿವಾಹ ಅಸಾಧ್ಯ ಮತ್ತು ಖಾಸಗಿ ಪರಿಹಾರಗಳು ಅನುಪಯುಕ್ತ. ಎಲ್ಲಿಯವರೆಗೂ ಮೆಗಾಲೋಪೊಲೀಸ್‌ಗಳು ಹಾಗೂ ಖಾಸಗಿ ವಾಹನಗಳು ಅಭಿವೃದ್ಧಿ ಹೊಂದಿದ ಸಮಾಜಗಳ ಅವಿಭಾಜ್ಯ ಅಂಗಗಳಾಗಿರುವುದೋ ಅದುವರೆಗೂ ನಗರ ಜೀವನದ ಸಮಸ್ಯೆಗಳನ್ನು ವೈಯಕ್ತಿಕ ಬುದ್ಧಿವಂತಿಕೆ ಮತ್ತು ಖಾಸಗಿ ಆಸ್ತಿಯು ಮೂಲಕ ಪರಿಹರಿಸಿಕೊಳ್ಳು ಸಾಧ್ಯವಿಲ್ಲ.

ಆದರೆ, ಬಹುಪಾಲು ಸಮಾಜಶಾಸ್ತ್ರಜ್ಞರು ಈ ಪರಿವರ್ತನೆಯ ಕಲೆಯನ್ನು ಮರೆತು ಬಿಟ್ಟಿದ್ದಾರೆ. ಹಾಗಾಗಿ, ಸಮಾಜಶಾಸ್ತ್ರಜ್ಞರಿಗೆ ಅವಶ್ಯವಾಗಿ ಇರಬೇಕಾದ ಸಮಾಜಶಾಸ್ತ್ರೀಯ ಕಲ್ಪನೆಯ ಸಾಮರ್ಥ್ಯ ಕಳೆಗುಂದಿದ್ದು, ಇದಕ್ಕೆ ಎರಡು ಕಾರಣಗಳನ್ನು ಮಿಲ್ಸ್ ಗುರುತಿಸುತ್ತಾರೆ:

೧. ಸಂಶೋಧನಾವಿಧಾನತಾಂತ್ರಿಕತೆಯಲ್ಲಿಸಿಲುಕಿಕೊಂಡಿರುವುದು.

ಕೇವಲ ಅಗಾಧ ಪ್ರಮಾಣದ ಮಾಹಿತಿ ಸಂಗ್ರಹಿಸುವ ತಂತ್ರ ಮತ್ತು ಅವುಗಳ ವಿಶ್ಲೇಷಣೆಯ ಬಗ್ಗೆ ಗಮನಹರಿಸಲಾಗುತ್ತರುವುದು. ಜನರ ಜೀವನಕ್ಕೆ ಪ್ರಮುಖವಾದ ಪ್ರಶ್ನೆಗಳ ಬಗ್ಗೆ ಸಂಶೋಧನೆ ಮಾಡುವುದರ ಬದಲು, ಯಾವುದನ್ನು ಅಳೆಯಬಹುದೋ, ಯಾವುದನ್ನು ಪರಿಶೀಲಿಸಬಹುದೋ, ಆ ಬಗೆಯ ಅಧ್ಯಯನಗಳನ್ನು ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಈ ಬಗೆಯ ಸಂಶೋಧನೆಗಳನ್ನು ನಡೆಸಲು ಹೆಚ್ಚಿನ ಮಟ್ಟದ ಹಣ ಮತ್ತಿತರ ಸಂಪನ್ಮೂಲಗಳ ಅವಶ್ಯಕತೆಯಿರುತ್ತದೆ. ಹಣ ಮತ್ತಿತರ ಸಂಪನ್ಮೂಲಗಳ ಸಹಾಯ ಕೇವಲ ರಾಜಕೀಯ ವ್ಯಕ್ತಿಗಳಿಂದ, ವಾಣಿಜ್ಯೋದ್ಯಮಿಗಳಿಂದ ಮತ್ತು ಮ್ಯಾನೇಜರ್ ಗಳಿಂದ ಸಾಧ್ಯ. ಹಾಗಾಗಿ, ಅಂತಹ ಅಧಿಕಾರದಲ್ಲಿರುವ ವ್ಯಕ್ತಿಗಳೊಡನೆ ಸಂಪರ್ಕ ಉಂಟಾಗುವುದು ಹಾಗು ಅವಶ್ಯಕವಾಗುವುದು. ಇದರಿಂದಾಗಿ, ಕಾರ್ಪೊರೇಶನಗಳು ಮತ್ತು ಸರ್ಕಾರಗಳು ಪ್ರಮುಖವೆಂದು ಪರಿಗಣಿಸುವ ವಿಷಯಗಳ ಬಗ್ಗೆ ಸಂಶೋಧಕರು ಗಮನಹರಿಸುವರೇ ಹೊರತು, ಸಾಮಾನ್ಯ ಜನರು ಎದುರಿಸುವಂತಹ ಸಮಸ್ಯೆಗಳ ಬಗ್ಗೆ ಅಲ್ಲ. ಈ ರೀತಿಯ ಒಲವನ್ನು abstracted empiricism – ಅಮೂರ್ತ ಅನುಭವವಾದ ಎಂದು ಮಿಲ್ಸ್ ನಾಮಕರಣ ಮಾಡಿರುವರು.

