Apr 23, 2024
Apr 23, 2024
Apr 23, 2024
Apr 23, 2024
Apr 23, 2024
Updated: Apr 23, 2024
ಸಮಾಜಶಾಸ್ತ್ರೀಯ ನೋಟ ಮತ್ತು ಅದರ ಕಣ್ಣುಕೂರೈಸುವ ಆಟ: ರಾಂಡಾಲ್ ಕಾಲಿನ್ಸ ಅವರ ಚಿಂತನೆ
ಸಮಾಜಶಾಸ್ತ್ರದ ಪಾಠಕ್ರಮವೊಂದು ಇದೆಯೇ? ಸಾರವವಿದೆಯೇ? ತಿರುಳಿದೆಯೇ?
ಇದೆ. ಆದರೆ, ಈ ಪಾಠಕ್ರಮ ಶಾಶ್ವತವಲ್ಲ. ಗ್ರಂಥಗಳು ಮತ್ತು ಚಿಂತನೆಗಳ ಸ್ವರೂಪದ್ದಲ್ಲ. ಅದು ಕಾಣಬರುವುದು ಚಟುವಟಿಕೆಗಳ ರೂಪದಲ್ಲಿ.
Randall Collins
ಸಮಾಜಶಾಸ್ತ್ರವು ನಿರ್ದಿಷ್ಟ ಚಾರಿತ್ರಿಕ ಸನ್ನಿವೇಶಗಳ ಫಲಸ್ವರೂಪವಾಗಿರುವುದು. ಆದರೆ, ಸಮಾಜಶಾಸ್ತ್ರಜ್ಞರು ಈ ಚಾರಿತ್ರಿಕ ಸನ್ನಿವೇಶಗಳನ್ನು ಬಳಸಿಕೊಂಡು ವಿಶಿಷ್ಟ ಬೌದ್ಧಿಕ ಚಟುವಟಿಕೆಯನ್ನು ಪ್ರಾರಂಭಿಸಲು ಸಫಲರಾದರು. ಈ ಚಟುವಟಿಕೆಯ ರುಚಿ ಇಂದಿಗೂ ಉಳಿದುಕೊಂಡುಬಂದಿದೆ.
ಯಾವುದೀ ಚಟುವಟಿಕೆ?
ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು, ನೀವು ಮತ್ತು ನಾನು ದಿನವೂ ವಾಸಿಸುವ ಪ್ರಪಂಚವನ್ನು, ಸಮಾಜಶಾಸ್ತ್ರೀಯ ನೋಟದ ಮೂಲಕ ನೋಡುವುದು. (It is looking at the world around us, the immediate world you and I live in, through the sociological eye).
ಪ್ರತಿಯೊಂದು ವಸ್ತುವಿಷಯದ ಬಗ್ಗೆ ಸಮಾಜಶಾಸ್ತ್ರವಿದೆ. ನಾವು ಎಲ್ಲಿಯೇ ಇರಲಿ, ಏನನ್ನೇ ಮಾಡುತ್ತಿರಲಿ, ಅಲ್ಲಿ ಸಮಾಜಶಾಸ್ತ್ರೀಯ ನೋಟವನ್ನು ಬೀರಬಹುದು: ಸಭೆಯಲ್ಲಿರಬಹುದು, ಸಮಾರಂಭದಲ್ಲಿರಬಹುದು – ಜನರು ಕುಳಿತು ಕೊಳ್ಳುವ ಮಾದರಿ (ಯಾರು ಯಾರ ಪಕ್ಕದಲ್ಲಿ ಕುಳಿತಿರುವರು), ಯಾರಿಗೆ ಮಾತನಾಡಲು ಆಹ್ವಾನ ಸಿಗುವುದು, ಪರಸ್ಪರರ ಕಡೆ ಯಾರು ನೋಡುವರು, ನಗುವ ರೀತಿ, ಮಾತನಾಡುವ ಧಾಟಿ ಇತ್ಯಾದಿ.
ದಾರಿಯಲ್ಲಿ ನಡೆದುಹೋಗುವಾಗ ಅಥವಾ ಬೆಳಗಿನ ಓಟದಲ್ಲಿರುವಾಗ ನೆರೆಹೊರೆಯಲ್ಲಿ ಯಾವ ವರ್ಗದ ಜನರು ವಾಸಿಸುತ್ತಿದ್ದಾರೆಂಬುದರ ಪಕ್ಷಿನೋಟ ಪಡೆಯಬಹುದು, ವಯೋಗುಂಪಿನ ಪ್ರತ್ಯೇಕತೆ ಅಥವಾ ನಿರ್ದಿಷ್ಟ ವಿಷಯಗಳಿಂದ ಪ್ರೇರಿತವಾಗಿ ಒಟ್ಟಾಗಿ ಸೇರಿರುವ ಸಣ್ಣ ಗುಂಪುಗಳನ್ನು ಗುರುತಿಸಬಹುದು. ಟ್ರಾಫಿಕ್ ಜಾಮಿನಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಕಾರಿನ ಮಾಡೆಲ್ಗೂ ಅದರ ಮೇಲೆ ಅಂಟಿಸಿರುವ ಸ್ಟಿಕರಿಗೂ ಇರುವ ಸಂಬಂಧವನ್ನು ಅಥವಾ ಕಾರಿನ ಸ್ಟೀರಿಯೋ ಅರಚಿಕೊಳ್ಳುತ್ತಿರುವ ಸಂಗೀತದೊಡನೆ ಸಂಬಂಧ ಕಾಣಬಹುದು.
ವಾಸ್ತವದಲ್ಲಿ, ಸಮಾಜಶಾಸ್ತ್ರೀಯ ನೋಟದಿಂದ ಹೊಸದನ್ನು ಕಾಣದಿರುವ ಸನ್ನಿವೇಶಗಳೇ ಇಲ್ಲವೆನ್ನಬಹುದು. ಸಮಾಜಶಾಸ್ತ್ರಜ್ಞನಾಗುವುದೆಂದರೆ, ಜೀವನದಲ್ಲಿ ಬೇಜಾರೆಂದರೇನೆಂಬುದನ್ನು ಕಾಣದಿರುವುದು! (Being a sociologist means never having to be bored).
ಇದು ಇತರ ವಿಜ್ಞಾನಗಳಿಗೂ ಸತ್ಯವಲ್ಲವೇ?
ಸತ್ಯವಿರಬಹುದು. ಆದರೆ, ಸಮಾಜಶಾಸ್ತ್ರದ ವಿಷಯದಲ್ಲಿ ಇದು ಸದಾ ಸತ್ಯ! ಫಿಸಿಕ್ಸ ಅಥವಾ ಅರ್ಥಶಾಸ್ತ್ರ ಅಥವಾ ಉಳಿದ ಯಾವುದೇ ಶಾಸ್ತ್ರವಿರಬಹುದು, ಅಲ್ಲಿ ದೈನಂದಿನ ಪ್ರಪಂಚ ನೇಪಥ್ಯಕ್ಕೆ ಸೇರಿದೆ, ಅಧ್ಯಯನ ತಕ್ಷಣದ ಅನುಭವಕ್ಕೆ ಬರುವುದಿಲ್ಲ. ಆದರೆ, ಸಮಾಜಶಾಸ್ತ್ರಜ್ಞರಿಗೆ ದೈನಂದಿನ ಪ್ರಪಂಚವು ನಿರಂತರವಾಗಿ ಹೊಸತನ್ನು ತೋರಿಸುವ ರಂಗಭೂಮಿಯಾಗಿದೆ.
ಸಮಾಜಶಾಸ್ತ್ರೀಯ ನೋಟದಿಂದ – ದೃಷ್ಟಿಸುವ/ಓದುವ ಪ್ರತಿಯೊಂದೂ ಕೂಡ ಸಮಾಜದ ವಿಸ್ತೃತ ಮಾದರಿಗಳಿಗೆ ಸುಳುಹು ನೀಡುವುದು. ಅದು ಇಂದಿಗಿರಬಹುದು ಅಥವಾ ಹಿಂದಿನಕಾಲಕ್ಕೆ ಸಂಬಂಧಿಸಿರಬಹುದು. ಭವಿಷ್ಯದ ಬಗ್ಗೆ ಕೂಡ ಇದು ಸತ್ಯ. ಉದಾಹರಣೆಗೆ, ಅಂತರ್ಜಾಲ ಪ್ರಪಂಚ ಸಮಾಜಶಾಸ್ತ್ರೀಯ ಅನ್ವೇಷಣೆಯ ಹೊಸ ಸೀಮೆಯಾಗಿರುವುದು.
ಸಹಜವಾಗಿಯೇ, ಕಾಲಕ್ರಮದಲ್ಲಿ ನಾವು ಈ ದೃಷ್ಟಿಗೆ ಹೊಂದಿಕೊಂಡು, ಹೊಸತನ್ನು ನೋಡದಿರಬಹುದು.
ಹಾಗಾದರೆ, ಏನು ಮಾಡಬೇಕು?
ಇತರರ ವಿವರಣೆ, ವರ್ಣನೆಯನ್ನು ಅವಲಂಬಿಸಿ, ನಿರ್ಣಯಗಳಿಗೆ ಬರಬಾರದು. ಅದರಲ್ಲೂ ಕೂಡ, ಸಮೂಹ ಮಾಧ್ಯಮಗಳು ನೀಡುವ ವಿಶ್ಲೇಷಣೆಗಳ ಬಗ್ಗೆ ಎಚ್ಚರದಿಂದಿರಬೇಕು.
ಕಾಲಿನ್ಸ್ ಅವರು ಹೇಳುವಂತೆ – Go and see it yourself. Make it observationally strange, as if you’d never seen it before.
ಹೊಸತನ್ನು ಉಳಿಸಿಕೊಳ್ಳಲು, ಬೆಳೆಸಿಕೊಳ್ಳಲು ಮತ್ತೊಂದು ದಾರಿ ಕೂಡ ಇರುವುದು – ಅದು ಸಾಮಾಜಿಕ ಕ್ರಿಯಾಶೀಲತೆಯ ದಾರಿ. ಈ ದಾರಿಯಲ್ಲಿ ಹೋಗುವುದರ ಮೂಲಕ, ಕ್ರಿಯಾಶೀಲತೆಯ ಮೂಲದೊಡನೆ ಸಂಪರ್ಕ ಸಾಧಿಸಬಹುದು. ಚಳುವಳಿಯ ಜೊತೆಗೂಡುವುದರಿಂದ ನಮ್ಮ ಚೈತನ್ಯವನ್ನು ಪುನಃ ಮರಳಿಪಡೆಯಬಹುದು. ಚಳುವಳಿಯ ಐಕ್ಯತೆ ಮತ್ತು ಬದ್ಧತೆಗಳು ಉತ್ಸಾಹ ಹೆಚ್ಚಿಸುವುದು. ಉದಾಹರಣೆಗೆ, ಜಾಗತಿಕ ವ್ಯವಸ್ಥೆಯ ಸಿದ್ಧಾಂತದ ಚೌಕಟ್ಟಿನಲ್ಲಿ ಕೆಲಸಮಾಡುವವರಿಗೆ, ಅದೊಂದು ವಿಶೇಷ ಶೈಕ್ಷಣಿಕ ವಿಭಾಗ ಮಾತ್ರವಲ್ಲ. ಬಂಡವಾಳಶಾಹಿ ವ್ಯವಸ್ಥೆಯೆಂಬ ಪೆಡಂಭೂತವನ್ನು ಹಿಡಿಯಲು ಅವರು ಒಟ್ಟೋಮನ್ ಸಾಮ್ರಾಜ್ಯ ಕಾಲದ ವ್ಯಾಪಾಗಳು ಹಿಡಿದ ದಾರಿಗಳ ಬಗ್ಗೆ ಕೂಡ ಅವರು ಆಸಕ್ತರಾಗಿರುತ್ತಾರೆ.
ಸಮಾಜಶಾಸ್ತ್ರ ಅತ್ಯಾಕರ್ಷಕವಾಗಿರಲು ಇದು ಮತ್ತೊಂದು ಕಾರಣ. ರಾಜಕೀಯ ಬದ್ಧತೆಯಿಂದ ಕೂಡಿದ್ದರೂ, ಅನೇಕ ಸಾಮಾಜಿಕ ಕಾರ್ಯಕರ್ತರು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿರುವರು. ಸಾಮಾಜಿಕ ಕ್ರಿಯಾಶೀಲತೆ ಹಾಗು ಶೈಕ್ಷಣಿಕ ಬದ್ಧತೆಗಳೆರೆಡೂ ಸನಿಹದಲ್ಲಿರುವ, ಅಥವಾ ಬೆಸೆದುಕೊಂಡಿರುವಂತಹ ಅಧ್ಯಯನ ವಿಷಯಗಳಲ್ಲಿ ಸಮಾಜಶಾಸ್ತ್ರ ಅಗ್ರಗಣ್ಯ ಸ್ಥಾನದಲ್ಲಿರುವುದು. ಇದು ಇತರ ಶಿಸ್ತುಗಳಲ್ಲಿ ವಿರಳವೆಂದೇ ಹೇಳಬೇಕು.
ಅತ್ಯಂತ ಹತ್ತಿರಕ್ಕೆ ಬರುವುದು – ಸಾಹಿತ್ಯ. ಆದರೆ, ಅದೂ ಕೂಡ ಸಮಾಜಶಾಸ್ತ್ರದಿಂದ ಪ್ರೇರಿತವಾಗಿರುವುದು. ಇನ್ನು ಬ್ಲಾಕ್ ಸ್ಟಡೀಸ್, ಎಥ‌್ನಿಕ್ ಸ್ಟಡೀಸ್, ಮಹಿಳಾ ಅಧ್ಯಯನಗಳಂತೂ ಸಮಾಜಶಾಸ್ತ್ರದ ಸಂಬಂಧಿಗಳೇ. ಅವು ಶೈಕ್ಷಣಿಕ ಮತ್ತು ಕ್ರಿಯಾಶೀಲತೆಯ ಹೈಬ್ರಿಡ್ ಆಗಿವೆ.