ದುರದೃಷ್ಟವೆಂದರೆ, ವಾಸ್ತವಾಂಶಗಳ ಯುಗದಲ್ಲಿ, ಮಹಾಪೂರದಂತೆ ಹರಿದುಬರುತ್ತಿರುವ ಮಾಹಿತಿಗಳು, ಜನರ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿ ಅವರನ್ನು ಪರವಶಗೊಳಿಸಿ, ಅರಗಿಸಿಕೊಳ್ಳುವ ಸಾಮರ್ಥ್ಯಹೀನತೆಯನ್ನು ತಂದಿರುವುದು. ಹಾಗೆಯೇ ಕೇವಲ ತರ್ಕದ ಕೌಶಲ್ಯಗಳನ್ನು ಹೊಂದಿದ್ದರೂ ಕೂಡ ಸಾಲದು. ಬದಲಿಗೆ, ತಾವು ಪಡೆದಂತಹ ಮಾಹಿತಿಯನ್ನು ಸಮರ್ಪಕವಾಗಿ ವಿಶ್ಲೇಷಿಸಿ, ತಮ್ಮ ಸುತ್ತಮುತ್ತಲಿನ ಪ್ರಪಂಚದಲ್ಲಿ ಉಂಟಾಗುತ್ತಿರುವ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗಿಸುವಂತಹ ಮನೋವೃತ್ತಿ ಅವಶ್ಯಕ. ಇದೊಂದು ವಿಶಿಷ್ಟ ಬಗೆಯ ಆಲೋಚಿಸುವ ಅಥವ ಭಾವಿಸುವ ಮಾರ್ಗ. ಈ ವಿಶಿಷ್ಟ ಗುಣ, ಮನೋವೃತ್ತಿಯನ್ನು ಪತ್ರಕರ್ತರು ಹಾಗೂ ವಿದ್ವಾಂಸರು, ಕಲಾಕಾರರು ಹಾಗೂ ಜನರು, ವಿಜ್ಞಾನಿಗಳು ಮತ್ತು ಸಂಪಾದಕರು ಹೊಂದಿರಲೇ ಬೇಕಾಗಿದ್ದು, ಅದನ್ನು ಸಮಾಜಶಾಸ್ತ್ರೀಯ ಕಲ್ಪನೆ ಎಂದು ಕರೆಯುತ್ತಿರುವೆ ಎನ್ನುತ್ತಾರೆ ರೈಟ್ ಮಿಲ್ಸ್

೨. ಸೈದ್ಧಾಂತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹುಚ್ಚು

ಸಮಾಜಶಾಸ್ತ್ರಜ್ಞರು (ಹಾಗು ಇತರ ಸಮಾಜ ವಿಜ್ಞಾನಿಗಳು) ಅತಿ ಮೇಲ್ಮಟ್ಟದ, ಅಮೂರ್ತ ಚಿಂತನೆಗಳ ಬಗ್ಗೆ ಗಮನಹರಿಸಿ, ಅವುಗಳು ವಾಸ್ತವಿಕ ಪ್ರಪಂಚದಲ್ಲಿ ಪ್ರಸತ್ತುತತೆಯನ್ನು ಕಳೆದುಕೊಂಡುಬಿಟ್ಟಿರುವವು. ಈ ಅಮೂರ್ತ ಪರಿಕಲ್ಪನೆಗಳನ್ನು ಕ್ಷೇತ್ರಾಧ್ಯಯನದಲ್ಲಿ ಬಳಸಲು ಬಹು ಕಷ್ಟ ಮತ್ತು ದೈನಂದಿನ ಜೀವನದ ತೊಂದರೆಳಿಂದ ಬಲು ದೂರವಾಗಿರುವವು. ಅಂದರೆ, ಸಂಶೋಧನೆಯಲ್ಲಿ ಸಿದ್ಧಾಂತಗಳ ಬಳಕೆ ಮಾಡುವುದು ಬಹಳ ಕಷ್ಟ. ಮಿಲ್ಸ್ ಅವರು ಈ ಬಗೆಯ ಒಲವನ್ನು grand theory – ಮಹೋನ್ನತ ಸಿದ್ಧಾಂತಗಳೆಂದು ವ್ಯಂಗ್ಯವಾಗಿ ಕರೆದಿರುವರು. ೧೯೫೦-೬೦ರ ದಶಕದ ಅಮೇರಿಕಾದಲ್ಲಿ ಪ್ರಚಲಿತವಿದ್ದ ಟಾಲ್ಕಾಟ್ ಪಾರ್ಸನ್ಸ ಅವರ ಕಾರ್ಯಾತ್ಮಕವಾದವನ್ನು ಈ ಬಗೆಯ ತಪ್ಪು ಒಲವಿಗೆ ಉದಾಹರಣೆಯೆಂದು ಅವರು ಗುರುತಿಸಿದ್ದಾರೆ.