ಹಾಗಾದರೆ, ಈ ನಾಟಕದ ಮುಖ್ಯ ವಸ್ತುವೇನು? ಎರಡು ಬದ್ಧತೆಗಳನ್ನು ಗುರುತಿಸಬಹುದು. ಒಂದು ಸಮಾಜಶಾಸ್ತ್ರೀಯ ನೋಟ. ಎರಡನೆಯದು, ಸಾಮಾಜಿಕ ಕ್ರಿಯಾಶೀಲತೆ. ಎರಡರಲ್ಲಿ ಯಾವುದಾರು ಒಂದನ್ನಾದರೂ ಪಾಲಿಸಬಹುದು. ಎರಡನ್ನೂ ಒಟ್ಟುಗೂಡಿಸಬಹುದು. ಬಹುಷಃ, ಬೇರೆ-ಬೇರೆ ಪ್ರಮಾಣದಲ್ಲಿ ಕಾಣಬರಬಹುದು.
1950ರ ದಶಕದಲ್ಲಿ, ಅಮೇರಿಕಾದ ಸಮಾಜಶಾಸ್ತ್ರಜ್ಞರಾದ ಸಿ.ರೈಟ್ ಮಿಲ್ಸ್ ಅವರು ಆಗ ಸಮಾಜಶಾಸ್ತ್ರದ ಸಮ್ರಾಟರ ರೀತಿಯಲ್ಲಿದ್ದ ಟಾಲ್ಕಾಟ್ ಪಾರ್ಸನ್ಸ ಅವರ ಕಾರ್ಯಾತ್ಮಕವಾದವನ್ನು, ಗ್ರಾಂಡ್ ಥಿಯರಿ ಎಂದು ತೀವ್ರವಾಗಿ ಟೀಕಿಸಿದರು. ಪಾರ್ಸನ್ಸ್ ಅವರು ಎಲ್ಲ ಬಗೆಯ ಸಾಮಾಜಿಕ ಕ್ರಿಯೆಗಳನ್ನು ವಿವರಿಸಲು ಸಾಧ್ಯವಾಗುವಂತಹ ಸಿದ್ಧಾಂತವನ್ನು ರಚಿಸಿ, ಆ ಸಿದ್ಧಾಂತದ ಆಧಾರದಲ್ಲಿ ಸಂಶೋಧನೆಗಳನ್ನು ನಡೆಸಬೇಕೆಂಬ ಪ್ರಸ್ಥಾಪವನ್ನು ಮಂಡಿಸಿದ್ದರು. ಮಿಲ್ಸ್ ಅವರು ಇದನ್ನು abstracted empiricism ಎಂದು ಕರೆದಿದ್ದಾರೆ. ಅಂದರೆ, ಕೇವಲ ಮಾದರಿ ಜನಸಂಖ್ಯೆಯನ್ನು ಆಧರಿಸಿದ ಸಮೀಕ್ಷೆಯನ್ನು ನಡೆಸಿ, ಅವರ ಉತ್ತರಗಳನ್ನು ಒಟ್ಟುಗೂಡಿಸಿ ಸಾಮಾನ್ಯೀಕರಣಗಳನ್ನು ಪಡೆಯುವುದು. ಇದರಿಂದ ಸಮಾಜಶಾಸ್ತ್ರಜ್ಞರು ಸಾಮಾಜಿಕ ಬದಲಾವಣೆಯನ್ನು ತರಬಹುದಾದಂತಹ ಸಂಶೋಧನೆಗಳಿಂದ ದೂರವಾಗುವರು. ಅವರ ನೈಜ ಬದ್ಧತೆಯಾದ ಸಾಮಾಜಿಕ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುವರು. ಪ್ರಸ್ತುತ ಸಮಾಜದ ವಿಮರ್ಶೆ ಮಾಡದೆ ಅಸಫಲರಾಗುವರು.
ರೈಟ್ ಮಿಲ್ಸ್ ಅವರ ವಾದಕ್ಕೆ ತದ್ವಿರುದ್ಧವಾಗಿ ವಾದಿಸಿದವರು ಜೇಮ್ಸ ರೂಲ್. ಅವರ ಪ್ರಕಾರ, ಸಮಾಜಶಾಸ್ತ್ರವು ವಿಶಿಷ್ಟವಾದ ಅನೇಕ ಬೌದ್ಧಿಕ ಚಳುವಳಿಗಳ ತಂಗುದಾಣವಾಗಿದೆ. ಈ ಚಳುವಳಿಗಳು ತಾವೇ ಸೃಷ್ಟಿಸಿದ ಸಮಸ್ಯೆಗಳು ಮತ್ತು ತಾಂತ್ರಿಕತೆಗಳಲ್ಲಿ ಮುಳುಗಿಹೋಗಿವೆ. ರೂಲ್ಸ್ ಅವರ ಪ್ರಕಾರ, ಇವೆಲ್ಲವೂ ಕೂಡ ಆಂತರಿಕ ದೃಷ್ಟಿ ದೋಷದಿಂದ ಬಳಲುತ್ತಿರುವವು. ರಾಶನಲ್ ಚಾಯ್ಸ್, ಮಹಿಳಾವಾದ, ನೆಟ್ ವರ್ಕ ಮುಂತಾದ ಚಳುವಳಿಗಳು ತಾವು ಗುರುತಿಸಿದ ವಿಷಯಗಳ ಬಗ್ಗೆ ಮಾತ್ರ ಮಾತನಾಡುತ್ತಾ, ವಿಶೇಷ ಭಾಷೆಯಲ್ಲಿ ಮುಳುಗಿಹೋಗಿವೆ. ಇದರಿಂದಾಗಿ, ನಿರಂತರ ಸಮಸ್ಯೆಗಳಾದ – ಸ್ತರವಿನ್ಯಾಸ, ಸಾಮಾಜಿಕ ವಿಘಟನೆ, ಹಿಂಸೆಯಂತಹ ಸಂಗತಿಗಳ ಬಗ್ಗೆ ಗಮನವಿಲ್ಲದಂತಾಗಿದೆ.
ಕಾರ್ಯಕರ್ತರ ನಿಲುವನ್ನ ಬೆಂಬಲಿಸುವರ ಪ್ರಕಾರ, ಯಾರು ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಿಲ್ಲವೋ ಅವರು ದಡ್ಡರು, ಹಾಗು ಪ್ರತಿಗಾಮಿ ಮನೋಭಾವನೆಯವರು. ಆದರೆ, ಅವರು ವಿರೋಧಿಸುವ ಗುಂಪಿನವರಲ್ಲೂ ಕೂಡ ಅಗಾಧವಾದ ಬದ್ಧತೆ ಕಂಡುಬರುತ್ತದೆ. ಉದಾಹರಣೆಗೆ, ಎರ್ವಿಂಗ್ ಗಾಫಮನ್ ಅವರು, ಮಾನಸಿಕ ಆಸ್ಪತ್ರೆಯಲ್ಲಿ ರೋಗಿಯಾಗಿ ದಾಖಲಾಗಿ, ಅಲ್ಲಿನ ಇತರ ರೋಗಿಗಳನ್ನು ಮತ್ತು ಮನಃಶಾಸ್ತ್ರಜ್ಞರನ್ನು ಮಾತ್ರ ಅವಲೋಕಿಸಿತ್ತಿರಲಿಲ್ಲ; ಆತ ತನ್ನದೇ ಆದ ಸಮಾಜಶಾಸ್ತ್ರೀಯ ದೃಷ್ಟಿಕೋಣದಿಂದ ಅಲ್ಲಿ ನಡೆಯುತ್ತಿದ್ದ ಅಂತಃಕ್ರಿಯಗಳನ್ನು ಅವಲೋಕಿಸಿ, ನೇಪಥ್ಯ (backstage) ಎಂಬ ನವೀನ ಸಮಾಜಶಾಸ್ತ್ರೀಯ ಪರಿಕಲ್ಪನೆಯನ್ನು, ಸಂಶೋಧನೆಯ ಸಾಧನವನ್ನು ನಮಗೆ ನೀಡಿದ್ದಾರೆ. ಇದರಿಂದಾಗಿ ಯಾವುದು – ನಾರ್ಮಲ್ – ಸಾಮಾನ್ಯ ಮಾನಸಿಕ ಸ್ಥಿತಿ, ಮತ್ತು ಸಾಮಾನ್ಯತೆಯ ಬಗೆಗಿನ ನಿರ್ಣಯವು ಹೇಗೆ ರಚಿಸಲ್ಪಡುತ್ತದೆ ಎಂಬುದನ್ನು ಗುರುತಿಸಲು ಸಾಧ್ಯವಾಯಿತು.