ಮಾನವರು ಸಾಮಾಜೀಕರಣದಿಂದಾಗಿ ಅನೇಕ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಈ ಮೌಲ್ಯಗಳು ನಾವು ಜೀವನದಲ್ಲಿ ತೆಗೆದುಕೊಳ್ಳುವ ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ. ಸಂಶೋಧಕರು ಆಯ್ದುಕೊಳ್ಳುವ ವಿಷಯಗಳೂ ಕೂಡ ಅವರು ಮೈಗೂಡಿಸಿಕೊಂಡಿರುವ ಮೌಲ್ಯಗಳಿಂದ ಪ್ರಭಾವಿತವಾಗಿರುತ್ತದೆ. ಮೌಲ್ಯ ಮುಕ್ತವಾಗಿ ಸಂಶೋಧನಾ ಅಧ್ಯಯನಗಳನ್ನು ನಡೆಸುವುದು ಅಸಾಧ್ಯವೆನ್ನುತ್ತಾರೆ ಮಿಲ್ಸ್. ಏಕೆಂದರೆ, “ಸಮಸ್ಯೆ” ಎಂದರೇನು ಎಂಬುದನ್ನು ನಿರ್ಧರಿಸುವುದೇ ಸಮಾಜಶಾಸ್ತ್ರಜ್ಞರ ಮೌಲ್ಯಗಳು. ಉದಾಹರಣೆಗೆ, ವೇತನ ಅಸಮಾನತೆಯು ಆಧುನಿಕ ಆರ್ಥಿಕತೆಯ ಅವಿಭಾಜ್ಯ ಅಂಗವೇ ಅಥವಾ ಅಧ್ಯಯನಕ್ಕೆ ಒಳಪಡಿಸಬೇಕಾದ ವಿಷಯವೇ? ಇವು ವೇತನ ಅಸಮಾನತೆಯನ್ನು ಸಂಶೋಧಕನು ಯಾವ ಬಗೆಯಲ್ಲಿ ನೋಡುತ್ತಾನೆಂಬುದನ್ನು ಸೂಚಿಸುವುದು. ಮೊದಲ ಬಗೆಯ ಪ್ರಶ್ನೆ ವೇತನ ಅಸಮಾನತೆ ಅನಿವಾರ್ಯ, ಹಾಗಾಗಿ ಅದಕ್ಕೆ ಹೊಂದಿಕೊಂಡು ಹೋಗಬೇಕೆಂಬ ಮೌಲ್ಯವನ್ನು ಸೂಚಿಸಿದರೆ, ಎರಡನೆಯದು ವೇತನ ಅಸಮಾನತೆಯನ್ನು ಕಡಿಮೆಗೊಳಿಸ ಬೇಕೆಂಬ ಮೌಲ್ಯವನ್ನು ಸೂಚಿಸುವುದು.

ನಾವು ಯಾವ ರೀತಿಯಲ್ಲಿ ಪ್ರಶ್ನೆ ಮಾಡುತ್ತೇವೆಂಬುದು ನಮ್ಮ ಮೌಲ್ಯಗಳಿಂದ ನಿರ್ಧರಿಸಲ್ಪಡುತ್ತದೆ. ಹಾಗಾಗಿ, ಸರ್ಕಾರ/ವಾಣಿಜ್ಯ ಸಂಸ್ಥೆಗಳು ಸಂಶೋಧನಾ ಗುರಿಗಳನ್ನು ನಿರ್ಧರಿಸಲು ಅವಕಾಶ ಮಾಡಿಕೊಟ್ಟರೆ, ಸಂಶೋಧಕ ಬಯಸಲಿ/ಬಯಸದಿರಲಿ, ಸರ್ಕಾರ/ವಾಣಿಜ್ಯ ಸಂಸ್ಥೆಗಳ ಮೌಲ್ಯಗಳನ್ನು ಬೆಂಬಲಿಸಲೇ ಬೇಕಾಗುತ್ತದೆ. ಈ ವಾಸ್ತವದ ಬಗ್ಗೆ ಸಮಾಜಶಾಸ್ತ್ರಜ್ಞರು ಎಚ್ಚರದಿಂದಿರಬೇಕು ಹಾಗು ಅದರಿಂದಾಗಿ ಎದುರಿಸಬೇಕಾದ ಸವಾಲುಗಳನ್ನೆದುರಿಸಲು ಸನ್ನದ್ದರಾಗಿರಬೇಕು.

ಸಮಾಜ ವಿಜ್ಞಾನಗಳ ಪರಂಪರೆ ಮುಖ್ಯವಾಗಿ ಮೂರು ಮೌಲ್ಯಗಳ ತಳಹದಿಯಲ್ಲಿ ಕಟ್ಟಲ್ಪಟ್ಟಿದೆ ಎನ್ನುತ್ತಾರೆ, ಮಿಲ್ಸ್. ಅವುಗಳೆಂದರೆ,

೧. ಸತ್ಯ

೨. ವಿಚಾರ/ವೈಚಾರಿಕತೆ

೩. ಸ್ವಾತಂತ್ರ್ಯ

ಸಮಾಜಾಸ್ತ್ರಜ್ಞರು ತಮ್ಮ ಸಂಶೋಧನಾ ಕಾರ್ಯದಲ್ಲಿ ಈ ಮೌಲ್ಯಗಳಿಗೆ ಬದ್ಧರಾಗಿರಬೇಕು. ಸ್ವತಂತ್ರ ವಿಚಾರ ವಿಮರ್ಶೆಯ ಮೂಲಕ ಸತ್ಯವನ್ನು ಅನಾವರಣಗೊಳಿಸಲು, ಎತ್ತಿಹಿಡಿಯಲು ಕಂಕಣಕಟ್ಟಿರಬೇಕು. ಈ ಮೌಲ್ಯಗಳೊಡನೆ ರಾಜಿ ಮಾಡಿಕೊಂಡರೆ, ದಾರಿ ತಪ್ಪುತ್ತೇವೆ.