ಕಾರ್ಯಕರ್ತರ ಪ್ರಕಾರ, “ನೀವು ಪರಿಹಾರದ ಭಾಗವಾಗಿಲ್ಲವೆಂದರೆ, ಸಮಸ್ಯೆಯ ಭಾಗವಾಗಿದ್ದೀರೆಂದು” ತಿಳಿಯಬೇಕು. ಹಾಗೆಯೇ, ಸಮಾಜಶಾಸ್ತ್ರೀಯ ನೋಟದ ಗುಂಪಿನವರ ಪ್ರಕಾರ, ಕಾರ್ಯಕರ್ತರೆಂದರೆ ಈಗಾಗಲೇ ಒಂದು ವಿಷಯದ ಬಗ್ಗೆ ನಿರ್ಧಾರವನ್ನು ತೆಗೆದುಕೊಂಡಿರುವರು ಮತ್ತು ಹೊಸತರ ಬಗ್ಗೆ ಕಣ್ಣು ಮುಚ್ಚಿರುವವರು.
ಸಮಾಜಶಾಸ್ತ್ರೀಯ ಬದ್ಧತೆಯ ಈ ಎರಡೂ ರೂಪಗಳು ಪರಸ್ಪರ ವಿರುದ್ಧ ಸ್ವರೂಪದ್ದು ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಇವೆರೆಡರ ಹದವಾದ ಸಂಮಿಶ್ರಣ ಅವಶ್ಯಕ. ಯಾವುದಾದರು ಒಂದಕ್ಕೆ ಅತಿಯಾದ ಬದ್ಧತೆ ಹೊಂದಿದರೆ, ಮತ್ತೊಂದರ ಬಗ್ಗೆ ಅರಿವನ್ನು ಹೊಂದಲು, ಮತ್ತೊಂದರ ಉತ್ತಮ ಗುಣಗಳನ್ನು ಗುರುತಿಸಲು ಅಸಾಧ್ಯವಾಗುವುದು; ಅತ್ಯಂತ ಕಷ್ಟವಾಗುವುದಂತೂ ನಿಜ.
ಇದೊಂದು ಬಗೆಯ ನೋಡದಿರುವಿಕೆ ಎಂದೇ ಹೇಳಬಹುದು. ಆಗ, ಸಹಜವಾಗಿಯೇ, ಉತ್ತಮ ಸಂಶೋಧನೆಗಳ ಬಗ್ಗೆ ಕೂಡ ನಾವು ಅನವಶ್ಯಕವಾಗಿ ಟೀಕೆ ಮಾಡುತ್ತೇವೆ. ಸಂಶೋಧನೆಯು ತಿಳಿಸಿಕೊಡುವ ಪಾಠಗಳ ಬಗ್ಗೆ ನಾವು ಗಮನವನ್ನೇ ಹರಿಸುವುದಿಲ್ಲ. ಕಾಲಿನ್ಸ್ ಅವರು ಆರ್ಲಿ ಹಾಕ್ಸಚೈಲ್ಡ ಅವರ ದಿ ಟೈಮ್ ಬೈಂಡ್ ಕೃತಿಯನ್ನು ಜನರು ಹಾಗು ಸಮಾಜಶಾಸ್ತ್ರಜ್ಞರು ಸ್ವೀಕರಿಸಿದ ರೀತಿ, “ನೋಡದಿರುವಿಕೆ”ಗೆ ಒಂದು ಉತ್ತಮ ಉದಾಹರಣೆಯೆನ್ನುತ್ತಾರೆ. ಬಹುಷಃ ಅವರು ರಾಬರ್ಟ್ ಕಿಂಗ್ ಮರ್ಟನ್ ಅವರ – a way of seeing is also a way of not seeing, ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೇಳಿದ್ದಾರೆ ಎನಿಸುತ್ತದೆ.
ಆರ್ಲಿ ಹಾಕ್ಸಚೈಲ್ಡ ಅವರು ಸ್ತ್ರೀವಾದದಿಂದ ಪ್ರಭಾವಿತರಾದವರು. ಎರ್ವಿಂಗ್ ಗಾಫಮನ್ ಅವರ ಶಿಷ್ಯೆ. ಆಕೆಯ ದಿ ಟೈಮ್ ಬೈಂಡ್ ಕೃತಿ ೧೯೯೭ರಲ್ಲಿ ಪ್ರಕಟವಾಯಿತು. ಅದಕ್ಕೂ ಮುನ್ನ ಅವರು ಉದ್ಯೋಗಸ್ಥ ಮಹಿಳೆಯರ ಬಗ್ಗೆ ದಿ ಸೆಕಂಡ್ ಶಿಫ್ಟ್ ಎಂಬ ಸಂಶೋಧನಾ ಕೃತಿಯನ್ನು ೧೯೮೯ರಲ್ಲಿ ಪ್ರಕಟಿಸಿದ್ದರು. ಈ ಕೃತಿಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಮನೆಗೆಲಸ ಎರಡನೆಯ ಪಾಳಿಯ ಕೆಲಸವಾಗಿ ಪರಿಣಮಿಸಿದೆ ಎಂಬುದನ್ನು ತೋರಿಸಿಕೊಟ್ಟಿತು. ಅದಲ್ಲದೇ, ಗಗನ ಸಖಿಯರ ಬಗ್ಗೆ ಕೂಡ ಡ್ರಮಾಟರ್ಜಿಯ (ಗಾಫಮನ್ ಅವರ ಕೊಡುಗೆ) ದೃಷ್ಟಿಕೋಣದಿಂದ ಒಂದು ಅಧ್ಯಯನವನ್ನೂ ಕೂಡ ಆಕೆ ಮಾಡಿದ್ದರು. ಹಾಗಾಗಿ, ಹಾಕ್ಸಚೈಲ್ಡ್ ಅವರು ಪ್ರಸ್ತುತತೆಯನ್ನು ಹೊಂದಿದ ಮತ್ತು ಸಾಕಷ್ಟು ವಿವಾದಕ್ಕೆ ಸಿಲುಕಿದ ವಿಷಯಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದರು ಎಂಬುದು ಸತ್ಯ. ಮಹಿಳಾ ಸಂಬಂಧಿ ವಿಷಯಗಳು ಸಾಮಾಜಿಕ ಕಾಳಜಿಹೊಂದಿದ ವಿಷಯಗಳೆಂಬುದರಲ್ಲೂ ಕೂಡ ಸಂಶಯವಿಲ್ಲ.