ಸಮಾಜಶಾಸ್ತ್ರ ಮಾತ್ರವಲ್ಲ, ಎಲ್ಲ ಸಮಾಜವಿಜ್ಞಾನಗಳು ಏನನ್ನು ಸಾಧಿಸಬಹುದೆಂಬುದು ಈ ಮೌಲ್ಯಗಳೊಡನೆ ಸಂಬಂಧಿತವಾಗಿದ್ದು, ಅವುಗಳನ್ನು ಹೇಗೆ ಎತ್ತಿಹಿಡಿಯಬೇಕೆಂಬುದರ ಬಗ್ಗೆ ಪ್ರತಿಯೊಬ್ಬ ಸಮಾಜವಿಜ್ಞಾನಿಯೂ ವೈಯಕ್ತಿಕವಾಗಿ ನಿರ್ಧರಿಸಬೇಕು. ಆಗ ಮಾತ್ರ ಸಮಾಜಶಾಸ್ತ್ರಜ್ಞನು ತನ್ನ ಬೌದ್ಧಿಕ ಮತ್ತು ರಾಜಕೀಯ ಪಾತ್ರಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಸಿ.ರೈಟ್ ಮಿಲ್ಸ್ ಅವರ ಪ್ರಕಾರ ನಾವು ಜೀವಿಸುವ ವಿವಿಧ ಸಾಮಾಜಿಕ ಪರಿಸರಗಳನ್ನು ಹಾಗೂ ಅವುಗಳಲ್ಲಾಗುತ್ತಿರುವ ಬದಲಾವಣೆಗಳನ್ನು ಕೇವಲ ವೈಯಕ್ತಿಕ ಸಾಮಾಜಿಕ ಪರಿಸರದ ಮೂಲಕ ಅರ್ಥ ಮಾಡಿಕೊಳ್ಳದೇ, ಅದರಾಚೆಗೆ ನಾವು ಸಮಾಜಶಾಸ್ತ್ರಜ್ಞರಾಗಿ ನೋಡಬೇಕಾಗುತ್ತದೆ. ನಾವು ಜೀವಿಸುತ್ತಿರುವ ಸಮಾಜದ ವಿವಿಧ ಸಾಮಾಜಿಕ ಸಂಸ್ಥೆಗಳು ವ್ಯಾಪ್ತಿ ಹೆಚ್ಚಿದಂತೆ, ಅವುಗಳ ನಡುವಿನ ಅಂತಸ್ಸಂಬಂಧ ಗಾಢವಾದಂತೆ, ರಾಚನಿಕ ಬದಲಾವಣೆಗಳೂ ಹೆಚ್ಚುವವು. ಇಂತಹ ಸಾಮಾಜಿಕ ರಚನೆಯ ಅರಿವನ್ನು ಹೊಂದಿ, ವಿವಿಧ ಸಾಮಾಜಿಕ ಪರಿಸರಗಳ ನಡುವೆ ಹೆಣೆದುಕೊಂಡಿರುವ ಸಂಬಂಧಗಳನ್ನು ಸೂಕ್ಷ್ಮತೆಯಿಂದ ಬಳಸಿಕೊಳ್ಳುವ ಸಾಮರ್ಥ್ಯ ಅವಶ್ಯಕ. ಈ ಬಗೆಯ ಸಾಮರ್ಥ್ಯವನ್ನು ಹೊಂದಿರುವಂತಹುದೇ ಸಮಾಜಶಾಸ್ತ್ರೀಯ ಕಲ್ಪನೆ. ರೈಟ್ ಮಿಲ್ಸ್ ಅವರು ಎಡಪಂಥೀಯ ಚಿಂತಕರಾಗಿದ್ದರೂ ಕೂಡ, ತಮ್ಮ ಕಾಲದ ಅತ್ಯಂತ ಪ್ರಭಾವಶಾಲಿ ಸಮಾಜಶಾಸ್ತ್ರಜ್ಞನಾಗಿದ್ದ ಟಾಲ್ಕಾಟ್ ಪಾರ್ಸನ್ಸ್ ಮತ್ತು ಆತನ ರಾಚನಿಕ – ಕಾರ್ಯಾತ್ಮಕವಾದ (Structural Functionalism)ದ ಕಟು ಟೀಕಾಕಾರನಾಗಿದ್ದರೂ ಕೂಡ ಆತ ಸೃಷ್ಟಿಸಿದ ಪಾರಿಭಾಷಿಕ ಶಬ್ದವು ಸಮಾನವಾಗಿ ಜನಪ್ರಿಯವಾಗಿರುವುದನ್ನು ನೋಡಿದರೆ, ಅದರ ಸತ್ವವನ್ನು ನಾವು ಅರ್ಥಮಾಡಿಕೊಳ್ಳಬಹುದು.

158 views0 comments

Recent Posts

See All

Induction — Deduction

ಸಾಮಾಜಿಕ ಸಂಶೋಧನೆಯಲ್ಲಿ, ಸಿದ್ಧಾಂತದ ರಚಿಸುವಿಕೆಯಲ್ಲಿ ಈ ಎರಡೂ ಸಂಶೋಧನಾ ವಿಧಾನಗಳನ್ನು ಸಾಮಾನ್ಯವಾಗಿ ಬಳಸಲಾಗುವುದು. ಇವೆರೆಡನ್ನು ಪ್ರತ್ಯೇಕವಾಗಯೇ ಬಳಸಬೇಕೆಂದಿಲ್ಲ. ಎ

Fact — ಸತ್ಯ ಸಂಗತಿ

ಸತ್ಯ ಸಂಗತಿಯು ವಾಸ್ತವತೆಯನ್ನು ಸೂಚಿಸುತ್ತದೆ. ನೈಸರ್ಗಿಕ ಅಥವಾ ಸಾಮಾಜಿಕ ವಿದ್ಯಮಾನದ ನಿರ್ವಿವಾದ ಅವಲೋಕನವನ್ನು ವಾಸ್ತವ ಎನ್ನುತ್ತೇವೆ. ಇದನ್ನು ವಾಸ್ತವಾಂಶ ಎಂದೂ ಕರೆಯ

Why Theory?

೧. ತಿಳಿಯುವುದಕ್ಕೋಸ್ಕರ ತಿಳಿಯಲು ೨. ಯಾವುದಾದರು ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಲು.

Comments


©2022 by LearningSociology. Proudly created with Wix.com

bottom of page