ಕಾಲಿನ್ಸ್ ಅವರು ಗುರುತಿಸುವಂತೆ, ಹಾಕ್ಸಚೈಲ್ಡ್ ಅವರ ಅಧ್ಯಯನಗಳು ಕಷ್ಟಕರವಾದದ್ದು. ಏಕೆಂದರೆ, ಆಕೆ ವಿವಾದಾತ್ಮಕ ವಿಷಯಗಳನ್ನು ಆರಿಸಿಕೊಳ್ಳುತ್ತಾರೆ. ಸಾಮಾಜಿಕ ಕಾರ್ಯಕರ್ತರ ರೀತಿಯಲ್ಲಿ ಸಂಶೋಧನೆಯ ವಿಷಯವನ್ನು ಆಯ್ದುಕೊಳ್ಳುವರು. ಆದರೆ, ಅವರ ದೃಷ್ಟಿಕೋಣ ಏಕಮುಖವಾಗಿಲ್ಲ. ಬದಲಿಗೆ, ತನ್ನ ಸಂಶೋಧನೆ ತೋರಿಸಿಕೊಡಬಹುದಾದ ಅನಿರೀಕ್ಷಿತ ತಿರುವುಗಳನ್ನು ಪರಿಶೀಲಿಸುವ ಮುಕ್ತ ಮನಸ್ಸನ್ನು ಹೊಂದಿರುವರು.
ದಿ ಟೈಂ ಬೈಂಡ್ (The Time Bind) ಪುಸ್ತಕ ಒಂದು ಒಗಟನ್ನು ಉತ್ತರಿಸುವ ಪ್ರಯತ್ನ ಮಾಡಿದೆ. ಅದೇನೆಂದರೆ, ಆಧುನಿಕ ಸಮಾಜಗಳಲ್ಲಿ ಅನೇಕ ಕುಟುಂಬ-ಸ್ನೇಹಿ ಉದ್ಯೋಗ ನೀತಿಗಳನ್ನು ಜಾರಿಗೆ ತಂದಿದ್ದರೂ ಕೂಡ ಮಹಿಳೆಯರೇಕೆ ಅದರ ಸಂಪೂರ್ಣ ಉಪಯೋಗವನ್ನ ಪಡೆದುಕೊಳ್ಳುತ್ತಿಲ್ಲ? ಅವರೇಕೆ, ಕಾನೂನುಬದ್ಧವಾಗಿ ಲಭ್ಯವಿರುವ ಹೆರಿಗೆ ರಜೆಯ ಸಂಪೂರ್ಣ ಅವಧಿಯ ಸೌಲಭ್ಯ ಪಡೆಯದೇ, ಮುಂಚೆಯೇ ಉದ್ಯೋಗಕ್ಕೆ ಹಾಜರಾಗುವುರು?
ಕುಟುಂಬ-ಸ್ನೇಹಿ ಉದ್ಯೋಗ ನೀತಿಗಳೆಂದರೆ – ಕಡಿಮೆ ಅವಧಿಯ ಕರ್ತವ್ಯ, ಹೆರಿಗೆ ರಜೆ, ಹೊಂದಿಕೊಳ್ಳುವ ಕರ್ತವ್ಯ ಅವಧಿ ಮುಂತಾದವು. ಈ ನೀತಿಯಿಂದಾಗಿ, ಉದ್ಯೋಗಸ್ಥ ಮಹಿಳೆಯರು ತಾಯಂದಿರಾದಾಗ, ಆರೋಗ್ಯ ಮತ್ತು ಮಕ್ಕಳ ಪಾಲನೆಗಾಗಿ ಅನೇಕ ಸವಲತ್ತುಗಳನ್ನು ಪಡೆಯುವರು. ಆದರೆ, ಅಮೇರಿಕಾದ ಮಹಿಳೆಯರು ಈ ಸವಲತ್ತಿನ ಪೂರ್ಣಲಾಭ ಪಡೆಯದಿದ್ದದ್ದು ಆಶ್ಚರ್ಯಕರವಾದ್ದರಿಂದ, ಹಾಕ್ಸಚೈಲ್ಡ ಈ ಸಮಾಜಶಾಸ್ತ್ರೀಯ ಸಮಸ್ಯೆಯ ಬಗ್ಗೆ ಕುತೂಹಲಗೊಂಡು ಅಧ್ಯಯನ ನಡೆಸಿದರು.
ಈ ಸಮಸ್ಯೆಗೆ ರಾಜಕೀಯವಾಗಿ ಸರಿಯಾದ, ರಾಜಕೀಯ ಸಮರ್ಪಕವಾದ, ಸಾಂಪ್ರದಾಯಿಕವಾದ ಉತ್ತರವೆಂದರೆ – ಮಹಿಳೆಯರು ಆರ್ಥಿಕ ಒತ್ತಡಕ್ಕೆ ಒಳಗಾಗಿ ಬೇಗನೇ ಕೆಲಸಕ್ಕೆ ಹಿಂದಿರುಗುವರು. ಅಲ್ಲದೇ, ಕಾನೂನು ಬದ್ಧವಾದರೂ ದೀರ್ಘಕಾಲದ ರಜೆಯನ್ನು ಕಾರ್ಪೊರೇಟ್ಗಳು ನೇತ್ಯಾತ್ಮಕವಾಗಿ ನೋಡುವುದರಿಂದ, ರಜೆ ತಗೆದುಕೊಳ್ಳುವುದನ್ನ ಕೆಲಸದ ಜವಾಬ್ದಾರಿ ಮತ್ತು ಒತ್ತಡದಿಂದ ತಪ್ಪಿಸಿಕೊಳ್ಳುವ ತಂತ್ರವೆಂದು ಅರ್ಥೈಸುವುದರಿಂದ, ಅವರು ಬಲವಂತದಿಂದ ರಜೆ ಅವಧಿಯನ್ನು ಕತ್ತರಿಸಿ, ಕೆಲಸಕ್ಕೆ ಮರಳುವರು, ಎಂದಾಗಿರುತ್ತದೆ.
ಹಾಕ್ಸಚೈಲ್ಡ್ ಈ ಸಮಸ್ಯೆಯನ್ನು ಬೇರೊಂದು ರೀತಿಯಲ್ಲಿ ನೋಡಲಾರಂಭಿಸಿದರು. ಆಕೆ ಗುರುತಿಸುವಂತೆ, ಆಧುನಿಕ ಪ್ರಪಂಚದ ಮಧ್ಯಮ ವರ್ಗದ ಮಹಿಳೆಯರು ತಮ್ಮ ಕುಟುಂಬ ಮತ್ತು ಕಾರ್ಯಕ್ಷೇತ್ರಗಳೆರೆಡರಲ್ಲೂ ಅನೇಕ ಬದಲಾವಣೆಗಳನ್ನು ನೋಡಿದ್ದಾರೆ/ನೋಡುತ್ತಿದ್ದಾರೆ. ಕುಟುಂಬ ಮತ್ತು ಉದ್ಯೋಗಕ್ಷೇತ್ರಗಳೆರೆಡೂ ಬದಲಾವಣೆ ಹೊಂದುತ್ತಿರುವ ಸಾಮಾಜಿಕ ಸ್ಥಳಗಳು. ಈ ಬದಲಾವಣೆಗೆ ಒಂದು ಮುಖ್ಯ ಕಾರಣ – ಮಹಿಳಾ ಚಳುವಳಿ. ಆದರೆ, ಮಧ್ಯಮವರ್ಗ ಕೇಂದ್ರಿತವಾದ ಮಹಿಳಾಚಳುವಳಿಯು ಅನೇಕ ಅನಿರೀಕ್ಷಿತ ಪರಿಣಾಮಗಳನ್ನು ಉಂಟುಮಾಡಿತು.. ಮಹಿಳೆಯರು ಉದ್ಯೋಗ ಸ್ಥಳದಲ್ಲಿ ಪುರುಷರಿಗಿಂತ ಹೆಚ್ಚುಕಾಲ ದುಡಿಯಬೇಕಾಗಿತ್ತು (ವೇತನ ತಾರತಮ್ಯವಿದ್ದಿದ್ದರಿಂದ) ಮತ್ತು ಮನಗೆ ಹಿಂದಿರುಗಿದ ನಂತರದಲ್ಲಿ ಅಲ್ಲಿಯೂ ಕೂಡ ಕೆಲಸ ಮಾಡಬೇಕಿತ್ತು (ಸೆಕೆಂಡ್ ಶಿಫ್ಟ್/ಎರಡನೆಯ ಪಾಳಿಯ ಕೆಲಸ) ಹಾಗು ಅಲ್ಲಿ ಅವರ ಗಂಡಂದಿರು ಅವರಿಗೆ ನೀಡುತ್ತಿದ್ದ ಸಹಾಯ ಅತ್ಯಲ್ಪ ಪ್ರಮಾಣದ್ದಾಗಿತ್ತು. ಪುರುಷರು ಒಂದು ಪಾಳಿಯ ಕೆಲಸ ಮಾಡಿದರೆ, ಮಹಿಳೆಯರು ಪ್ರತಿದಿನ ಎರಡು ಪಾಳಿ ಕೆಲಸದಲ್ಲಿ ತೊಡಗಬೇಕಿತ್ತು. ಇದರಿಂದಾಗಿ, ಮನೆ ಹೆಚ್ಚು-ಹೆಚ್ಚು ತೊಂದರೆನ್ನು ಉಂಟುಮಾಡುವಂತಹ ಸಾಮಾಜಿಕ ಸ್ಥಳವಾಯಿತು!
ಇದರಿಂದಾಗಿ, ಮಹಿಳೆಯರು, ನಿಧಾನವಾಗಿ ಗೃಹ-ಕ್ಷೇತ್ರದ ತಮ್ಮ ಹೋರಾಟವನ್ನು ಹಿಂದಕ್ಕೆ ತಳ್ಳಿ, ಉದ್ಯೋಗ ಕ್ಷೇತ್ರವನ್ನು ತಮ್ಮ ಭಾವನಾತ್ಮಕ ಕೇಂದ್ರವನ್ನಾಗಿ ಮಾಡಿಕೊಳ್ಳುತ್ತಿರುವರು ಎಂದು ಹಾಕ್ಸಚೈಲ್ಡ ಸೂಚಿಸುತ್ತಾರೆ. ಇದರೊಟ್ಟಿಗೆ, ಕುಟುಂಬದಲ್ಲಿ ಆಗುತ್ತಿರುವ ಬದಲಾವಣಗೆಳೂ ಇದಕ್ಕೆ ಪೂರಕವಾಗಿರುವುದು. ಕುಟುಂಬದ ಅನೇಕ ಕಾರ್ಯಗಳನ್ನು ಹೊರಗಿನ ಸಂಸ್ಥೆಗಳು/ಸಂಘಗಳು ಮಾಡುವುದರಿಂದ, ಕುಟುಂಬ ಸಂಬಂಧಿ ಕೌಶಲ್ಯಗಳು ಶಿಥಿಲಗೊಳ್ಳುತ್ತಿವೆ. ಹಾಕ್ಸಚೈಲ್ಟ ಇದನ್ನು deskill ಎಂದು ಕರೆದಿದ್ದಾರೆ. ಉದಾಹರಣೆಗೆ, ಆಹಾರ ತಯಾರಿಕೆ, ಮಕ್ಕಳ ಆರೈಕೆ ಅಥವಾ ಮನರಂಜನೆಗಳು ಕುಟುಂಬಕ್ಕೆ ಸೀಮಿತವಾದ ಕೌಶಲ್ಯಗಳಾಗಿ ಉಳಿದಿಲ್ಲ. ಇವುಗಳು ಕುಟುಂಬದ ಹೊರಗಿನ ವ್ಯವಸ್ಥೆಗಳಿಂದ ಪೂರೈಸಲ್ಪಡುತ್ತಿವೆ. ಈ ಕೌಶಲ್ಯಗಳು ವಾಣಿಜ್ಯ ಸೇವೆಗಳಾಗಿ ಮಾರ್ಪಟ್ಟಿವೆ.
ಉದ್ಯೋಗ ಕ್ಷೇತ್ರದಲ್ಲಿ ಸಹಭಾಗಿ ಕಾರ್ಯನಿರ್ವಹಣಾ ಪದ್ಧತಿ (participatory management system) ಜಾರಿಗೆ ಬರುತ್ತಿರುವುದರಿಂದ, ಮಹಿಳೆಯರು ಅಲ್ಲಿ ಹೆಚ್ಚು ಆಸಕ್ತಿ ತೋರಿಸುವರು. ಮನೆಗಳಲ್ಲಿ ಕಾಣಬರುತ್ತಿದ್ದ ಸಹಭಾಗಿ ವ್ಯವಸ್ಥೆಯ ಬದಲು ಆಧುನಿಕ ಔದ್ಯೋಗಿಕ ಪದ್ಧತಿಗಳು ಮನೆಯಂಗಳಕ್ಕೆ ಲಗ್ಗೆ ಇಟ್ಟಿರುವವು. ಮನೆಗೆಲಸ ವೈಜ್ಞಾನಿಕ ಗೃಹ ನಿರ್ವಹಣೆಯಾಗಿ ಪರಿಣಮಿಸಿದರೆ, ಉದ್ಯೋಗದ ಕಛೇರಿ ಭಾವನಾತ್ಮಕವಾಗಿ ಹೆಚ್ಚು ಸ್ನೇಹಪರವಾಗುತ್ತಿದೆ. ಮಕ್ಕಳೊಡನೆ “ಗುಣಾತ್ಮಕ ಸಮಯ” ಕಳೆಯಬೇಕೆಂಬ ಪರಿಕಲ್ಪನೆ ಕೂಡ ಈ ಬಗೆಯ ವೈಜ್ಞಾನಿಕ ತರಬೇತಿಯ ಭಾಗವಾಗಿದೆ. ತಾನೇ ಮಾಡಿ-ನೋಡು (do it yourself – DIY) ತರಬೇತಿ ಕಾರ್ಯಕ್ರಮಗಳು ಹಾಗು ಪುಸ್ತಕಗಳು, ಗುಣಾತ್ಮಕ ಸಮಯ ಮುಂತಾದವು ಕುಶಲತೆಯಿಂದ ಭಾವನೆಗಳನ್ನು, ಆಹಾರ ಪದ್ಧತಿಗಳನ್ನು ಮತ್ತು ಸಮಯವನ್ನು ಬಳಸಿಕೊಳ್ಳುವ ತಂತ್ರಗಾರಿಕೆಗಳಾಗಿವೆ. ಸರಳವಾಗಿ ಹೇಳಬೇಕೆಂದರೆ, ಉದ್ಯೋಗ ಮತ್ತು ಕುಟುಂಬದ ಸಮಗ್ರ ಚಿತ್ರಣವೇ ಬದಲಾಗುತ್ತಿದೆ. ಜನರು ವಿವಾಹವಾಗಿರುವುದು ಉದ್ಯೋಗದೊಡನೆ. ಈ ಹಿನ್ನಲೆಯಲ್ಲಿ ವಿಚ್ಛೇದನ ಮತ್ತು ವೈವಾಹಿಕ ಜೀವನದ ಮುರಿದುಬೀಳುವಿಕೆಯನ್ನು ಅರ್ಥಮಾಡಿಕೊಳ್ಳಬೇಕು. ವಿಚ್ಛೇದನ ಮತ್ತು ಕೆಲಸ ಕಳೆದುಕೊಳ್ಳುವಿಕೆ ವಿರುದ್ಧ ಸಮತೋಲನಗಳೆಂದು ಪರಿಗಣಿಸಬೇಕು.
ಕಾಲಿನ್ಸ್ ಅವರು ನಮ್ಮ ಗಮನಕ್ಕೆ ತರುವಂತೆ, ಹಾಕ್ಸಚೈಲ್ಡ್ ಅವರು ಸ್ತ್ರಿವಾದದ ಹಿನ್ನಲೆಯಲ್ಲಿ ಸಮಾಜಶಾಸ್ತ್ರೀಯ ಕಲ್ಪನೆಯನ್ನು ಪ್ರಾರಂಭಿಸಿದರೂ, ತಮ್ಮ ಸಂಶೋಧನೆ ಮುಂದುವರೆದಂತೆ ಔದ್ಯೋಗಿಕ ವ್ಯವಸ್ಥೆ ಮತ್ತು ಅದರ ಕಾರ್ಯನಿರ್ವಹಣೆಯ ಶೈಲಿಯ ನಿರಂತರ ಪ್ರಭಾವವನ್ನು, ಅದರ ಬೆಳೆಯುತ್ತಿರುವ ವ್ಯಾಪಕತೆಯನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ. ಔದ್ಯೋಗಿಕ ಸಮಾಜದ ಅಧ್ಯಯನವನ್ನು ಮಾಡಲೆಂದೇ ಸಮಾಜಶಾಸ್ತ್ರ ಉಗಮಗೊಂಡಿತು. ಆದರೆ, ವಿವಿಧ ಕಾರಣಗಳಿಂದಾಗಿ, ಔದ್ಯೋಗಿಕ ಮಾದರಿಯ ಸಾಮಾಜಿಕ ಜೀವನವನ್ನು, ಅದರ ವಿವಿಧ ರೂಪಾಂತರಗಳನ್ನು ಗುರುತಿಸುವಲ್ಲಿ ಸಾಮಾಜಿಕ ಕಾರ್ಯಕರ್ತರ ದೃಷ್ಟಿಕೋಣ ಅಸಫಲಾವಗಿತ್ತು ಮತ್ತು ಶೋಷಣೆಯ ವಾದವೆಂಬ ತುಳಿದ ಹಾದಿಯಲ್ಲಿಯೇ ನಡೆದಿತ್ತು. ಹಾಕ್ಸಚೈಲ್ಡ್ ಅವರು ಸಮಾಜಶಾಸ್ತ್ರೀಯ ನೋಟವನ್ನು ಬೆಳೆಸಿ ಉಳಿಸಿಕೊಂಡಿದ್ದರಿಂದ, ಹೊಸತನ್ನು ಗುರುತಿಸುವಲ್ಲಿ ಸಫಲರಾದರು. ಹಾಗೆಯೇ, ಗಾಫಮನ್ ಅವರನ್ನು ಅನುಸರಿಸಿ ಜನರು ರಂಗಸ್ಥಳದಲ್ಲಿ ಒಂದು ರೀತಿ ವರ್ತಿಸುವರು ಮತ್ತು ನೇಪಥ್ಯದಲ್ಲಿ ಮತ್ತೊಂದು ಬಗೆಯಾಗಿ ವರ್ತಿಸುವರು ಎಂಬುದನ್ನೂ ತೋರಿಸಿಕೊಟ್ಟಿದ್ದಾರೆ, ಉದಾಹರಣೆಗೆ, ತಾಯಿ-ತಂದೆಯರು ಎಲ್ಲರ ಮುಂದೆ ತಮ್ಮ ಮಕ್ಕಳ ಪೂಷಣೆಯ ಪಾತ್ರವನ್ನು ಸಾಮಾಜಿಕ ನಿರೀಕ್ಷೆಗಳಂತೆ ನಿರ್ವಹಿಸಿದರೂ ಕೂಡ, ಆ ಪಾತ್ರಕ್ಕೆ ಸಂಬಂಧಿಸಿದ ಆತಂಕ, ಒತ್ತಡಗಳನ್ನು ನೇಪಥ್ಯದಲ್ಲಿ (ಅಂದರೆ, ತಮ್ಮ ಖಾಸಗಿ ಸಮಯ, ಸ್ಥಳದಲ್ಲಿ) ನಿರ್ವಹಿಸುವರು. ಹಾಕ್ಸಚೈಲ್ಡ್ ಅವರ ಕೃತಿಗಳು ಸಾಂಪ್ರದಾಯಿಕವಾಗಿ ಬಂದಿರುವ, ಪ್ರಸ್ತುತ ಚಲಾವಣೆಯಲ್ಲಿರುವ ಚಿಂತನಾಕ್ರಮಗಳಾಚೆಯ ಸಾಮಾಜಿಕ ವಾಸ್ತವತೆಯನ್ನು ಅರ್ಥಮಾಡಿಸುತ್ತದೆ. ಹಾಗಾಗಿ, ಸಾಮಾಜಿಕ ನೋಟಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ ಮತ್ತು ಪ್ರಶಂಸೆಗೆ ಪಾತ್ರವಾಗಿದೆ ಎಂದು ಕಾಲಿನ್ಸ್ ಅಭಿಪ್ರಾಯ ಪಡುತ್ತಾರೆ.
ಹಾಗೆಂದ ಮಾತ್ರಕ್ಕೆ, ಅವರ ಕೃತಿಯನ್ನು ಎಲ್ಲರೂ ಹೊಗಳಿದರು ಎಂದೇನಲ್ಲ. ದಿ ಟೈಮ್ ಬೈಂಡ್ ತೀವ್ರ ಟೀಕೆಗೂ ಒಳಗಾಗಿದೆ. ಹಾಕ್ಸಚೈಲ್ಡ್ ಅವರ ವಾದ ಕುಟುಂಬ ಸ್ನೇಹಿ ಉದ್ಯೋಗ ನೀತಿಯನ್ನು ದುರ್ಬಲಗೊಳಿಸುತ್ತದೆ, ಉದ್ಯೋಗಸ್ಥ ಮಹಿಳೆಯರು ಭಾವನಾತ್ಮಕವಾಗಿ ತಮ್ಮ ಮಕ್ಕಳ ಕೈಬಿಡುತ್ತಿದ್ದಾರೆಂಬ ಕೆಟ್ಟ ಅಭಿಪ್ರಾಯ ಮೂಡಿಸುತ್ತದೆ ಎಂಬ ಆರೋಪಗಳಿವೆ. ಅಲ್ಲದೇ, ಕಾರ್ಪೋರೇಟ್ ಸಂಘಟನೆಯ ವಿರುದ್ಧದ ಮಹಿಳಾ ಹೋರಾಟವನ್ನು ತಪ್ಪಾಗಿ ಅರ್ಥೈಸುತ್ತದೆ, ಉದ್ಯೋಗಸ್ಥ ಮಹಿಳೆಯನ್ನು ವೈಯಕ್ತಿಕವಾಗಿ ಜವಾಬ್ದಾರಿ ಮಾಡುವುದರ ಮೂಲಕ ಸಾಮಾಜಿಕ ಅಂಶಗಳನ್ನು ಕಡೆಗಣಿಸಲಾಗಿದೆ ಎಂಬ ಟೀಕೆ ಕೂಡ ಇರುವುದು. ಈ ಟೀಕೆಗಳನ್ನು ಮಾಡಿದವರಲ್ಲಿ ಮಹಿಳಾವಾದಿಗಳಿದ್ದಾರೆ, ಚಿಂತಕರಿದ್ದಾರೆ ಮತ್ತು ಸಮಾಜಶಾಸ್ತ್ರಜ್ಞರೂ ಕೂಡ ಇರುವರು. “ನನ್ನನ್ನು ಟೀಕಿಸುವರು ಅನಿರೀಕ್ಷಿತ ವಾಸ್ತವತೆಗಳ ಕಡೆ ಗಮನ ಹರಿಸದೇ, ಕಣ್ಣು ಮುಚ್ಚಿದ್ದಾರೆ ಹಾಗೂ ಈ ವಾಸ್ತವತೆಗಳ ಬಗ್ಗೆ ಅವರಿಗೆ ಭಯವಿದೆ” ಎಂಬ ಒಂದೇ ಉತ್ತರವನ್ನು ಹಾಕ್ಸಚೈಲ್ಡ್ ತಮ್ಮ ಟೀಕಾಕಾರರಿಗೆ ನೀಡಿದ್ದಾರೆ.
ಈ ಟೀಕೆಗಳ ಮೂಲವನ್ನು ಸಮಾಜಶಾಸ್ತ್ರದ ಬೇರುಗಳಲ್ಲಿಯೇ ಕಾಣಬಹುದು. ಏಕೆಂದರೆ, ಸಮಾಜಶಾಸ್ತ್ರವು ಎರಡು ವಿರುದ್ಧ ಧೃವಗಳಲ್ಲಿರುವ ಬದ್ಧತೆಗಳಿಂದ ಪ್ರೇರೇಪಿತವಾಗಿರುವುದು. – ಸಮಾಜಶಾಸ್ತ್ರೀಯ ನೋಟದ ಬದ್ಧತೆ ಮತ್ತು ಸಾಮಾಜಿಕ ಕಾರ್ಯಕರ್ತರ ಬದ್ಧತೆ. ಇವೆರೆಡೂ ನಿರಂತರವಾಗಿ ವಿರೋಧಿ ಬಣಗಳಾಗಿಯೇ ಇರುತ್ತವೆ. ಈ ಆಂತರಿಕ ಹೋರಾಟ ನಡೆಯುತ್ತಲೇ ಇರುತ್ತವೆ. ಸಮಾಜಶಾಸ್ತ್ರಜ್ಞರು ಈ ಎರಡೂ ವಿರದ್ಧ ಬಣಗಳ ಮಧ್ಯೆ ನಿಂತಿರುವರು. ಕಾಲಿನ್ಸ್ ಅವರ ಪ್ರಕಾರ ಇವೆರೆಡರಲ್ಲಿ ಯಾವುದಾದರು ಒಂದನ್ನು ಸಮಾಜಶಾಸ್ತ್ರಜ್ಞರು ಆಯ್ಕೆಮಾಡಿಕೊಳ್ಳ ಬೇಕಾದರೆ, ಸಮಾಜಶಾಸ್ತ್ರೀಯ ನೋಟವನ್ನು ಆಯ್ದುಕೊಳ್ಳುವುದು ಉತ್ತಮ. ಸಮಾಜಶಾಸ್ತ್ರೀಯ ನೋಟ ಕಳೆದುಕೊಂಡರೆ, ಎಲ್ಲವನ್ನೂ ಕಳೆದುಕೊಂಡಂತೆ. ಸಮಾಜಶಾಸ್ತ್ರೀಯ ನೋಟವನ್ನು ಕಳೆದುಕೊಂಡರೆ ಸಾಮಾಜಿಕ ಕಾರ್ಯಕರ್ತರ ಸೃಜನಶೀಲತೆ ಸತ್ತುಹೋಗುವುದು.
ಅದೃಷ್ಟವೆಂದರೆ, ಈ ಹೋರಾಟ ಕೇವಲ ಬೌದ್ಧಿಕ ನೆಲೆಯಲ್ಲಿರುವುದು. ಇದರಿಂದಾಗಿ ಸಮಾಜಶಾಸ್ತ್ರದಲ್ಲಿ ಅಗಾಧವಾದ ಶಕ್ತಿ ಸುಪ್ತ ಸ್ವರೂಪದಲ್ಲಿ ಲಭ್ಯವಿರುವುದು. ಈ ಎರಡು ಬದ್ಧತೆಗಳು ವಿರುದ್ಧ ಸ್ವರೂಪದ್ದಾಗಿದ್ದರೂ ಬೌದ್ಧಿಕ ನೆಲೆಯಲ್ಲಿ ಕಾಣಬರುವುದರಿಂದ, ಅವುಗಳ ಒಟ್ಟು ಪರಿಣಾಮ ಬಹು ಉಪಯುಕ್ತಕರವಾಗಿದೆ. ಸಮಾಜಶಾಸ್ತ್ರೀಯ ನೋಟದೊಡನೆ, ಸಾಮಾಜಿಕ ಬದ್ಧತೆಯನ್ನೂ ಹೊಂದಿದ್ದರೆ ಒಳ್ಳೆಯದು. ಬಹುಷಃ ಬಹುಪಾಲು ಜನರಲ್ಲಿ ಈ ಎರೆಡರ ವಿವಿಧ ಮಟ್ಟದ ಸಂಮಿಶ್ರಣವನ್ನು ಮಾತ್ರ ನಾವು ಕಾಣಬಹುದು. ಏಕೆಂದರೆ, ತೀವ್ರವಾದ ಆಸಕ್ತಿಯಿರುವ ಕೆಲವು ಭಕ್ತರಿಗೆ ಮಾತ್ರ ಸಮಾಜಶಾಸ್ತ್ರೀಯ ನೋಟ ಲಭ್ಯವಾಗಬಹುದು. ಇವೆರೆಡರ ನಡುವಿನ ಸೀಮೆ ತೆಳುವಾಗಿರುವುದರಿಂದ, ಪರಸ್ಪರರ ದೃಷ್ಟಿಕೋಣವನ್ನು ಪುರಸ್ಕರಿಸುವ, ಬೆಳೆಸಿಕೊಳ್ಳುವ ಅವಕಾಶಗಳು ವಿಪುಲವಾಗಿವೆ.
ಆಧಾರ
Collins, Randall 1998 Sociological Eye and its Blinders, Contemporary Sociology, Vol 27, No. 1 (Jan), Pp. 2-7
Comments